ಚುನಾವಣೆಯ ಬಗ್ಗೆ ಯೋಚನೆ ಮಾಡುವವರು ರಾಜಕಾರಣಿಯಾಗಿರುತ್ತಾರೆ. ಅಭಿವೃದ್ಧಿ ಹಾಗೂ ದೂರದೃಷ್ಟಿಯ ಬಗ್ಗೆ ಯೋಚಿಸುವವರು ಮುತ್ಸದ್ದಿಗಳಾಗಿರುತ್ತಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಬಾಬು ಜಗಜೀವನರಾಮ್‌ ಭವನದಲ್ಲಿ ಆಯೋಜಿಸಲಾಗಿದ್ದ ನಾಡಪ್ರಭು ಕೆಂಪೇಗೌಡರ 516 ನೇ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ತಮ್ಮ ಸರ್ಕಾರ ಆದಿಚುಂಚನಗಿರಿ ಸಂಸ್ಥಾನದ ಪೀಠಾಧ್ಯಕ್ಷರಾದ ಶ್ರೀ ನಿರ್ಮಲಾನಂದ ನಾಥ ಸ್ವಾಮೀಜಿಯವರ ಜೊತೆ ಸಮಾಲೋಚನೆ ನಡೆಸಿ ಕೆಂಪೇಗೌಡ ಜಯಂತಿ ಆಚರಣೆಯನ್ನು ಜಾರಿಗೆ ತಂದಿದೆ.

ಕೆಂಪೇಗೌಡ ಅಭಿವೃದ್ಧಿ ಪ್ರಾಧಿಕಾರ ರಚನೆ ಮಾಡಿ 5 ಎಕರೆ ಜಾಗವನ್ನು ಮಂಜೂರು ಮಾಡಲಾಗಿದೆ. ಅಲ್ಲಿ ಕೆಂಪೇಗೌಡ ಭವನವನ್ನು ನಿರ್ಮಾಣ ಮಾಡಲಾಗುತ್ತಿದೆ. ಇಂದು ಗುದ್ದಲಿಪೂಜೆ ನೆರವೇರಿಸಲಾಗಿದ್ದು, ತಮ ಸರ್ಕಾರದ ಅವಧಿಯಲ್ಲಿ ಭವನ ಉದ್ಘಾಟಿಸಲಾಗುವುದು ಎಂದರು.

ಕೆಂಪೇಗೌಡರು ಎಲ್ಲಾ ಜನರನ್ನು ಒಳಗೊಳ್ಳುವ ಆಡಳಿತ ನೀಡಿದರು. ಸಮಷ್ಠಿ ಸಮಾಜ ನಿರ್ಮಾಣಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡಿದರು. ಎಲ್ಲಾ ಜನರನ್ನು ಒಟ್ಟಿಗೇ ತೆಗೆದುಕೊಂಡು ಹೋಗುವ ಅವರ ಆಶಯವನ್ನು ನಮ ಸರ್ಕಾರವೂ ಮುಂದುವರೆಸಿದೆ.

ವಿಜಯನಗರ ಸಾಮ್ರಾಜ್ಯದ ಹಂಪಿಯಂತೆ ಬೆಂಗಳೂರು ಬೆಳೆಯಬೇಕೆಂದು 16ನೇ ಶತಮಾನದಲ್ಲೇ ಸಾಮಂತರಾಗಿದ್ದ ಕೆಂಪೇಗೌಡರು ಬೆಂಗಳೂರಿಗೆ ಅಡಿಪಾಯ ಹಾಕಿದರು. ಅದರಂತೆ ಇಂದು ಏಷ್ಯಾದಲ್ಲೇ ಬೆಂಗಳೂರು ವೇಗವಾಗಿ ಬೆಳೆಯುತ್ತಿರುವ ನಗರವಾಗಿ ಗುರುತಿಸಿಕೊಂಡಿದೆ. ಸಿಲಿಕಾನ್‌ ವ್ಯಾಲಿ ಆಫ್‌ ಇಂಡಿಯಾ, ಸ್ಟಾರ್ಟ್‌ಅಪ್‌ ಕ್ಯಾಪಿಟಲ್‌, ಶಿಕ್ಷಣ, ಆರೋಗ್ಯದ ಹಬ್‌ ಆಗಿ ಅಭಿವೃದ್ಧಿಯಾಗಿದೆ ಎಂದು ಹೇಳಿದರು.

