ಚಿತ್ರದುರ್ಗ: ಅಡ್ಡಬಂದ ನಾಯಿ ತಪ್ಪಿಸಲು ಹೋಗಿ ಬೈಕ್ ನಿಂದ ಬಿದ್ದು ಎಎಸ್ ಐ ಸಾವನ್ನಪ್ಪಿರುವ ಘಟನೆ ನಡೆದಿದೆ.
ಬೈಕಿಗೆ ಅಡ್ಡಬಂದ ನಾಯಿಯನ್ನು ತಪ್ಪಿಸಲು ಮುಂದಾಗಿ ಎಎಸ್ಐ ಬೈಕ್ನಿಂದ ಬಿದ್ದಿದ್ದಾರೆ. ಪರಿಣಾಮ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಈ ಘಟನೆ ಚಿತ್ರದುರ್ಗ (Chitradurga) ಜಿಲ್ಲೆ ಚಳ್ಳಕೆರೆ ತಾಲ್ಲೂಕಿನ ಹೆಗ್ಗೆರೆ ಕ್ರಾಸ್ ಬಳಿ ನಡೆದಿದೆ. ಪರಶರಾಂಪುರ ಪೊಲೀಸ್ ಠಾಣೆಯ ಎಎಸ್ಐ ಮಂಜುನಾಥ್ (50) ಸಾವನ್ನಪ್ಪಿರುವ ಎಎಸ್ ಐ ಎನ್ನಲಾಗಿದೆ.
ಇವರು ಐಮಂಗಲ ಪೊಲೀಸ್ ತರಬೇತಿ ಶಾಲೆಯಿಂದ ಮರಳುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ. ಬೈಕ್ ನಲ್ಲಿ ಮತ್ತೋರ್ವ ಪೊಲೀಸ್ ಪೇದೆ ಇದ್ದು ಅವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಗಾಯಗೊಂಡ ಪೇದೆಯನ್ನು ತಾಲ್ಲೂಕು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಕುರಿತು ಚಳ್ಳಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
