ಬೆಳಗಾವಿ: ಚಳಿಗಾಲದ ಅಧಿವೇಶನ ಆರಂಭವಾಗಿದೆ. ಹೀಗಾಗಿ ಉತ್ತರ ಕರ್ನಾಟಕ ಭಾಗದ ಬೇಡಿಕೆಗಳು ಭಾರೀ ಸದ್ದು ಮಾಡುತ್ತಿವೆ. ಒಂದೆಡೆ ಪ್ರತ್ಯೇಕ ರಾಜ್ಯದ ಕೂಗು ಕೇಳಿ ಬರುತ್ತಿದ್ದರೆ, ಇನ್ನೊಂದೆಡೆ ಬೆಳಗಾವಿ ಜಿಲ್ಲೆಯ ವಿಭಜನೆಗೆ ಮನವಿ ಮಾಡಲಾಗುತ್ತಿದೆ.
ಹೌದು! ರಾಜ್ಯದ ದೊಡ್ಡ ಜಿಲ್ಲೆಗಳಲ್ಲಿ ಬೆಳಗಾವಿ ಮುಂಚೂಣಿಯಲ್ಲಿದೆ. ಬರೋಬ್ಬರಿ 18 ಜನ ವಿಧಾನಸಭಾ ಸದಸ್ಯರು ಈ ಕ್ಷೇತ್ರದಲ್ಲಿದ್ದಾರೆ. ಹೀಗಾಗಿ ಜಿಲ್ಲಾಡಳಿತಕ್ಕೆ ತಲೆನೋವಾಗುತ್ತಿದೆ. ಅಭಿವೃದ್ಧಿಯ ದೃಷ್ಟಿಯಿಂದ ಆಡಳಿತ ವಿಕೇಂದ್ರೀಕರಣ ಅವಶ್ಯವಾಗಿದೆ. ಈ ಹಿನ್ನೆಲೆಯಲ್ಲಿ ಹಲವು ವರ್ಷಗಳಿಂದಲೂ ಬೆಳಗಾವಿ ವಿಭಜನೆಗೆ ಆಗ್ರಹಿಸಲಾಗುತ್ತಿದೆ. ಆದರೆ, ಸಣ್ಣ ಸಣ್ಣ ಜಿಲ್ಲೆಗಳು ಒಡೆದು ಹೋಳಾಗಿವೆಯೇ ಹೊರತು, ಬೆಳಗಾವಿ ಮಾತ್ರ ವಿಭಜನೆಯಾಗುತ್ತಿಲ್ಲ.
ಕಾಂಗ್ರೆಸ್ ಶಾಸಕ ಭರಮಗೌಡ (ರಾಜು) ಕಾಗೆ ಕೆಲವು ದಿನಗಳ ಹಿಂದೆಯಷ್ಟೇ ಪ್ರಧಾನಿ, ರಾಷ್ಟ್ರಪತಿ, ರಾಜ್ಯಪಾಲರು ಹಾಗೂ ಸಿಎಂಗೆ ಪತ್ರ ಬರೆದು ಜಿಲ್ಲಾ ವಿಭಜನೆಗೆ ಮನವಿ ಮಾಡಿದ್ದರು. ಈಗ ಅಧಿವೇಶನದಲ್ಲೂ ಈ ಕುರಿತು ಚರ್ಚೆಯಾಗುತ್ತಿದೆ. ಅರಭಾವಿ ಬಿಜೆಪಿ ಶಾಸಕ ಬಾಲಚಂದ್ರ ಜಾರಕಿಹೊಳಿ ನೇತೃತ್ವದ ನಿಯೋಗವು ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ಭೇಟಿ ಮಾಡಿ ಬೆಳಗಾವಿ ಜಿಲ್ಲೆಯನ್ನು ವಿಭಜಿಸುವಂತೆ ಒತ್ತಾಯಿಸಿತು. ಬೆಳಗಾವಿಯನ್ನು ಸಣ್ಣ ಜಿಲ್ಲೆಯಾಗಿ ಉಳಿಸಿ, ಚಿಕ್ಕೋಡಿ ಮತ್ತು ಗೋಕಾಕ್ ಎಂಬ ಎರಡು ಹೊಸ ಜಿಲ್ಲೆಗಳನ್ನು ರಚಿಸುವುದು ಈ ನಿಯೋಗದ ಬೇಡಿಕೆಯಾಗಿದೆ.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಮಾತನಾಡಿ, ಆಡಳಿತ ದೃಷ್ಟಿಯಿಂದ ಬೆಳಗಾವಿ ಜಿಲ್ಲೆಯನ್ನು ವಿಭಜನೆ ಮಾಡುವುದು ಉತ್ತಮ ನಿರ್ಧಾರವಾಗಲಿದೆ. ಈ ಕುರಿತು ಸಿಎಂ ಅವರೊಂದಿಗೆ ಮಾತನಾಡಲಾಗಿದೆ. ಇಲ್ಲಿನ ಶಾಸಕರು ಒಗ್ಗಟ್ಟಿನಿಂದ ನಿರ್ಧಾರ ಕೈಗೊಳ್ಳಬೇಕಿದೆ ಎಂದಿದ್ದಾರೆ.
ಬೆಳಗಾವಿ ಜಿಲ್ಲೆಯನ್ನು ವಿಭಜಿಸಿ ಬೆಳಗಾವಿ ಮತ್ತು ಚಿಕ್ಕೋಡಿ ಎಂದು ಎರಡು ಜಿಲ್ಲೆಗಳನ್ನು ರಚಿಸುವ ವಿಚಾರದ ಬಗ್ಗೆ ಮಂಗಳೂರಿಗೆ ಹೋಗುವಾಗ ನಾನು ಮತ್ತು ಸಚಿವ ಸತೀಶ್ ಜಾರಕಿಹೋಳಿ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಚರ್ಚಿಸಿದ್ದೇವೆ ಎಂದಿದ್ದಾರೆ.
