ಬೆಂಗಳೂರು, ಜ.09: ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯನ್ನು ಪುನರ್ ಸ್ಥಾಪಿಸಬೇಕೆಂದು ಒತ್ತಾಯಿಸಿ ನಿರ್ಣಯ ಅಂಗೀಕರಿಸಲು ರಾಜ್ಯ ವಿಧಾನಸಭೆಯ ವಿಶೇಷ ಅಧಿವೇಶನವನ್ನು ಕರೆಯಲು ರಾಜ್ಯಸರ್ಕಾರ ನಿರ್ಧರಿಸಿದೆ.

ಬೆಂಗಳೂರು ನಗರದಲ್ಲಿರುವ ಅಶೋಕ ಹೋಟೆಲ್‌ನಲ್ಲಿ ನಡೆದ ಕಾಂಗ್ರೆಸ್ ಪಕ್ಷದ ಶಾಸಕರ ಸಭೆಯಲ್ಲಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಶೀಘ್ರದಲ್ಲೇ ರಾಜ್ಯ ವಿಧಾನಸಭೆಯ ವಿಶೇಷ ಅಧಿವೇಶನ ಕರೆಯಲಾಗುವುದು. ಡಾ. ಮನಮೋಹನ್ ಸಿಂಗ್ ಪ್ರಧಾನಮಂತ್ರಿಯಾಗಿದ್ದ ಸಂದರ್ಭದಲ್ಲಿ ಜಾರಿಗೆ ಬಂದ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಿಂದ ಮಹಾತ್ಮ ಗಾಂಧಿಯ ಹೆಸರು ತೆಗೆದು ಹಾಕುವುದು ಬಿಜೆಪಿಯ ಹುನ್ನಾರವಾಗಿದೆ ಎಂದು ಆರೋಪಿಸಿದರು.

ಗ್ರಾಮೀಣ ಪ್ರದೇಶಗಳ ದಲಿತರು, ಮಹಿಳೆಯರು ಹಾಗೂ ರೈತರಿಗೆ ಉದ್ಯೋಗ ಕಲ್ಪಿಸುವ ಉದ್ದೇಶದಿಂದ ಈ ಯೋಜನೆಯನ್ನು ಜಾರಿಗೆ ತರಲಾಗಿತ್ತು. ಆದರೆ, ಇದೀಗ ಕೇಂದ್ರ ಸರ್ಕಾರ ಉದ್ಯೋಗದ ಹಕ್ಕನ್ನೇ ಕಸಿದುಕೊಳ್ಳುವ ಕಾರ್ಯದಲ್ಲಿ ತೊಡಗಿದೆ. ಇದರಿಂದ ಉದ್ಯೋಗದ ಹಕ್ಕು ಅರ್ಥಹೀನವಾಗಿದೆ ಎಂದರು.

ಉದ್ಯೋಗದ ಹಕ್ಕು ಕಿತ್ತುಕೊಳ್ಳುವ ಕೇಂದ್ರ ಸರ್ಕಾರದ ಕ್ರಮದಿಂದಾಗಿ 28 ಕೋಟಿ ದಲಿತರಿಗೆ ಅನ್ಯಾಯವಾಗಿದೆ. ಬಡವರು ಆರ್ಥಿಕವಾಗಿ ಸಬಲರಾಗುವುದನ್ನು ಸಂಘ ಪರಿವಾರ ಸಹಿಸುವುದಿಲ್ಲ. ಮಹಾತ್ಮಗಾಂಧಿಯ ಹೆಸರು ತೆಗೆದು ಮತ್ತೊಮ್ಮೆ ಗಾಂಧೀಜಿಯನ್ನು ಕೊಲೆ ಮಾಡಲಾಗಿದೆ. ಇದು ಸಂಘ ಪರಿವಾರದವರು ಹೇಳಿ ಕೊಟ್ಟಿರುವ ಪಾಠ. ಇವರಿಗೆ ಸರಿಯಾದ ಪಾಠ ಕಲಿಸಬೇಕು ಎಂದು ತಿಳಿಸಿದರು.

ಮನ್ರೇಗಾ ಕಾಯ್ದೆ ಮತ್ತೆ ಜಾರಿಯಾಗವಂತೆ ಜನಾಂದೋಲನ ನಡೆಯಬೇಕು. ಪ್ರತಿ ಗ್ರಾಮ ಪಂಚಾಯಿತಿ ಸದಸ್ಯರನ್ನು, ನರೇಗಾದಲ್ಲಿ ಕೆಲಸ ಮಾಡುತ್ತಿರುವವರನ್ನು ತಲುಪಬೇಕು. ಜನರನ್ನು ಜಾಗೃತಗೊಳಿಸುವ ಕೆಲಸವನ್ನು ಶಾಸಕರು ಮಾಡಬೇಕು. ನಮ್ಮ ಹೋರಾಟ ಜನಾಂದೋಲನವಾಗಿ ರೂಪುಗೊಳ್ಳುವಂತಹ ವಾತಾವರಣ ನಿರ್ಮಾಣ ಆಗಬೇಕು. ಕಾಂಗ್ರೆಸ್ ಜಾರಿಗೆ ತಂದ ಕಾರ್ಯಕ್ರಮವನ್ನು ರದ್ದು ಮಾಡಿ ಉದ್ಯೋಗದ ಹಕ್ಕು ಕಸಿದುಕೊಂಡಿರುವುದು ಸಂವಿಧಾನ ಬಾಹಿರ ಕೆಲಸ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Share.
Leave A Reply