ಜಿಎಸ್‌ಟಿ ನೋಟಿಸ್‌ ಬಂದಿದೆ ಎಂಬ ಕಾರಣಕ್ಕೆ ವರ್ತಕರು ಡಿಜಿಟಲ್‌ ಪಾವತಿ ಗೇಟ್‌ ವೇಗಳ ಬಳಕೆ ನಿಲ್ಲಿಸಲು ಮುಂದಾಗಿರುವ ಹಿನ್ನೆಲೆಯಲ್ಲಿ ವಾಣಿಜ್ಯ ತೆರಿಗೆ ಇಲಾಖೆಯು ಸ್ಪಷ್ಟನೆ ನೀಡಿದ್ದು, ನಗದು ವಹಿವಾಟು ಸೇರಿದಂತೆ ಯಾವುದೇ ಮಾದರಿಯಲ್ಲಿ ವ್ಯವಹಾರ ಮಾಡಿದರೂ ಜಿಎಸ್‌ಟಿ ಕಟ್ಟಲೇಬೇಕಾಗುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ಜಿಎಸ್‌ಟಿ ಕಾಯಿದೆ-2017ರ ಪ್ರಕರಣ 22ರ ನಿಯಮಗಳನ್ನು ಇಲಾಖೆಯು ಉಲ್ಲೇಖಿಸಿದ್ದು, ಸರಕುಗಳ ಪೂರೈಕೆದಾರರ ಒಟ್ಟು ವಾರ್ಷಿಕ ವಹಿವಾಟು 40 ಲಕ್ಷ ರೂ. ಮತ್ತು ಸೇವೆಗಳ ಪೂರೈಕೆದಾರರ ವಾರ್ಷಿಕ ವಹಿವಾಟು 20 ಲಕ್ಷ ರೂ. ಮೀರಿದರೆ ಜಿಎಸ್‌ಟಿ ನೋಂದಣಿ ಕಡ್ಡಾಯ. ಈ ವಹಿವಾಟಿನಲ್ಲಿ ನಗದು, ಯುಪಿಐ, ಪಿಓಎಸ್‌ ಮೆಷಿನ್‌, ಬ್ಯಾಂಕ್‌ ಖಾತೆ ಸೇರಿದಂತೆ ಎಲ್ಲಾ ವಿಧಾನದ ವಹಿವಾಟು ಕೂಡ ಸೇರುತ್ತದೆ ಎಂದು ಇಲಾಖೆಯ ಹೆಚ್ಚುವರಿ ಆಯುಕ್ತರು ಸ್ಪಷ್ಟಪಡಿಸಿದ್ದಾರೆ.

ರಾಜಿ ತೆರಿಗೆ ಪದ್ಧತಿಗೆ ಅವಕಾಶ ಕೊಟ್ಟ ಅಧಿಕಾರಿಗಳು!
ಆದರೆ, ಸಾಮಾನ್ಯ ನೋಂದಣಿ ಪಡೆದ ವರ್ತಕರಿಗೆ, ತೆರಿಗೆ ಬಾಧ್ಯತೆಯು ತೆರಿಗೆ ವಿಧಿಸಬಹುದಾದ ಸರಕು ಮತ್ತು ಸೇವೆಗಳಿಗೆ ಮಾತ್ರ ಅನ್ವಯಿಸುತ್ತದೆ. ನೋಂದಾಯಿತ ವರ್ತಕರು ತಾವು ಖರೀದಿಸಿದ ವಸ್ತುಗಳ ಮೇಲೆ ಪಾವತಿಸಿದ ಇನ್‌ಪುಟ್‌ ತೆರಿಗೆಯನ್ನು ಮಾರಾಟದ ಮೇಲೆ ಪಾವತಿಸಬೇಕಾದ ತೆರಿಗೆಗೆ ಹೊಂದಾಣಿಕೆ ಮಾಡಿಕೊಂಡು ಹೆಚ್ಚುವರಿ ತೆರಿಗೆ ಪಾವತಿಸಬಹುದು. ವಾರ್ಷಿಕ ವಹಿವಾಟು 1.50 ಕೋಟಿ ರೂ.ಗಿಂತ ಕಡಿಮೆ ಇರುವ ವ್ಯಾಪಾರಿಗಳು ಜಿಎಸ್‌ಟಿ ಅಡಿ ನೋಂದಣಿ ಪಡೆದು ರಾಜಿ ತೆರಿಗೆ ಪದ್ಧತಿ ಆಯ್ಕೆ ಮಾಡಿಕೊಳ್ಳಬಹುದು. ಈ ಪದ್ಧತಿಯಡಿ ಶೇ 0.5ರಷ್ಟು ಎಸ್‌ಜಿಎಸ್‌ಟಿ ಮತ್ತು ಶೇ 0.5ರಷ್ಟು ಸಿಜಿಎಸ್‌ಟಿ ಪಾವತಿಸಬೇಕು. ಆದರೆ, ನೋಂದಣಿ ಪಡೆಯದೆ ನಡೆಸಿರುವ ವಹಿವಾಟಿಗೆ ರಾಜಿ ತೆರಿಗೆ ಪದ್ಧತಿ ಅನ್ವಯಿಸುವುದಿಲ್ಲ.

ಇಲಾಖೆಯ ನೋಟಿಸ್‌ ನಂತರ ಕೆಲ ವರ್ತಕರು ಯುಪಿಐ ಮೂಲಕ ಹಣ ಪಡೆಯುವುದನ್ನು ನಿಲ್ಲಿಸಿ, ಗ್ರಾಹಕರಿಂದ ನಗದು ರೂಪದಲ್ಲಿ ಹಣ ಸ್ವೀಕರಿಸುತ್ತಿರುವುದು ಗಮನಕ್ಕೆ ಬಂದಿದೆ. ಈ ವರ್ತಕರು ತಾವು ಮಾಡಿದ ವಹಿವಾಟಿನ ಪ್ರತಿಫಲವನ್ನು ಯಾವುದೇ ರೂಪದಲ್ಲಿ ಪಡೆದಿದ್ದರೂ ಜಿಎಸ್‌ಟಿ ತೆರಿಗೆ ಅನ್ವಯವಾಗುತ್ತದೆ. ಯುಪಿಐ ಕೇವಲ ಪ್ರತಿಫಲ ಪಡೆಯುವ ಒಂದು ಮಾರ್ಗ ಮಾತ್ರ. ವರ್ತಕರು ಯಾವುದೇ ರೂಪದಲ್ಲಿ ವಹಿವಾಟು ನಡೆಸಿದ್ದರೂ ಅಂತಹ ವರ್ತಕರಿಂದ ಜಿಎಸ್‌ಟಿ ಕಾಯಿದೆಯಡಿ ಅನ್ವಯಿಸುವ ತೆರಿಗೆಯನ್ನು ಸಂಗ್ರಹಿಸಲು ಇಲಾಖೆಯು ಕ್ರಮ ತೆಗೆದುಕೊಳ್ಳುತ್ತದೆ ಎಂದು ತಿಳಿಸಿದ್ದಾರೆ.

Share.
Leave A Reply