ಕಲ್ಯಾಣ ಕರ್ನಾಟಕ ಭಾಗದ ಶೈಕ್ಷಣಿಕ ಕ್ರಾಂತಿಯ ಹರಿಕಾರ.. ಶರಣರ ನಾಡು ಕಲಬುರಗಿಯ ಮಹಾದಾಸೋಹಿ, ಕಲಬುರಗಿ ಜನರ ಆರಾಧ್ಯ ದೈವ ಶ್ರೀ ಶರಣಬಸಪ್ಪ ಅಪ್ಪ ಲಿಂಗೈಕ್ಯರಾಗಿದ್ದಾರೆ. ತಮ್ಮ ಕೊನೆಯಾಸೆಯಂತೆ ಶರಣಬಸವೇಶ್ವರರ ದರ್ಶನ ಪಡೆದು ಕೊನೆಯುಸಿರೆಳೆದಿದ್ದಾರೆ. 90 ವರ್ಷದ ಶರಣಬಸಪ್ಪ ಅಪ್ಪ ಅವರು ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಕಲಬುರಗಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು.

ಕಲಬುರಗಿಯ ಶ್ರೀ ಶರಣಬಸವೇಶ್ವರ ಮಹಾಸಂಸ್ಥಾನ ಪೀಠದ 8ನೇ ಪೀಠಾಧಿಪತಿ ಶರಣಬಸಪ್ಪ ಅಪ್ಪ ಕಳೆದ ತಿಂಗಳು ಜುಲೈ 26 ರಂದು ವಯೋಸಹಜ ಕಾಯಿಲೆ ಮತ್ತು ನ್ಯುಮೋನಿಯಾ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಆದ್ರೆ ಮಹಾಸಂಸ್ಥಾನಕ್ಕೆ ಬಂದು ಸಾವಿರಾರು ಭಕ್ತರ ಸಮ್ಮುಖದಲ್ಲಿ ಕೊನೆಯುಸಿರೆಳೆದಿದ್ದಾರೆ. ಸಮಾಜ ಸೇವೆಗೆ ಹೆಸರಾಗಿದ್ದ ಶರಬಸಪ್ಪ ಅಪ್ಪಾಜಿ ಕಲ್ಯಾಣ ಕರ್ನಾಟಕ ಭಾಗದ ಆರಾಧ್ಯ ದೈವ.. ಕೋಟಿ ಕೋಟಿ ಜನರ ಬಾಳಲ್ಲಿ ಶಿಕ್ಷಣ ಕ್ರಾಂತಿ ಮಾಡಿದ್ದ ಅಪ್ಪಾಜಿ ಈಗ ಕಾಲನ ಕರೆಗೆ ಓಗೊಟ್ಟು ಹೋಗಿದ್ದಾರೆ.. ಆದ್ರೆ, ಅವರ ಬದುಕೇ ಒಂದು ಅದ್ಭುತ ಪಯಣ..

ಕಲ್ಯಾಣ ಕರ್ನಾಟಕಕ್ಕೆ ಶಿಕ್ಷಣದ ಬೆಳಕು ಚೆಲ್ಲಿದ್ದ ಅಪ್ಪಾಜಿ.. 62 ಶಿಕ್ಷಣ ಸಂಸ್ಥೆ..!
ಕಲಬುರಗಿ ಮತ್ತು ಕಲ್ಯಾಣ ಕರ್ನಾಟಕ ಭಾಗದಲ್ಲಿ ಶಿಕ್ಷಣದ ಬೆಳವಣಿಗೆಗೆ ಶರಣಬಸಪ್ಪ ಅಪ್ಪಾ ಅಪಾರ ಕೊಡುಗೆ ನೀಡಿದ್ದಾರೆ. ಶರಣಬಸವೇಶ್ವರ ವಿಶ್ವವಿದ್ಯಾಲಯ ಸೇರಿದಂತೆ 60ಕ್ಕೂ ಹೆಚ್ಚು ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.. ಶರಣಬಸವೇಶ್ವರ ಸಂಸ್ಥಾನವು ದಾಸೋಹಕ್ಕೆ ಹೆಸರುವಾಸಿಯಾಗಿದ್ದು, ಡಾ. ಅಪ್ಪ ಅವರು ಅನ್ನ ದಾಸೋಹದ ಜೊತೆಗೆ ಶಿಕ್ಷಣ ದಾಸೋಹವನ್ನೂ ಮುಂದುವರೆಸಿಕೊಂಡು ಬಂದಿದ್ದರು. ಕೋಟಿ ಕೋಟಿ ವಿದ್ಯಾರ್ಥಿಗಳಿಗೆ ಶಿಕ್ಷಣದ ದಾರಿ ದೀಪವಾಗಿದ್ದರು.

