ಮನೆ ಬಿಟ್ಟು ಬಂದ ಹೆಣ್ಮಕ್ಕಳು, ಬಡವರು, ಅನಾಥರು, ನೊಂದ ಯುವತಿಯರು, ಬಾಲಕಿಯರನ್ನೇ ಟಾರ್ಗೆಟ್ ಮಾಡಿ ಕೆಲಸ ಕೊಡಿಸೋದಾಗಿ ಪುಸಲಾಯಿಸಿ ಮನೆಗೆ ಕರೆದುಕೊಂಡು ಹೋಗಿ ಲಕ್ಷಾಂತರ ರೂಪಾಯಿಗೆ ಮಾರಾಟ ಮಾಡ್ತಿದ್ದ ಐನಾತಿ ಮಹಿಳೆ ಈಗ ಪೊಲೀಸರ ಅತಿಥಿಯಾಗಿದ್ದಾಳೆ.

ಹಾವೇರಿ ಜಿಲ್ಲೆಯ ಜಿಲ್ಲೆಯ ಹಾನಗಲ್ ತಾಲೂಕಿನ ಬ್ಯಾಗವಾದಿ ಗ್ರಾಮದಲ್ಲಿ ಅಪ್ರಾಪ್ತ ಬಾಲಕಿಯನ್ನು ಕೋಣೆಯಲ್ಲಿ ಕೂಡಿ ಹಾಕಿ ಚಿಂತ್ರಹಿಂಸೆ ನೀಡುತ್ತಿದ್ದ ಮಹಿಳೆಗೆ ಗ್ರಾಮಸ್ಥರು ಧರ್ಮದೇಟು ನೀಡಿರುವ ಘಟನೆ ನಡೆದಿದೆ. ಈ ಗ್ರಾಮದ ಮಹಿಳೆ ಲಕ್ಕವ್ವ ಎಂಬುವವಳು 14 ವರ್ಷದ ಅಪ್ರಾಪ್ತ ಬಾಲಕಿಯನ್ನು ರೂಮ್​ನಲ್ಲಿನ ಮಂಚದ ಕೆಳಗೆ ಕೂಡಿ ಹಾಕಿ ಲಕ್ಕವ್ವ ಚಿತ್ರಹಿಂಸೆ ಕೊಟ್ಟಿರುವುದು ಬೆಳಕಿಗೆ ಬಂದಿದೆ. ಯುವತಿಯರು ಹಾಗೂ ಬಾಲಕಿಯರನ್ನ ಮಾರಾಟ ಅಥವಾ ಮದುವೆ ಮಾಡಿಕೊಡುತ್ತಿದ್ದಳು ಎಂಬ ಆರೋಪವೂ ಕೇಳಿ ಬಂದಿದೆ. ವಿಷಯ ತಿಳಿದ ಗ್ರಾಮಸ್ಥರು ಮಹಿಳೆಗೆ ಧರ್ಮದೇಟು ಕೊಟ್ಟು ಬಾಲಕಿಯನ್ನು ರಕ್ಷಿಸಿದ್ದು, ಲಕ್ಕವ್ವಳನ್ನ ಪೊಲೀಸರಿಗೆ ಒಪ್ಪಿಸಿದ್ದಾರೆ.

ಲಕ್ಕವ್ವ ಹುಬ್ಬಳ್ಳಿ, ದಾವಣೆಗೆರೆ, ಹಾವೇರಿ, ಮತ್ತಿತರ ಬಸ್ ನಿಲ್ದಾಣಗಳಲ್ಲಿ ಓಡಾಡುತ್ತಿದ್ದ ಒಂಟಿ ಬಾಲಕಿಯರನ್ನು ಪರಿಚಯಿಸಿಕೊಂಡು, ಅವರಿಗೆ ಉದ್ಯೋಗ ಕೊಡಿಸುವುದಾಗಿ ಪುಸಲಾಯಿಸುತ್ತಿದ್ದಳು. ನಂತರ ಬಾಲಕಿಯರನ್ನು ಮನೆಗೆ ಕರೆದುಕೊಂಡು ಬರುತ್ತಿದ್ದಳು ಎನ್ನಲಾಗಿದೆ. ಈ ಬಗ್ಗೆ ಪ್ರಶ್ನಿಸಿದ್ದಕ್ಕೆ ಗ್ರಾಮಸ್ಥರ ಜೊತೆ ಲಕ್ಕವ್ವ ಜಗಳವಾಡಿದ್ದ ಎಂಬ ಆರೋಪ ಕೇಳಿಬಂದಿದೆ.

ಈ ಹಿಂದೆಯೂ ಒಬ್ಬ ಯುವತಿಯನ್ನ ಕೂಡಿ ಹಾಕಿದ ಘಟನೆ ಬೆಳಕಿಗೆ ಬಂದಿತ್ತು. ಆಗ ಮಾಹಿತಿ ತಿಳಿದ ಗ್ರಾಮಸ್ಥರು ಧರ್ಮದೇಟು ಕೊಟ್ಟು ತಿಳಿಸಿದ್ರು. ಆದ್ರೂ ಬುದ್ದಿ ಕಲಿಯದ ಲಕ್ಕವ್ವ ಮತ್ತೊರ್ವ ಬಾಲಕಿಯನ್ನ ಕೂಡಿ ಹಾಕಿ ಚಿತ್ರಹಿಂಸೆ ಕೊಟ್ಟಿರುವ ಪ್ರಕರಣ ಬೆಳಕಿಗೆ ಬಂದಿದೆ. ಈ ಕುರಿತು ಆಡೂರು ಪೊಲೀಸ್ ಠಾಣೆ ದೂರು ದಾಖಲಾಗಿದೆ.

Share.
Leave A Reply