ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷರಾಗಿದ್ದ ಪದ್ಮಭೂಷಣ ಡಾ.ಶ್ರೀ ಬಾಲಗಂಗಾಧರನಾಥ ಸ್ವಾಮೀಜಿಯವರು ಹಾಕಿಕೊಟ್ಟ ಮಾರ್ಗದರ್ಶನದಲ್ಲೇ ಶ್ರೀಮಠವು ಆರೋಗ್ಯ, ಆಧ್ಯಾತಿಕ ಸಾಂಸ್ಕೃತಿಕ ಕ್ಷೇತ್ರದಲ್ಲೂ ಮಹತ್ತರ ಸೇವೆಯನ್ನು ಸಲ್ಲಿಸುತ್ತಿದೆ ಎಂದು ಕೇಂದ್ರ ಗೃಹಸಚಿವ ಅಮಿತ್ ಶಾ ಬಿಜಿಎಸ್ ಟ್ರಸ್ಟ್‌ನ ಕೊಡುಗೆಯನ್ನು ಕೊಂಡಾಡಿದರು.
ನೆಲಮಂಗಲ ಬಳಿಯ ನಗರೂರು ಬಿಜಿಎಸ್ ಕಾಲೇಜು ಆವರಣದಲ್ಲಿ ಬಿಜಿಎಸ್ ವೈದ್ಯಕೀಯ ಕಾಲೇಜು ಹಾಗೂ ಆಸ್ಪತ್ರೆ ಉದ್ಘಾಟನೆ ಕಾರ್ಯಕ್ರಮದಲ್ಲಿ ಅಮಿತ್ ಶಾ ಮಾತನಾಡಿದ್ರು.

ನನಗೆ ಕನ್ನಡ ಮಾತನಾಡಲು ಬರುವುದಿಲ್ಲ. ಇದಕ್ಕಾಗಿ ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷರಾದ ಡಾ.ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಅವರ ಬಳಿ ಕ್ಷಮೆ ಕೋರುತ್ತೇನೆ ಎಂದು ತಮ್ಮ ಮಾತು ಆರಂಭಿಸಿದ ಅಮಿತ್ ಶಾ ಅವರು, ಮಾತಿನುದ್ದಕ್ಕೂ ಆದಿಚುಂಚನಗಿರಿ ಪೀಠದ ಸಮಾಜ ಸೇವೆಯನ್ನು ಮುಕ್ತ ಕಂಠದಿಂದ ಶ್ಲಾಘಿಸಿದರು.

ಈ ಕಾರ್ಯಕ್ರಮದಲ್ಲಿ ಭಾಗಿಯಾಗಲು ಅವಕಾಶ ನೀಡಿದ ಸ್ವಾಮೀಜಿ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಲಕ್ಷಾಂತರ ಮಕ್ಕಳಿಗೆ ವಿದ್ಯಾದಾನ ಮಾಡಿದ್ದಾರೆ. ಈ ವಿಶಾಲ ಪ್ರದೇಶದಲ್ಲಿ ದೊಡ್ಡ ಆಸ್ಪತ್ರೆ ನಿರ್ಮಿಸಿದ್ದು ಬಡವರಿಗೆ ಕೈಗೆಟುಕುವ ದರದಲ್ಲಿ ಆರೋಗ್ಯ ಸೇವೆ ಒದಗಿಸುತ್ತಿದ್ದಾರೆ. ಕೋಟ್ಯಂತರ ರೂ. ವೆಚ್ಚದಲ್ಲಿ ನೂತನ ಆಸ್ಪತ್ರೆ ನಿರ್ಮಿಸಲಾಗಿದೆ. 1000 ಹಾಸಿಗೆಯುಳ್ಳ ಸೂಪರ್ ಸ್ಪೆಷಲ್ ಆಸ್ರತ್ರೆಯಲ್ಲಿ ಬಡವರಿಗೆ ಉಚಿತವಾಗಿ ಹಾಗೂ ಕಡಿಮೆ ದರದಲ್ಲಿ ಚಿಕಿತ್ಸೆ ನೀಡುತ್ತಿರುವುದು ಮತ್ತಷ್ಟು ಸಂತೋಷವಾಗಿದೆ ಎಂದರು.

ಹಿರಿಯ ಶ್ರೀಗಳ ಕಾಲದಿಂದಲೂ ಮಠದ ಸೇವಾ ಕಾರ್ಯ ಮುಂದುವರೆಸಿಕೊಂಡು ಬರಲಾಗುತ್ತಿದೆ. ಆದಿಚುಂಚನಗಿರಿಯ ಪವಿತ್ರ ಮಠದಲ್ಲಿ ಆಧ್ಯಾತಿಕ ಪರಂಪರೆ ಮತ್ತಷ್ಟು ಉಜ್ವಲಗೊಂಡಿದೆ. ಸೇವೆ, ಶಿಕ್ಷಣ, ಸಮರ್ಪಣೆ ಯು 1800 ವರ್ಷಗಳಿಂದಲೂ ಮುಂದುವರೆದಿದೆ. ನಿರ್ಮಲಾನಂದನಾಥ ಶ್ರೀಗಳು ಈ ಪರಂಪರೆಯನ್ನು ಮತ್ತಷ್ಟು ಉತ್ತುಂಗಕ್ಕೊಯ್ದಿದ್ದಾರೆ. ಆಧ್ಯಾತಿಕತೆ, ಸಂಸ್ಕೃತಿ ಕ್ಷೇತ್ರದಲ್ಲಿ ಮಹತ್ವದ ಸೇವೆ ಮಾಡುತ್ತಿದೆ ಎಂದು ಶ್ಲಾಘಿಸಿದರು.