ಶಿಕ್ಷಣ ಪ್ರೇಮಿಯಾಗಿದ್ದ ಶ್ರೀ ಶರಣಬಸಪ್ಪ ಅಪ್ಪ..!
1935ರ ನವೆಂಬರ್‌ 14ರಂದು ಜನಿಸಿದ್ದ ಶರಣ ಬಸಪ್ಪ ಅಪ್ಪ, ಬಾಲ್ಯದಿಂದಲೂ ಶಿಕ್ಷಣ ಪ್ರೇಮಿಯಾಗಿದ್ದರು. ತತ್ವಶಾಸ್ತ್ರದಲ್ಲಿ ಪದವೀಧರರಾಗಿದ್ರು. 1983ರಲ್ಲಿ ಶರಣಬಸವೇಶ್ವರ ಸಂಸ್ಥಾನದ 8ನೇ ಪೀಠಾಧಿಪತಿಯಾಗಿ ಅಧಿಕಾರ ವಹಿಸಿಕೊಂಡಿದ್ದರು. ಕಳೆದ ವರ್ಷ ನವೆಂಬರ್‌ನಲ್ಲಿ ಮಹಾಯೋಗಿಯ 90ನೇ ಹುಟ್ಟುಹಬ್ಬ ಆಚರಿಸಲಾಗಿತ್ತು. ಶರಣ ಬಸಪ್ಪ ಅಪ್ಪ ಕಾಲದಲ್ಲಿ ಕಲ್ಯಾಣ ಕರ್ನಾಟಕ ಭಾಗದಲ್ಲಿ ಶಿಕ್ಷಣದ ಬೆಳಕು ಚೆಲ್ಲಿದ್ದರು.. ಇವರ ಶಿಕ್ಷಣ ಸಂಸ್ಥೆಗಳಲ್ಲಿ ಓದಿ ಕೋಟ್ಯಂತರ ವಿದ್ಯಾರ್ಥಿಗಳು, ಈಗ ಉನ್ನತ ಹುದ್ದೆಯಲ್ಲಿ ಇದ್ದಾರೆ.

