ಆಫೀಸಿಗೆ ಹೋಗ್ಬೇಕಂದ್ರೂ ಬಸ್ ಪ್ರಯಾಣ.. ಮನೆಗೆ ಬರಬೇಕಂದ್ರೂ ಬಸ್‌ನಲ್ಲೇ ಜರ್ನಿ ಮಾಡೋರಿಗೆ ನಾಳೆ ಶಾಕಿಂಗ್ ನ್ಯೂಸ್ ಇದೆ.. ನಾಳೆ ಏನಾದ್ರೂ ಬಸ್ ನಂಬಿ ಹೊರಟರೆ ನೀವು ರಸ್ತೆಯಲ್ಲೇ ಕಾದು ಕಾದು ಹೈರಾಣಾಗುವ ಸಾಧ್ಯತೆ ಇದೆ. ಯಾಕಂದ್ರೆ, ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಆಗಸ್ಟ್ 5 ರಿಂದ ಸಾರಿಗೆ ನಿಗಮಗಳ ನೌಕರರು ಅನಿರ್ದಿಷ್ಟಾವಧಿ ಮುಷ್ಕರ ಮಾಡಲು ನಿರ್ಧರಿಸಿದ್ದಾರೆ.
38 ತಿಂಗಳ ವೇತನ ಬಾಕಿ.. ರೊಚ್ಚಿಗೆದ್ದ ನೌಕರರು!
ಸಾರಿಗೆ ನೌಕರರ 38 ತಿಂಗಳ ವೇತನ ಬಾಕಿ, ವೇತನ ಪರಿಷ್ಕರಣೆ, ಮತ್ತು 2021ರ ಮುಷ್ಕರದ ಸಂದರ್ಭದಲ್ಲಿ ವಜಾಗೊಂಡ ನೌಕರರ ಮರುನೇಮಕಾತಿ ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಗಾಗಿ ಈ ಮುಷ್ಕರ ಘೋಷಿಸಲಾಗಿದೆ. ಸಾರಿಗೆ ನೌಕರರ ಮನವೊಲಿಕೆಗೆ ಕಾರ್ಮಿಕ ಆಯುಕ್ತರ ಅಧ್ಯಕ್ಷತೆಯಲ್ಲಿ ಮೊನ್ನೆ ನಡೆದ ಸಂಧಾನ ಸಭೆ ವಿಫಲವಾಗಿತ್ತು. ಹೀಗಾಗಿ, ಇಂದು ಸ್ವತಃ ಸಿಎಂ ಸಿದ್ದರಾಮಯ್ಯ ಅವರೇ ಮುಷ್ಕರಕ್ಕೆ ಕರೆ ನೀಡಿರುವ ಸಾರಿಗೆ ನೌಕರರ ಸಂಘಟನೆ ಜತೆ ಸಭೆ ನಡೆಸಲಿದ್ದು, ಭಾರಿ ಕುತೂಹಲ ಕೆರಳಿಸಿದೆ..
ಮುಷ್ಕರಕ್ಕೆ ಇಳಿದ್ರೆ ನೌಕರರಿಗೆ ಎಸ್ಮಾ ಜಾರಿಗೆ ಪ್ಲ್ಯಾನ್!