ಕೆಂಪೇಗೌಡರು ವೃತ್ತಿ ಆಧಾರಿತವಾಗಿ ಜನರಿಗೆ ಬಡಾವಣೆಗಳನ್ನು ನಿರ್ಮಿಸಿಕೊಟ್ಟಿದ್ದರು. ಕೆಂಪೇಗೌಡರ ದೃರದೃಷ್ಟಿಯಿಂದಾಗಿ ಬೆಂಗಳೂರಿಗೆ ವಿಶ್ವಮಾನ್ಯತೆ ದೊರೆತಿದೆ. ಅದನ್ನು ಇನ್ನಷ್ಟು ಅಭಿವೃದ್ಧಿಪಡಿಸುವುದ ನಮ ಸರ್ಕಾರದ ಜವಾಬ್ದಾರಿ ಎಂದರು. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನನಿಲ್ದಾಣ ನಾಮಕರಣ ಮಾಡಿದ್ದು ತಮದೇ ಸರ್ಕಾರ. ಕಿತ್ತೂರು ರಾಣಿ ಚೆನ್ನಮ, ಕೃಷ್ಣ ಜಯಂತಿ, ಮಹಾವೀರ ಜಯಂತಿ ಸೇರಿದಂತೆ 33 ಜಯಂತಿಗಳನ್ನು ಸರ್ಕಾರ ಆಚರಣೆ ಮಾಡುತ್ತಿದೆ. ಅದರಲ್ಲಿ ಹೆಚ್ಚಿನ ಜಯಂತಿಗಳನ್ನು ನಮ ಸರ್ಕಾರವೇ ಜಾರಿ ಮಾಡಿದೆ ಎಂದು ಹೇಳಿದರು.

ಕೆಂಪೇಗೌಡರ ಬಗ್ಗೆ ನಮಗೆ ಅಗಾಧ ಗೌರವ ಇದೆ. ಅವರ ಆಡಳಿತದಿಂದ ಸ್ಫೂರ್ತಿ ಪಡೆದು ಸರ್ವರಿಗೂ ನ್ಯಾಯ ದೊರಕಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ ಎಂದರು. ಇದೇ ವೇಳೆ ಭಾರತೀಯ ವಿಜ್ಞಾನ ಸಂಸ್ಥೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನನಿಲ್ದಾಣ, ಕರ್ನಾಟಕ ಸಾಬೂನು ಮತ್ತು ಮಾರ್ಜಕ ಸಂಸ್ಥೆಗೆ ಅಂತಾರಾಷ್ಟ್ರೀಯ ಪ್ರಶಸ್ತಿ ನೀಡಿ ಸನಾನಿಸಲಾಯಿತು.

ಸುತ್ತೂರು ಮಹಾ ಸಂಸ್ಥಾನದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಆದಿಚುಂಚನಗಿರಿ ಮಹಾಸಂಸ್ಥಾನದ ಡಾ.ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ, ಸ್ಫಟಿಕಪುರಿ ಮಹಾಸಂಸ್ಥಾನದ ಶ್ರೀ ನಂಜಾವದೂತ ಸ್ವಾಮೀಜಿ, ವಿಶ್ವ ಒಕ್ಕಲಿಗರ ಮಹಾ ಸಂಸ್ಥಾನ ಮಠದ ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು.

ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌, ಸಚಿವರಾದ ಕೃಷ್ಣಾಭೈರೇಗೌಡ, ಕೆ.ಜೆ.ಜಾರ್ಜ್‌, ಶಿವರಾಜ್‌ ತಂಗಡಗಿ, ಕೆ.ಎಚ್‌.ಮುನಿಯಪ್ಪ, ಎಚ್‌.ಸಿ.ಮಹದೇವಪ್ಪ, ಶಾಸಕರಾದ ಮುನಿರತ್ನ, ಎನ್‌.ಎ.ಹ್ಯಾರಿಸ್‌‍, ಎಸ್‌‍.ಟಿ.ಸೋಮಶೇಖರ್‌, ಎ.ಸಿ.ಶ್ರೀನಿವಾಸ್‌‍, ಎಚ್‌.ಸಿ.ಬಾಲಕೃಷ್ಣ, ವಿಧಾನಪರಿಷತ್‌ ಸದಸ್ಯರಾದ ನಾಗರಾಜ್‌ ಯಾದವ್‌, ಪುಟ್ಟಣ್ಣ ಮತ್ತಿತರರು ಉಪಸ್ಥಿತರಿದ್ದರು.

Share.
Leave A Reply