ಕಲಬುರಗಿಯಲ್ಲೇ ಓದಿ ಶಿಕ್ಷಣದ ದೊರೆಯಾಗಿದ್ದ ಸಂತ!
14ನೇ ವಯಸ್ಸಿನಲ್ಲಿ ಡಾ.ಅಪ್ಪಾ ಮುಗುಳನಾಗಾವಿ ಪಟ್ಟದೇವರು ಶ್ರೀ ಸಿದ್ದಲಿಂಗ ಶಿವಾಚಾರ್ಯರಿಂದ ಧಾರ್ಮಿಕ ತರಬೇತಿ ಪಡೆದಿದ್ದರು. ತಮ್ಮ ಪ್ರಾಥಮಿಕ, ಪ್ರೌಢ ಶಿಕ್ಷಣ, ಪಿಯು ಮತ್ತು ಬಿಎ ಪದವಿ ಶಿಕ್ಷಣವನ್ನು ಕಲಬುರಗಿಯಲ್ಲಿ ಮುಗಿಸಿದ್ದರು. ಬಳಿಕ ಧಾರವಾಡ ವಿಶ್ವವಿದ್ಯಾಲಯದಲ್ಲಿ ಎಂಎ ತತ್ವಜ್ಞಾನ ಅಧ್ಯಯನ ಪೂರ್ಣ‌ಗೊಳಿಸಿದ್ರು. ಧಾರವಾಡದಲ್ಲಿ 1953ರಲ್ಲಿ ಎಂಎ ತತ್ವಜ್ಞಾನ ಅಧ್ಯಯನ ಮುಗಿಸಿ ಕಲಬುರಗಿಗೆ ವಾಪಸ್ ಬಂದರು. ಕೊನೆಗೆ ವೀರಶೈವ ತತ್ವಜ್ಞಾನ ಜೊತೆಗೆ ಸಂಸ್ಕೃತ ಅಧ್ಯಯನ ಮಾಡಿದರು. ವಚನಗಳ ಮೇಲೆ ವಿಶೇಷ ಆಸಕ್ತಿ ಹೊಂದಿದ್ದ ಅವರು, ವಚನಗಳ ತಲಸ್ಪರ್ಷಿಯ ಅಧ್ಯಯನ ಮಾಡಿದ್ದರು. ಬುದ್ದ, ಬಸವ, ಮಹಾವೀರ, ಶರಣರ ಹಾಗೂ ದಾಸರ ವಿಚಾರಗಳನ್ನ ಬದುಕಿನಲ್ಲಿ ಅಳವಡಿಸಿಕೊಂಡಿದ್ದರು. 1972-74ರ ವರೆಗೆ ಪ್ರತಿಷ್ಠಿತ ಹೈದ್ರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಧಾರವಾಡದ ಕರ್ನಾಟಕ ವಿವಿಯ ಸಿಂಡಿಕೇಟ್ ಸದಸ್ಯರೂ ಆಗಿಯೂ ಸೇವೆ ಸಲ್ಲಿಸಿದ್ದರು.

ಅನ್ನದಾಸೋಹ, ಶಿಕ್ಷಣ ದಾಸೋಹದ ಹರಿಕಾರ!
ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿಯಾಗಿದ್ದ ಡಾ.ಶರಣಬಸವಪ್ಪ ಅಪ್ಪ, ಶಿಕ್ಷಣ ಸಂಸ್ಥೆಗಳಿಗೆ ಭೇಟಿ ಕೊಟ್ಟು ವಿದ್ಯಾರ್ಥಿಗಳ ಕಲಿಕೆ ಗಮನಿಸುತ್ತಿದ್ದರು. ಶಿಕ್ಷಣವನ್ನೇ ಉಸಿರಾಗಿಸಿಕೊಂಡಿದ್ದ ಅಪ್ಪ, ಅನ್ನ ದಾಸೋಹ ಜೊತೆಗೆ ಶಿಕ್ಷಣ ದಾಸೋಹ ನೀಡಿದ್ದರು. ಕಲ್ಯಾಣ ನಾಡಿನಲ್ಲಿ ಶಿಕ್ಷಣ ಕ್ರಾಂತಿ ಮಾಡಿದ ಕೀರ್ತಿ ಅವರಿಗೆ ಸಲ್ಲುತ್ತದೆ. 1983ರಲ್ಲಿ ಶರಣಬಸವೇಶ್ವರ ಸಂಸ್ಥಾನದ 8ನೇ ಪಿಠಾಧಿಪತಿಯಾಗಿ ಅಧಿಕಾರ ಸ್ವೀಕಾರ ಮಾಡಿದ್ದರು.

