ಬೆಂಗಳೂರು, ಜ.12: ಕಳೆದ ಐದು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಗ್ರೇಟರ್‌ ಬೆಂಗಳೂರು ಅಥಾರಿಟಿ ಚುನಾವಣೆಗೆ ಮುಹೂರ್ತ ಫಿಕ್ಸ್‌ ಆಗಿದೆ. ಜೂನ್ 30 ರೊಳಗೆ ಜಿಬಿಎ ವ್ಯಾಪ್ತಿಯಲ್ಲಿರುವ 5 ಪಾಲಿಕೆಗಳಿಗೆ ಚುನಾವಣೆ ನಡೆಸುವಂತೆ ಸುಪ್ರೀಂಕೋರ್ಟ್ ಆದೇಶ ಹೊರಡಿಸಿದೆ. ಗ್ರೇಟರ್‌ ಬೆಂಗಳೂರು ಪ್ರಾಧಿಕಾರದ ಚುನಾವಣೆ ನಡೆಸುವ ಸಂಬಂಧ ಇಂದು ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ವಿಚಾರಣೆ ನಡೆಯಿತು. ಸರ್ಕಾರದ ಪರ ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ ವಾದಿಸಿದರು. ಫೆಬ್ರವರಿ 20 ರೊಳಗಾಗಿ ವಾರ್ಡವಾರು ಅಂತಿಮ ಮೀಸಲಾತಿ ಪಟ್ಟಿ ಪ್ರಕಟಿಸಲು ಸುಪ್ರೀಂ ಕೋರ್ಟ್‌ ಸೂಚಿಸಿದೆ.

ಮಾರ್ಚ್ 16ರ ವೇಳೆಗೆ ಮತದಾರರ ಪರಿಶೀಲನೆ ಅಂತ್ಯವಾಗಲಿದೆ. ಬಳಿಕ ಎಸ್‌ಎಸ್‌ಎಲ್‌ಸಿ ಪರೀಕ್ಷೆ ನಡೆಯಲಿದೆ. ಹೀಗಾಗಿ ಮೇ ಕೊನೆ ವಾರದವರೆಗೂ ಅವಕಾಶ ನೀಡಬೇಕು ಎಂದು ಚುನಾವಣಾ ಆಯೋಗ ಮನವಿ ಮಾಡಿದೆ. ಅಂತಿಮವಾಗಿ ಸುಪ್ರೀಂಕೋರ್ಟ್ ಜೂನ್ 30 ರೊಳಗೆ ಜಿಬಿಎ ಚುನಾವಣೆ ನಡೆಸಲು ನಿರ್ದೇಶನ ನೀಡಿದೆ. ಗ್ರೇಟರ್ ಬೆಂಗಳೂರು ಅಥಾರಿಟಿಗೆ ಚುನಾವಣೆ ನಡೆಸಲು ಮತ್ತೆ ಯಾವುದೇ ಕಾಲಾವಕಾಶ ವಿಸ್ತರಣೆ ನೀಡಲ್ಲ ಎಂದು ಸುಪ್ರೀಂಕೋರ್ಟ್ ಹೇಳಿದೆ.

ಜನಪ್ರತಿನಿಧಿಗಳಿಲ್ಲದೇ ಜನರ ಅಲೆದಾಟ :
2019ರ ನಂತರ ಹಳೆಯ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ಅವಧಿಯ ಜನಪ್ರತಿನಿಧಿಗಳ ಅಧಿಕಾರ ಮುಕ್ತಾಯಗೊಂಡಿತ್ತು. ಆದರೆ, ವಾರ್ಡ್‌ಗಳ ಪುನರ್‌ ವಿಂಗಡಣೆ, ಮೀಸಲಾತಿ ಪಟ್ಟಿ ಹಾಗೂ ಕೊರೊನಾ ಕಾರಣಗಳನ್ನು ನೀಡಿ ಈ ಹಿಂದಿನ ಬಿಜೆಪಿ ಮತ್ತು ಈಗಿನ ಕಾಂಗ್ರೆಸ್ ಸರ್ಕಾರಗಳು ಚುನಾವಣೆಯನ್ನು ಮುಂದೂಡುತ್ತಾ ಬಂದಿದ್ದವು. ಚುನಾಯಿತ ಪ್ರತಿನಿಧಿಗಳಿಲ್ಲದೆ ಅಧಿಕಾರಿಗಳ ಆಡಳಿತದಲ್ಲಿದ್ದ ಬೆಂಗಳೂರಿನ ಜನರು ತಮ್ಮ ಸ್ಥಳೀಯ ಮಟ್ಟದ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ಪರದಾಡುವಂತಾಗಿತ್ತು. ಚುನಾವಣೆ ನಡೆಸುವಂತೆ ಸರ್ಕಾರದ ಮೇಲೆ ಒತ್ತಡ ಹೇರಿದರೆ, ವಿವಿಧ ತಾಂತ್ರಿಕ ಕಾರಣಗಳು ಹಾಗೂ ವಾರ್ಡ್‌ಗಳ ಪುನರ್‌ ವಿಂಗಡಣೆಯ ನೆಪವೊಡ್ಡಿ ಚುನಾವಣೆಗಳನ್ನು ಮುಂದೂಡಲಾಗಿತ್ತು. ಆದರೆ, ಇದೀಗ ಸುಪ್ರೀಂ ಕೋರ್ಟ್ ಆದೇಶ ಹೊಸ ಚೈತನ್ಯ ನೀಡಿದೆ.

Share.
Leave A Reply