ಬೆಂಗಳೂರು, ಫೆ.17: ರಾಜ್ಯದಲ್ಲಿ ಸಾವಿರ ದಿನಗಳನ್ನು ಪೂರೈಸಿ ಸಾಧನೆಗೈದಿರುವ ಕಾಂಗ್ರೆಸ್ ಸರ್ಕಾರಕ್ಕೆ ಗ್ಯಾರಂಟಿ ಯೋಜನೆಗಳೇ ಜೀವಾಳ. ಟೀಕೆ ಟಿಪ್ಪಣಿ, ವಿರೋಧಗಳ ನಡುವೆಯೂ ರಾಜ್ಯ ಸರ್ಕಾರ ಗ್ಯಾರಂಟಿಗಳನ್ನು ಯಶಸ್ವಿಯಾಗಿ ನಿಭಾಯಿಸಿ ದೇಶಕ್ಕೆ ಮಾದರಿಯಾಗಿದೆ. ಪಂಚ ಗ್ಯಾರಂಟಿಗಳನ್ನು ಜಾರಿ ಮಾಡಿ ನುಡಿದಂತೆ ನಡೆದಿರುವ ಸಿಎಂ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಜನರ ಬದುಕಿಗೆ ಆಶಾಕಿರಣವಾಗಿದೆ. ಮಹತ್ವಾಕಾಂಕ್ಷೆಯ ಗ್ಯಾರಂಟಿಗಳಲ್ಲಿ ಒಂದಾದ ಗೃಹಜ್ಯೋತಿ ಯೋಜನೆ ರಾಜ್ಯದ ಜನತೆಗೆ ಉಚಿತ ವಿದ್ಯುತ್ ನೀಡುವ ಜೊತೆಗೆ ಅವರ ಬದುಕಲ್ಲಿ ಬೆಳಕು ಮೂಡಿಸಿದೆ. ಆಗಸ್ಟ್ 1, 2023 ರಿಂದ ಜಾರಿಯಾದ ಈ ಯೋಜನೆ ಪ್ರತಿ ಮನೆಗೆ ಪ್ರತಿ ತಿಂಗಳು ಗರಿಷ್ಠ 200 ಯೂನಿಟ್‌ಗಳವರೆಗೆ ಉಚಿತ ಕರೆಂಟ್ ನೀಡುತ್ತಾ ಬಂದಿದೆ. ಅದರಲ್ಲೂ ಬಡವರು, ಮಧ್ಯಮ ವರ್ಗದವರಿಗೆ ಆರ್ಥಿಕ ಹೊರೆಯನ್ನ ತಗ್ಗಿಸಿ ಜೀವನ ಮಟ್ಟವನ್ನು ಸುಧಾರಿಸಲು ಗೃಹಜ್ಯೋತಿ ಯೋಜನೆ ಬಹುಮುಖ್ಯ ಪಾತ್ರ ವಹಿಸಿದೆ. ವಿದ್ಯುತ್ ಅತ್ಯಗತ್ಯವಾಗಿರುವ ಸಂದರ್ಭದಲ್ಲಿ ಅದರ ಭಾರವನ್ನು ಶಮನಗೊಳಿಸಿ, ಆ ಹಣವನ್ನು ಮಕ್ಕಳ ಶಿಕ್ಷಣ, ಆರೋಗ್ಯ ಸೇರಿದಂತೆ ಇತರೆ ಅಗತ್ಯತೆಗಳಿಗೆ ಬಳಸಲು ಗೃಹಜ್ಯೋತಿ ದಾರಿದೀಪವಾಗಿದೆ.

ಬಡವರ ಬದುಕಿಗೆ ದಾರಿದೀಪವಾಗುತ್ತಿದೆ ಗೃಹಜ್ಯೋತಿ :
ಗೃಹಜ್ಯೋತಿ ಯೋಜನೆಯಿಂದ ಬಾಡಿಗೆದಾರರು ಸೇರಿದಂತೆ 1.65 ಕೋಟಿಗೂ ಹೆಚ್ಚು ಕುಟುಂಬಗಳಿಗೆ ಪ್ರಯೋಜನವಾಗ್ತಿದೆ. ಇದರಲ್ಲಿ 85 ಲಕ್ಷ ಕುಟುಂಬಗಳಿಗೆ ಪ್ರತಿ ತಿಂಗಳು ಶೂನ್ಯ ಬಿಲ್ ಬರುತ್ತಿರೋದು ವಿಶೇಷ. ಈ ಯೋಜನೆಗಾಗಿ ಕಾಂಗ್ರೆಸ್ ಸರ್ಕಾರ ಇಲ್ಲಿಯವರೆಗೆ ₹22,839 ಕೋಟಿ ಖರ್ಚು ಮಾಡಿದೆ. ಅಲ್ಲದೇ ಇದರ ಮೂಲಕ ಪ್ರತಿ ಮನೆಯಲ್ಲಿ ಮಾಸಿಕ ಸರಾಸರಿ ₹1000 ವರೆಗೆ ಉಳಿತಾಯ ಮಾಡಬಹುದಾಗಿದೆ. ಮಿತಿ ಮೀರಿದ ವಿದ್ಯುತ್ ಬಳಕೆಗೂ ಗೃಹಜ್ಯೋತಿ ಯೋಜನೆ ಕಡಿವಾಣ ಹಾಕಿದೆ. ಗೃಹಜ್ಯೋತಿ ಯೋಜನೆಯಿಂದ ನೇರವಾಗಿ ಲಾಭ ಸಿಗುತ್ತಿದ್ದು, ಗ್ರಾಮೀಣ ಹಾಗೂ ನಗರ ಪ್ರದೇಶದ ಜನರ ಬದುಕು ಇದರಿಂದ ಹಸನಾಗುತ್ತಿರುವುದು ಸಾರ್ಥಕತೆಗೆ ಸಾಕ್ಷಿ. ಸಾಮಾನ್ಯ ಜನರಿಗೆ ವಿದ್ಯುತ್ ಹೊರೆ ತಪ್ಪಿರೋದ್ರಿಂದ ಎಲ್ಲರೂ ಉಳಿತಾಯದ ಕಡೆ ಗಮನ ಹರಿಸಿರೋದು ನಿಜವಾದ ಅಭಿವೃದ್ಧಿ. ಕಾಂಗ್ರೆಸ್ ಸರ್ಕಾರದ ಸಾವಿರಕ್ಕೂ ಹೆಚ್ಚು ದಿನಗಳಲ್ಲಿ ಕೋಟಿ ಕೋಟಿ ಕನಸ್ಸುಗಳು ನನಸಾಗಿವೆ.. ಕೋಟ್ಯಂತರ ಕುಟುಂಬಗಳಿಗೆ ನೆಮ್ಮದಿಯ ಬೆಳಕು ಸಿಕ್ಕಿದೆ.