ಮಕ್ಕಳಿಂದ ದೊಡ್ಡವರವರೆಗೂ ಸೇವೆ ಮಾಡಲಾಗುತ್ತಿದೆ. ಅನಾಥಾಲಯ, ವೃದ್ಧಾಶ್ರಮ, ಚಿಕಿತ್ಸಾಲಯಗಳನ್ನು ಮಠ ತೆರೆದಿದೆ. ಹಿರಿಯ ಶ್ರೀಗಳ ಮಾರ್ಗದಲ್ಲಿ ನಿರ್ಮಲಾನಂದನಾಥ ಶ್ರೀಗಳು ಮುನ್ನಡೆಯುತ್ತಿದ್ದಾರೆ ಎಂದರು.
7 ಕೋಟಿ ಬಡವರಿಗೆ ಉಚಿತ ಚಿಕಿತ್ಸೆ ಕೇಂದ್ರ ಸರ್ಕಾರದಿಂದ ಸಿಗುತ್ತಿದೆ. ಪ್ರಧಾನಿ ನರೇಂದ್ರಮೋದಿಯವರು 26 ವರ್ಷಗಳ ಹಿಂದೆಯೇ ಬಡವರ ಆರೋಗ್ಯ ವೆಚ್ಚದ ಬಗ್ಗೆ ಕಾಳಜಿ ಇಟ್ಟುಕೊಂಡಿದ್ದರು. 12 ಕೋಟಿ ಮನೆಗಳಿಗೆ ಶೌಚಾಲಯ ವ್ಯವಸ್ಥೆ, ಮಿಷನ್ ಇಂದ್ರಧನುಷ್ ಮೂಲಕ 15 ವರ್ಷಗಳವರೆಗಿನ ಮಕ್ಕಳಿಗೆ ಲಸಿಕೆ, ಆಯುಷಾನ್ ಭಾರತ್ ಮೂಲಕ 5 ಲಕ್ಷ ರೂ.ವರೆಗೆ ಆರೋಗ್ಯ ವಿಮೆ ಇತ್ಯಾದಿ ಆರೋಗ್ಯ ಸಂಬಂಧಿ ಕಾರ್ಯಕ್ರಮಗಳನ್ನು ಕೇಂದ್ರ ಜಾರಿಗೊಳಿಸಿದೆ.
ವೈದ್ಯರ ಸಂಖ್ಯೆ ಹೆಚ್ಚಿಸುವ ನಿಟ್ಟಿನಲ್ಲೂ ಕ್ರಮವಹಿಸಿದೆ. ವೈದ್ಯಕೀಯ ಕಾಲೇಜುಗಳ ಸಂಖ್ಯೆ 780ಕ್ಕೇರಿದೆ. 1.80 ಲಕ್ಷ ಸೀಟುಗಳು ದೇಶದ ಮೆಡಿಕಲ್ ಕಾಲೇಜುಗಳಲ್ಲಿ ಲಭ್ಯ ಇವೆ. 74 ಸಾವಿರ ಪಿಜಿ ಸೀಟುಗಳು ಲಭ್ಯ ಇವೆ ಎಂದು ಕೇಂದ್ರ ಸರ್ಕಾರದ ಸಾಧನೆಗಳ ಪಟ್ಟಿ ನೀಡಿದರು.
ಅದಿಚುಂಚನಗಿರಿ ವಿಶ್ವವಿದ್ಯಾಲಯದ ಬೆಂಗಳೂರು ಕ್ಯಾಂಪಸ್ ಉದ್ಘಾಟನಾ ಸಮಾರಂಭವನ್ನು ಉದ್ದೇಶಿಸಿ ಮಾತನಾಡುತ್ತಿದ್ದೇನೆ.
— Amit Shah (@AmitShah) June 20, 2025
Speaking at the inauguration ceremony of the Bengaluru campus of Adichunchanagiri University. https://t.co/N5aczUF6Ax
1 ಲಕ್ಷಕ್ಕೂ ಅಧಿಕ ಎಂಬಿಬಿಎಸ್ ವೈದ್ಯರು ಪ್ರತಿವರ್ಷ ಪಾಸಾಗಿ ಹೊರ ಬರುತ್ತಿದ್ದಾರೆ. 70,000ಕ್ಕೂ ಅಧಿಕವಾದ ಡಬಲ್ ಡಿಗ್ರಿ ವೈದ್ಯರು ಪಾಸಾಗಿ ಹೊರ ಬರುತ್ತಿದ್ದಾರೆ. ಆರೋಗ್ಯ ಸೇವೆ ಜೊತೆಗೆ ಅನೇಕ ಯೋಜನೆಗಳನ್ನು ಪ್ರಧಾನಿ ಮೋದಿ ಅವರು ನೀಡಿದ್ದಾರೆ. ಸ್ವಸ್ಥ ಭಾರತ ನಿರ್ಮಾಣದ ಕಡೆಗೆ ಹೆಜ್ಜೆ ಹಾಕಿದ್ದಾರೆ ಎಂದು ಶಾ ಪ್ರಧಾನಿ ಮೋದಿಯವರ ನೀಡಿದ ಯೀಜನೆಗಳ ಗುಣಗಾನ ಮಾಡಿದರು.