ಪರಮ ಪೂಜ್ಯ ಡಾ. ಶರಣಬಸಪ್ಪ ಅಪ್ಪ ಅವರು ಗುರುವಾರ ರಾತ್ರಿ ಲಿಂಗೈಕ್ಯರಾದರು. ಶರಣಬಸವೇಶ್ವರ ಮಹಾಮನೆಯ ಮುಂಭಾಗ ಅಪ್ಪಾಜೀ ಪಾರ್ಥಿವ ಶರೀರ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು, ಅಪಾರ ಸಂಖ್ಯೆಯಲ್ಲಿ ಭಕ್ತರು ಬರುತ್ತಿದ್ದಾರೆ.
ಕಲಬುರಗಿ, ಯಾದಗಿರಿ, ಬೀದರ್, ರಾಯಚೂರು ಸೇರಿದಂತೆ ಕಲ್ಯಾಣ ಕರ್ನಾಟಕದ ಕುಗ್ರಾಮಗಳಿಂದ ಭಕ್ತ ಸಾಗರವೇ ದೇವಸ್ಥಾನಕ್ಕೆ ಹರಿದು ಬರುತ್ತಿದೆ. ಸರತಿ ಸಾಲಿನಲ್ಲಿ ನಿಂತು ಲಕ್ಷಾಂತರ ಭಕ್ತರು ಅಪ್ಪಾಜಿಯ ದರ್ಶನ ಪಡೆದು ಕಣ್ಣೀರು ಹಾಕುತ್ತಿದ್ದಾರೆ. ‘ದಾಸೋಹ, ಶಿಕ್ಷಣ ಕ್ರಾಂತಿ ಮಾಡಿದ ಅಪ್ಪ ಅವರನ್ನು ಕಳೆದುಕೊಂಡು ನಾವು ಬಡವಾಗಿದ್ದೇವೆ. ಇಂತಹ ದೇವರನ್ನು ಕಳೆದುಕೊಂಡಿದ್ದು ನಮಗೆ ಬಹಳ ದುಃಖ ತರಿಸಿದೆ’ ನೊಂದು ಮಾತನಾಡಿದ್ದಾರೆ.
ಇತ್ತ ಶರಣಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಅಂತಿಮ ವಿಧಿವಿಧಾನಕ್ಕೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಪೂಜ್ಯ ಅಪ್ಪ ಅವರ ಸಮಾಧಿ ಬಳಿ ಇಂದು 5 ಗಂಟೆಗೆ ಅಂತ್ಯಸಂಸ್ಕಾರಕ್ಕೆ ಸಿದ್ಧತೆ ಮಾಡಿಕೊಂಡಿದ್ದು, ಪಂಚ ಪೀಠ ಮತ್ತು ಬಸವಾದಿ ಶರಣರ ತತ್ವದ ಪ್ರಕಾರ ಅಂತ್ಯಕ್ರಿಯೆ ಮಾಡಲಾಗುತ್ತಿದೆ. ಅಂತ್ಯಕ್ರಿಯೆ ಸಮಾಧಿಯನ್ನು ಉದ್ದ 16 ಪಾದ, ಅಂಗುಲ 9 ಪಾದ, ಮೂಲ 3 ಪಾದ ಅಂಗುಲ ಕ್ರಿಯಾ ಸಮಾದಿ ನಿರ್ಮಾಣ ಮಾಡಲಾಗಿದೆ. ಪೂಜ್ಯ ಅಪ್ಪಾಜಿ ಅವರ ಅಂತ್ಯಕ್ರಿಯೆಗೆ 1 ಲಕ್ಷಕ್ಕೂ ಅಧಿಕ ಬಿಲ್ವ ಪತ್ರೆ, 5050 ವಿಭೂತಿ ಬಳಕೆ ಮಾಡಲಾಗುವುದು. ಅಂತಿಮ ನಮನ ಸಲ್ಲಿಸಲು ಕಲ್ಯಾಣ ಕರ್ನಾಟಕ ಭಾಗದ ಪ್ರಮುಖ ಮಠಾಧೀಶರು ಭಾಗಿಯಾಗಲಿದ್ದಾರೆ.
