ಚಾಮರಾಜನಗರ: ಗಸ್ತು ತಿರುಗುವಾಗ ಹುಲಿ ದಾಳಿಗೆ ಫಾರೆಸ್ಟ್ ವಾಚರ್ ಬಲಿಯಾಗಿರುವ ಘಟನೆ ನಡೆದಿದೆ.

ಈ ಘಟನೆ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಮರಳಹಳ್ಳ ವ್ಯಾಪ್ತಿಯಲ್ಲಿ ನಡೆದಿದೆ. ಸಣ್ಣ ಹೈದ (56) ಸಾನ್ನಪ್ಪಿರುವ ಸಿಬ್ಬಂದಿ ಎನ್ನಲಾಗಿದೆ. ಸ್ಥಳಕ್ಕೆ ಬಂಡೀಪುರ ಹುಲಿ ಸಂರಕ್ಷಿತಾರಣ್ಯ ಪ್ರದೇಶದ ಸಿಸಿಎಫ್ ಪ್ರಭಾಕರನ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಸಣ್ಣ ಹೈದ, ಬಂಡೀಪುರ ಟೈಗರ್ ರಿಸರ್ವ್ ಫಾರೆಸ್ಟ್ನ ಮರಳಹಳ್ಳದ ಕಳ್ಳಬೇಟೆ ತಡೆ ಶಿಬಿರದಲ್ಲಿ ವಾಚರ್ ಆಗಿ ಕೆಲಸ ಮಾಡುತ್ತಿದ್ದರು. ಅವರು ಪ್ರತಿದಿನ ಮರಳಹಳ್ಳ ಕ್ಯಾಂಪ್ ಸುತ್ತಮುತ್ತ ಗಸ್ತು ತಿರುಗುತ್ತಿದ್ದರು. ಎಂದಿನಂತೆ ತನ್ನ ಕ್ಯಾಂಪ್ನ 4 ಜನ ಸಿಬ್ಬಂದಿ ಜೊತೆ ಗಸ್ತಿಗೆ ಹೋಗಿದ್ದರು. ಹುಲ್ಲು ಬೀಜಗಳನ್ನು ಆಯುತ್ತಿದ್ದಾಗ ಹುಲಿಯೊಂದು ಏಕಾಏಕಿ ದಾಳಿ ನಡೆಸಿದೆ. ಕೂಡಲೇ ಸಿಬ್ಬಂದಿ ಕೂಗಿದ ಪರಿಣಾಮ ಹುಲಿ ಪರಾರಿಯಾಗಿದೆ, ಆದರೆ ಗಂಭೀರವಾಗಿ ಗಾಯಗೊಂಡಿದ್ದ ಸಣ್ಣ ಹೈದ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಸ್ಥಳಕ್ಕೆ ಬಂಡೀಪುರ ಟೈಗರ್ ರಿಸರ್ವ್ ಫಾರೆಸ್ಟ್ ಸಿಎಫ್ ಹಾಗೂ ಮುಖ್ಯಸ್ಥ ಪ್ರಭಾಕರನ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತ ವಾಚರ್ ಸಣ್ಣ ಹೈದ ಕಳೆದ 25 ವರ್ಷಗಳಿಂದಲೂ ಕೂಡ ಅರಣ್ಯ ಇಲಾಖೆಯ ನೌಕರನಾಗಿ ಸೇವೆ ಸಲ್ಲಿಸುತ್ತಿದ್ದರು.

Share.
Leave A Reply