ಇಂದಿನಿಂದ ಇಂಗ್ಲೆಂಡ್ ವಿರುದ್ಧದ 5 ಟೆಸ್ಟ್ ಪಂದ್ಯಗಳ ಸರಣಿ ಆರಂಭವಾಗುವುದರೊಂದಿಗೆ ಭಾರತೀಯ ಟೆಸ್ಟ್ ಇತಿಹಾಸದಲ್ಲಿ ಹೊಸ ಅಧ್ಯಾಯ ಆರಂಭವಾಗಲಿದೆ. ವಿರಾಟ್ ಕೊಹ್ಲಿ, ರವಿಚಂದ್ರನ್ ಅಶ್ವಿನ್ ಮತ್ತು ರೋಹಿತ್ ಶರ್ಮಾ ಅವರ ನಿವೃತ್ತಿಯ ನಂತರ, ಅನನುಭವಿ ಶುಭಮನ್ ಗಿಲ್ ನೇತೃತ್ವದ ಪ್ರವಾಸಿ ತಂಡವು ಹೆಡಿಂಗ್ಲಿಯಲ್ಲಿ ನಡೆಯಲಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಆತಿಥೇಯರನ್ನು ಎದುರಿಸಲಿದೆ. ಇದು ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ 2025-27ರ ಭಾರತದ ಮೊದಲ ಸರಣಿ ಕೂಡ ಆಗಿದೆ.
ಭಾರತ ತಂಡಕ್ಕೆ ಹಿರಿಯ ಆಟಗಾರರಾದ ಕೆಎಲ್ ರಾಹುಲ್, ರವೀಂದ್ರ ಜಡೇಜಾ, ರಿಷಭ್ ಪಂತ್ ಮತ್ತು ಜಸ್ಪ್ರೀತ್ ಬುಮ್ರಾ ಅವರು ಇಂಗ್ಲೆಂಡ್‌ನ ಬಾಜ್‌ಬಾಲ್ ಆಟಗಾರರ ಬಲವನ್ನು ಎದುರಿಸಲು ಹೊಸ ನಾಯಕ ಗಿಲ್ ಅವರ ಬೆಂಬಲಕ್ಕೆ ನಿಲ್ಲುವ ಅಗತ್ಯವಿದೆ. ಅವರು ನಾಯಕನಾಗಿ ಮಾತ್ರವಲ್ಲದೆ ಬ್ಯಾಟ್ಸ್‌ಮನ್ ಆಗಿಯೂ ಯಶಸ್ಸುಗಳಿಸಬೇಕಿದೆ. ಕೊಹ್ಲಿ ನಿರ್ಗಮನದ ನಂತರ 4ನೇ ಸ್ಥಾನದ ಜವಾಬ್ದಾರಿ ಕೂಡ ಸದ್ಯ ಗಿಲ್ ಅವರ ಮೇಲಿದೆ.
ಮೊದಲ ಟೆಸ್ಟ್ ಪಂದ್ಯದಲ್ಲಿ ಸಾಯಿ ಸುದರ್ಶನ್‌ಗೆ ಅವಕಾಶ ನೀಡಲಾಗಿದೆ. ಇನ್ನು ತಂಡದಲ್ಲಿ ಶುಭಮನ್ ಗಿಲ್, ರಿಷಭ್ ಪಂತ್, ಕರುಣ್ ನಾಯರ್, ಬ್ಯಾಟಿಂಗ್ ವಿಭಾಗಕ್ಕೆ ಬಲ ತುಂಬಲಿದ್ದಾರೆ. ಇನ್ನು ಬೌಲಿಂಗ್ ವಿಭಾಗದಲ್ಲಿ ಶಾರ್ದೂಲ್ ಠಾಕೂರ್ ಜಸ್ಪ್ರೀತ್ ಬುಮ್ರಾ, ಮೊಹಮದ್ ಸಿರಾಜ್ ಮತ್ತು ಪ್ರಸಿದ್ಧ್ ಕೃಷ್ಣ ಬೌಲಿಂಗ್ ವಿಭಾಗದ ಶಕ್ತಿ ಆಗಿದ್ದಾರೆ.
ಇನ್ನು ಐಪಿಎಲ್‌ನಲ್ಲಿ ಅಮೋಘ ಪ್ರದರ್ಶನ ನೀಡಿರುವ ಗುಜರಾತ್ ಟೈಟಾನ್ಸ್ ತಂಡದ ಸಾಯಿ ಸುದರ್ಶನ್ ಇಂಗ್ಲೆಂಡ್‌ನಲ್ಲಿ ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದಾರೆ. ಇಂದಿನಿಂದ ಆರಂಭವಾದ ಆಂಡರ್ಸನ್-ತೆಂಡೂಲ್ಕರ್ ಸರಣಿಯ ಮೊದಲ ಪಂದ್ಯದಲ್ಲಿ ಆಡುವ ಅವಕಾಶವನ್ನು ಪಡೆದಿದ್ದಾರೆ.
ಸಾಯಿ ಸುದರ್ಶನ್ ಐಪಿಎಲ್‌ನಲ್ಲಿ ಅಬ್ಬರದ ಪ್ರದರ್ಶನ ನೀಡಿದ್ದರು. ಅಲ್ಲದೆ ದೇಶೀಯ ಟೂರ್ನಿಯಲ್ಲಿ ರನ್ ಮಹಲ್ ಕಟ್ಟಿದ್ದರು. ಇವರು ಐಪಿಎಲ್ ನಲ್ಲಿ ಆಡಿದ 15 ಪಂದ್ಯಗಳಲ್ಲಿ 54ರ ಸರಾಸರಿಯಲ್ಲಿ 759 ರನ್ ಸಿಡಿಸಿದ್ದಾರೆ. ಈ ಪ್ರದರ್ಶನದ ಮೂಲಕ ಸಾಯಿ ಸುದರ್ಶನ್ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಗೆ ಆಯ್ಕೆ ಆಗಿದ್ದಾರೆ.