ಒಂದು ವೇಳೆ ಸಿಎಂ ಮನವೊಲಿಕೆಗೂ ಒಪ್ಪದೆ ಮುಷ್ಕರ ಹೂಡಿದರೆ ಮುಷ್ಕರದಲ್ಲಿ ಪಾಲ್ಗೊಳ್ಳುವ ನೌಕರರಿಗೆ ವೇತನ ಪಾವತಿಸದಿರಲು ಈಗಾಗಲೇ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ನಿಗಮಗಳು ನಿರ್ಧರಿಸಿವೆ. ಇದರ ಜತೆಗೆ ಸಾರಿಗೆ ಸೇವೆ ಸಾರ್ವಜನಿಕ ಉಪಯುಕ್ತ ಸೇವೆಯಡಿ ಬರುವ ಕಾರಣ ಮುಷ್ಕರದಲ್ಲಿ ಪಾಲ್ಗೊಳ್ಳುವ ನೌಕರರ ವಿರುದ್ಧ ಎಸ್ಮಾ ಕಾಯ್ದೆ ಜಾರಿ ಮಾಡಲು ಇಂದಿನ ಸಭೆಯಲ್ಲಿ ನಿರ್ಧಾರ ಮಾಡಲಿದ್ದಾರೆ ಎನ್ನಲಾಗ್ತಿದೆ. ಈ ಮುಷ್ಕರದಿಂದ ಸಾರ್ವಜನಿಕರಿಗೆ, ವಿಶೇಷವಾಗಿ ಶಕ್ತಿ ಯೋಜನೆಯಡಿ ಉಚಿತ ಬಸ್ ಪ್ರಯಾಣದ ಸೌಲಭ್ಯವನ್ನು ಪಡೆಯುವ ಮಹಿಳೆಯರಿಗೆ ತೊಂದರೆಯಾಗದಂತೆ ರಾಜ್ಯ ಸರ್ಕಾರವು ಪರ್ಯಾಯ ವ್ಯವಸ್ಥೆಗಳಿಗೆ ಮುಂದಾಗಿದೆ. ರಾಜ್ಯಾದ್ಯಂತ 10 ಸಾವಿರ ಖಾಸಗಿ ಬಸ್‌ಗಳನ್ನು ಓಡಿಸಲು ಖಾಸಗಿ ಬಸ್ ಮಾಲೀಕರ ಸಂಘಕ್ಕೆ ಮನವಿ ಮಾಡಿದೆ.
ಐಟಿ ಕಂಪನಿಗಳಿಗೆ ಮನೆಯಿಂದ ಕೆಲಸಕ್ಕೆ ವ್ಯವಸ್ಥೆ?
ಇನ್ನೊಂದು ವಿಚಾರ ಅಂದ್ರೆ ಬೆಂಗಳೂರಿನಲ್ಲಿ ಸಂಚಾರಕ್ಕೆ ಅಡ್ಡಿಯಾಗದಂತೆ ಸಾರಿಗೆ ಇಲಾಖೆ ಐಟಿ ಕಂಪನಿಗಳಿಗೆ ಮಹತ್ವದ ಪ್ಲ್ಯಾನ್ ಮಾಡಿದೆ. ಐಟಿ ಕಂಪನಿಗಳಿಗೆ ಆಗಸ್ಟ್ 5 ರಿಂದ ಮನೆಯಿಂದ ಕೆಲಸ ಅಂದ್ರೆ ವರ್ಕ್ ಫ್ರಂ ಹೋಂ ವ್ಯವಸ್ಥೆಗೆ ಮನವಿ ಮಾಡಿದೆ. ಈ ಕ್ರಮವು ಸಂಚಾರ ದಟ್ಟಣೆಯನ್ನ ಕಡಿಮೆ ಮಾಡಿ, ಸಾರ್ವಜನಿಕರಿಗೆ ಅನುಕೂಲ ಕಲ್ಪಿಸುವ ಗುರಿಯನ್ನು ಹೊಂದಿದೆ ಅಂತಾ ಹೇಳಲಾಗ್ತಿದೆ.. ಆದ್ರೆ, ಐಟಿ ಕಂಪನಿಗಳು ಈವರೆಗೂ ವರ್ಕ್ ಫ್ರಂ ಹೋಂ ಕುರಿತು ಯಾವುದೇ ನಿಲುವನ್ನು ಪ್ರಕಟಿಸಿಲ್ಲ.. ಒಟ್ನಲ್ಲಿ, ನಾಳೆಯಿಂದ ಕೆಎಸ್‌ಆರ್‌ಟಿಸಿ, ಬಿಎಂಟಿಸಿ ಸಾರಿಗೆ ನೌಕರರು ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಮುಂದಾಗಿದ್ದಾರೆ. ಆದ್ರೆ, ಇಂದಿನ ಸಿಎಂ ಮೀಟಿಂಗ್ ಮೇಲೆ ಎಲ್ಲ ಭವಿಷ್ಯ ನಿಂತಿದೆ..
