ವಿಜಯ್ ಹಜಾರೆ ಟ್ರೋಫಿಯಲ್ಲಿ (Vijay Hazare Trophy) ಕರ್ನಾಟಕ ಪರ ದೇವದತ್ತ ಪಡಿಕ್ಕಲ್ ಶತಕ ಸಿಡಿಸುವುದರ ಮೂಲಕ ಜಾರ್ಖಂಡ್ (Karnataka vs Jharkhand) ವಿರುದ್ಧ ಜಯ ಗಳಿಸುವಂತೆ ಮಾಡಿದ್ದಾರೆ.
ಈ ಮೂಲಕ ಕರ್ನಾಟಕ ತಂಡ 5 ವಿಕೆಟ್ಗಳಿಂದ ಗೆದ್ದುಕೊಂಡು ಟೂರ್ನಿಯಲ್ಲಿ ಶುಭಾರಂಭ ಮಾಡಿದೆ. ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಗೆದ್ದು ಬೀಗಿದ್ದ ಜಾರ್ಖಂಡ್ ತಂಡವನ್ನು ಕರ್ನಾಟಕ ಎದುರಿಸಿತ್ತು. ಮೊದಲು ಬ್ಯಾಟಿಂಗ್ ಮಾಡಿದ ಜಾರ್ಖಂಡ್ ತಂಡ ದಾಖಲೆಯ 412 ರನ್ಗಳ ಬೃಹತ್ ಮೊತ್ತ ಕಲೆಹಾಕಿತು. ಗುರಿ ಬೆನ್ನಟ್ಟಿದ ಕರ್ನಾಟಕ ಕೂಡ ಕೆಚ್ಚೆದೆಯ ಪ್ರದರ್ಶನ ನೀಡಿ ಇನ್ನು 15 ಎಸೆತಗಳು ಬಾಕಿ ಇರುವಂತೆಯೇ ಜಯ ಗಳಿಸಿದೆ.
ಟಾಸ್ ಗೆದ್ದ ಕರ್ನಾಟಕ ನಾಯಕ ಮಯಾಂಕ್ ಅಗರ್ವಾಲ್ ಮೊದಲು ಬೌಲಿಂಗ್ ಆಯ್ದುಕೊಂಡಿದ್ದರು. ಜಾರ್ಖಂಡ್ ಪರ ಆರಂಭಿಕ ಶಿಖರ್ ಮೋಹನ್ 44 ರನ್ ಬಾರಿಸಿ ತಂಡಕ್ಕೆ ಉತ್ತಮ ಆರಂಭ ನೀಡಿದರು. 4ನೇ ಕ್ರಮಾಂಕದಲ್ಲಿ ಬಂದ ವಿರಾಟ್ ಸಿಂಗ್ ಕೂಡ 88 ರನ್ ಗಳಿಸಿದರು. ಐದನೇ ಕ್ರಮಾಂಕದಲ್ಲಿ ಬಂದ ಕುಶಾಗ್ರ 63 ರನ್ಗಳ ಇನ್ನಿಂಗ್ಸ್ ಆಡಿದರೆ, 6ನೇ ಕ್ರಮಾಂಕದಲ್ಲಿ ಬಂದ ನಾಯಕ ಇಶಾನ್ ಕಿಶನ್ ಸ್ಫೋಟಕ ಇನ್ನಿಂಗ್ಸ್ ನಿರ್ಮಿಸಿದರು. ಇಶಾನ್ ಕಿಶನ್ 6ನೇ ಕ್ರಮಾಂಕದಲ್ಲಿ ಕಣಕ್ಕಿಳಿದು ತಮ್ಮ ಇನ್ನಿಂಗ್ಸ್ನಲ್ಲಿ ಕೇವಲ 39 ಎಸೆತಗಳನ್ನು ಎದುರಿಸಿ, 7 ಬೌಂಡರಿ ಹಾಗೂ 14 ಭರ್ಜರಿ ಸಿಕ್ಸರ್ಗಳ ಸಹಿತ 125 ರನ್ ಗಳಿಸಿದರು. ಕಿಶನ್ ಶತಕದಿಂದಾಗಿ ಜಾರ್ಖಂಡ್ ತಂಡ ಕರ್ನಾಟಕ ತಂಡಕ್ಕೆ ಬೃಹತ್ 412 ರನ್ ಗುರಿ ನೀಡಿತು.
ಕರ್ನಾಟಕ ತಂಡಕ್ಕೆ ಆರಂಭಿಕ ಮುನ್ನಡೆ ಭರ್ಜರಿಯಾಗಿಯೇ ಸಿಕ್ಕಿತು. ಮೊದಲ ವಿಕೆಟ್ಗೆ ದೇವದತ್ ಪಡಿಕ್ಕಲ್ ಹಾಗೂ ಮಯಾಂಕ್ ಅಗರ್ವಾಲ್ 114 ರನ್ಗಳ ಭರ್ಜರಿ ಜೊತೆಯಾಟ ನೀಡಿದರು. ಕೇವಲ 11.5 ಓವರ್ಗಳಲ್ಲಿ ತಂಡವನ್ನು ಇಷ್ಟು ಮೊತ್ತಕ್ಕೆ ಕೊಂಡೊಯ್ದರು. ಇದೇ ವೇಳೆ ನಾಯಕ ಮಯಾಂಕ್ 54 ರನ್ಗಳ ಇನ್ನಿಂಗ್ಸ್ ಆಡಿದರು. ತಮ್ಮ ಇನ್ನಿಂಗ್ಸ್ನಲ್ಲಿ ಕೇವಲ 34 ಎಸೆತಗಳನ್ನು ಎದುರಿಸಿದ ಮಯಾಂಕ್ 10 ಬೌಂಡರಿ ಸಿಡಿಸಿದರು. ದೇವದತ್ ಪಡಿಕ್ಕಲ್ ತಮ್ಮ ಇನ್ನಿಂಗ್ಸ್ನಲ್ಲಿ 118 ಎಸೆತಗಳನ್ನು ಎದುರಿಸಿ 10 ಬೌಂಡರಿ ಹಾಗೂ 7 ಭರ್ಜರಿ ಸಿಕ್ಸರ್ ಸಹಿತ 147 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು. ದೇವದತ್ ಔಟಾಗುವುದಕ್ಕೂ ಮುನ್ನ ಕರ್ನಾಟಕದ ಗೆಲುವು ಖಚಿತವಾದ್ದಂತ್ತಾಗಿತ್ತು. ಕೆ. ಶ್ರೀಕಾಂತ್ 38 ರನ್ಗಳ ಇನ್ನಿಂಗ್ಸ್ ಆಡಿದರೆ, ಅಭಿನವ್ ಮನೋಹರ್ ಅಜೇಯ 56 ರನ್ ಮತ್ತು ಧೃವ್ ಪ್ರಭಾಕರ್ ಅಜೇಯ 40 ರನ್ ಗಳಿಸಿ ತಂಡದ ಗೆಲುವಿಗೆ ಕಾರಣರಾದರು.
