ಚಿಕ್ಕಬಳ್ಳಾಪುರ: ನಿಲ್ಲಿಸಿದ್ದ ಬಸ್ ನಲ್ಲಿಟ್ಟಿದ್ದ 55 ಲಕ್ಷ ರೂ. ಹಣ ದೋಚಿ ಪರಾರಿಯಾಗಿದ್ದ ಖದೀಮರ ಗುಂಪಿನ ಓರ್ವನನ್ನು ಬಂಧಿಸುವಲ್ಲಿ ಪೊಲೀಸರು ಕೊನೆಗೂ ಯಶಸ್ವಿಯಾಗಿದ್ದಾರೆ.
ಊಟಕ್ಕೆ ನಿಲ್ಲಿಸಿದ್ದ ವೇಳೆ ಬೆಂಗಳೂರು-ಹೈದರಾಬಾದ್ KSRTC ಎಸಿ ಸ್ಲೀಪರ್ ಬಸ್ನಲ್ಲಿದ್ದ 55 ಲಕ್ಷ ರೂ. ಹಣ ದೋಚಿದ್ದ ಗ್ಯಾಂಗ್ ನ ಓರ್ವನ ಬಂಧನವಾಗಿದ್ದು, ಉಳಿದ ಮೂವರಿಗಾಗಿ ಶೋಧ ಕಾರ್ಯ ನಡೆಯುತ್ತಿದೆ. ಕಳುವಾಗಿದ್ದ ಹಣವನ್ನು ಬಂಧಿತನಿಂದ ಜಪ್ತಿ ಮಾಡಲಾಗಿದೆ. ಬಂಧಿತ ಆರೋಪಿಗಳು ಮಧ್ಯಪ್ರದೇಶದ ಮೂಲದವರು ಎನ್ನಲಾಗಿದೆ.
ಮಧ್ಯ ಪ್ರದೇಶದಲ್ಲಿ ಆರೋಪಿ ಅಸ್ಲಂ ಖಾನ್ ಎಂಬಾತನನ್ನು ಬಂಧಿಸಲಾಗಿದ್ದು, ಕದ್ದ ಹಣವನ್ನೂ ವಶಕ್ಕೆ ಪಡೆಯಲಾಗಿದೆ. ಆತನಿಗೆ ಸಹಕಾರ ನೀಡಿದ್ದ ಮಧ್ಯ ಪ್ರದೇಶದ್ದೇ ಮೂಲದವರಾದ ಮನೀರ್ ಖಾನ್, ಅಭ್ಯಾಖಾನ್ ಮತ್ತು ಶೇರು ಪರಾರಿಯಾಗಿದ್ದು ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.
ಬಸ್ನಲ್ಲಿ ಪ್ರಯಾಣಿಸುವವರ ಬೆಲೆಬಾಳುವ ವಸ್ತು, ಚಿನ್ನಾಭರಣ, ಹಣ ಕಳ್ಳತನ ಮಾಡುವುದೇ ಈ ಗ್ಯಾಂಗ್ ನ ಕೆಲಸವಾಗಿತ್ತು. ಚಿಕ್ಕಬಳ್ಳಾಪುರದ ಜಿಲ್ಲೆಯ ಬೀಚಗಾನಹಳ್ಳಿ ಕ್ರಾಸ್ ಬಳಿ ಬಾಡಿಗೆಗೆ ಇವರು ರೂಮ್ ಕೂಡ ಪಡೆದಿದ್ದರು. ಕದ್ದ ಹಣವನ್ನು ಇಲ್ಲೇ ಇಟ್ಟು ಆರೋಪಿಗಳು ಮಧ್ಯಪ್ರದೇಶಕ್ಕೆ ತೆರಳಿದ್ದರು. ಹೀಗಾಗಿ ಹಣ ಸೇಫ್ ಆಗಿಯೇ ಉಳಿದಿತ್ತು ಎನ್ನಲಾಗಿದೆ.
ಡಿ. 8ರಂದು ಬೆಂಗಳೂರಿನಿಂದ ಹೈದರಾಬಾದ್ ಗೆ ತೆರಳುತ್ತಿದ್ದ ಸಾರಿಗೆ ಬಸ್ ನಲ್ಲಿ ವೆಂಕಟೇಶ್ವರ್ ರಾವ್ ಬ ಪ್ರಯಾಣಿಕರು ಹಣದೊಂದಿಗೆ ಪ್ರಯಾಣಿಸುತ್ತಿದ್ದರು. ಬಿಲ್ಡಿಂಗ್ ಮಾರಿದ್ದ 55 ಲಕ್ಷ ರೂ. ಹಣವನ್ನು ವೆಂಕಟೇಶ್ವರ್ ರಾವ್ ತೆಗೆದುಕೊಂಡು ಹೋಗುತ್ತಿದ್ದರು ಎನ್ನಲಾಗಿದೆ.
ಚಿಕ್ಕಬಳ್ಳಾಪುರ ತಾಲೂಕಿನ ಅರೂರು ಗ್ರಾಮದ ಹತ್ತಿರ ಊಟಕ್ಕೆಂದು ಬಸ್ ನಿಲ್ಲಿಸಿದಾಗ ವೆಂಕಟೇಶ್ವರ್ ರಾವ್ ಕೂಡ ಊಟಕ್ಕೆಂದು ಇಳಿದಿದ್ದಾರೆ. ಆಗ ಕಾರಿನಲ್ಲಿ ಬಂದ ವ್ಯಕ್ತಿ ಸೀದಾ ಬಸ್ಗೆ ನುಗ್ಗಿ ಬ್ಯಾಗ್ ತೆಗೆದುಕೊಂಡು ಹೋಗಿದ್ದಾನೆ ಎಂದು ಸಹ ಪ್ರಯಾಣಿಕರು ದೂರಿದ್ದರು. ಈ ಕುರಿತು ವೆಂಕಟೇಶ್ವರ್ ರಾವ್ ದೂರು ದಾಖಲಿಸಿದ್ದರು. ಪ್ರಕರಣ ಬೇಧಿಸಿದ ಪೊಲೀಸರು ಆರೋಪಿ ಬಂಧಿಸಿ, ಮೂವರಿಗಾಗಿ ಬಲೆ ಬೀಸಿದ್ದಾರೆ. ಅಲ್ಲದೇ, ಹಣ ವಶಕ್ಕೆ ಪಡೆದಿದ್ದಾರೆ.