82ನೇ ವಯಸ್ಸಿನಲ್ಲಿ ತಂದೆಯಾಗಿದ್ದ ಶರಣಬಸಪ್ಪ ಅಪ್ಪ!
ಶರಣ ಬಸಪ್ಪ ಅಪ್ಪಾಗೆ ಇಬ್ಬರು ಪತ್ನಿಯರು. ಮೊದಲ ಪತ್ನಿ ಕೋಮರಾ ಅವರಿಗೆ ಐವರು ಹೆಣ್ಣು ಮಕ್ಕಳು, ಎರಡನೇ ಪತ್ನಿ ದಾಕ್ಷಾಯಿಣಿ ಅವರಿಗೆ ಮೂವರು ಹೆಣ್ಣು ಮಕ್ಕಳಿದ್ದರು. ಅದಾದ ಬಳಿಕ ತಮ್ಮ 82ನೇ ವಯಸ್ಸಿಗೆ ಅವರು ತಮ್ಮ ದ್ವಿತೀಯ ಪತ್ನಿ ದಾಕ್ಷಾಯಿಣಿ ಅವರಿಂದ ಪುತ್ರನನ್ನು ಪಡೆದು ಆ ಮೂಲಕ ದೊಡ್ಡಮಟ್ಟದಲ್ಲಿ ಸುದ್ದಿಯಾಗಿದ್ದರು. ಮುಂಬೈನ ಖಾಸಗಿ ಆಸ್ಪತ್ರೆಯಲ್ಲಿ ಮಗು ಜನನದ ವಿಚಾರ ಗೊತ್ತಾಗ್ತಿದ್ದಂತೆ ಕಲಬುರಗಿಯ ಶರಣ ಬಸವೇಶ್ವರ ಮಠದ ಮುಂದೆ ಜಮಾಯಿಸಿದ್ದ ಸಾವಿರಾರು ಭಕ್ತರು ಕುಣಿದು ಕುಪ್ಪಳಿಸಿದ್ರು.. ಮಠಕ್ಕೆ ಉತ್ತರಾಧಿಕಾರಿ ಸಿಕ್ಕನೆಂದು ಸಂಭ್ರಮಿಸಿ ಪಟಾಕಿ ಹೊಡೆದು, ಸಿಹಿ ಹಂಚಿ ಸಂಭ್ರಮಿಸಿದ್ದರು. 2019ರ ಡಿಸೆಂಬರ್‌ 23ರಂದು ಆ ಮಗುವಿಗೆ 2 ವರ್ಷ ವಯಸ್ಸಾಗಿದ್ದಾಗ ಶರಣ ಬಸವೇಶ್ವರ ಸಂಸ್ಥಾನಕ್ಕೆ ಉತ್ತರಾಧಿಕಾರಿ ಪಟ್ಟ ಕಟ್ಟಲಾಗಿತ್ತು.

Read Also : ಶರಣಬಸಪ್ಪ ಅಪ್ಪ ಇನ್ನಿಲ್ಲ.. ಮಹಾದಾಸೋಹಿಗೆ ಆಗಿದ್ದೇನು? ಭಕ್ತರಿಗೆ ಬರಸಿಡಿಲು..!

ಇನ್ನು, 26 ಎಕರೆ ಜಮೀನಿನಲ್ಲಿ ಗೋ ಶಾಲೆ ನಿರ್ಮಾಣ ಮಾಡಿದ್ದಾರೆ. 2019ರಲ್ಲಿ ಪ್ರವಾಹ ಸಂದರ್ಭದಲ್ಲಿ ಸಿಎಂ ಪರಿಹಾರ ನಿಧಿಗೆ ಬರೋಬ್ಬರಿ 1 ಕೋಟಿ ರೂಪಾಯಿ ಹಣವನ್ನು ದಾನ ಮಾಡಿದ್ದರು. 2003ರಲ್ಲಿ ದೆಹಲಿಯ ಪಾರ್ಲಿಮೆಂಟ್ ಅವರಣದ 9ನೇ ಗೇಟ್ ಬಳಿ ಬಸವಣ್ಣನವರ ಕಂಚಿನ ಪ್ರತಿಮೆ ಸ್ಥಾಪನೆ ಮಾಡಿಸಿದ್ದ ಕೀರ್ತಿ ಇವರಿಗೆ ಸಲ್ಲುತ್ತದೆ. ಇಂತಹ ಮಹಾ ಕಾಯಕ, ಸಾಮಾಜಿಕ ಕಳಕಳಿಯ ಹರಿಕಾರ ಲಿಂಗೈಕ್ಯ ಆಗಿರೋದು ಕೋಟಿ ಕೋಟಿ ಭಕ್ತರಿಗೆ ಬರಸಿಡಿಲೇ ಬಡಿದಂತಾಗಿದೆ.. ಶಿಕ್ಷಣ ದಾಸೋಹಿಯನ್ನು ಕಳೆದುಕೊಂಡು ಕಲ್ಯಾಣ ಕರ್ನಾಟಕ ಬಡವಾಗಿದೆ.

Share.
Leave A Reply