ಬೆಂಗಳೂರು: ಜಿಲ್ಲೆಯ ಖಾನಾಪುರ ತಾಲೂಕಿನ ಚೋರ್ಲಾ ಘಾಟ್‌ನಲ್ಲಿ 2022ರ ಅಕ್ಟೋಬರ್ ನಲ್ಲಿ ನಡೆದಿದೆ ಎನ್ನಲಾದ ರೂ. 400 ಕೋಟಿ (Belagavi Rs.400 Cr Robbery) ಮೌಲ್ಯದ ಹಣ ಸಾಗಿಸುತ್ತಿದ್ದ ಎರಡು ಕಂಟೇನರ್‌ಗಳ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಗೃಹ ಸಚಿವ ಜಿ. ಪರಮೇಶ್ವರ್ ಮಾತನಾಡಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗೋವಾದಿಂದ ಮಹಾರಾಷ್ಟ್ರಕ್ಕೆ ಸಾಗಿಸುತ್ತಿದ್ದ ಈ ಹಣವು ಮಹಾರಾಷ್ಟ್ರದ ರಿಯಲ್ ಎಸ್ಟೇಟ್ ಉದ್ಯಮಿ ಕಿಶೋರ್ ಶೇಟ್ ಎಂಬುವವರಿಗೆ ಸೇರಿದ್ದು, ನಾಸಿಕ್ ಮೂಲದ ಸಂದೀಪ್ ಪಾಟೀಲ್ ಎಂಬುವರ ಅಪಹರಣದಿಂದ ಈ ಪ್ರಕರಣ ಬೆಳಕಿಗೆ ಬಂದಿದೆ ಎಂದಿದ್ದಾರೆ. ಮಹಾರಾಷ್ಟ್ರ ಮುಖ್ಯಮಂತ್ರಿ ಫಡ್ನವೀಸ್ ಅವರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ತನಿಖೆಗೆ ವಿಶೇಷ ತನಿಖಾ ದಳ (SIT) ರಚಿಸುವಂತೆ ಆದೇಶಿಸಿದ್ದಾರೆ.
ಕರ್ನಾಟಕ, ಮಹಾರಾಷ್ಟ್ರ ಮತ್ತು ಗೋವಾ ಪೊಲೀಸರು ಕಂಟೇನರ್‌ಗಳ ಹುಡುಕಾಟ ನಡೆಸುತ್ತಿದ್ದಾರೆ. ಮಹಾರಾಷ್ಟ್ರ ಪೊಲೀಸರು ಕರ್ನಾಟಕ ಪೊಲೀಸ್ ಇಲಾಖೆಗೆ ಪತ್ರ ಬರೆದಿದ್ದು, ಈ ಕುರಿತು ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ. ನಮಗೆ ಸರಿಯಾದ ಮಾಹಿತಿಗಳು ದೊರೆತ ನಂತರ ನಮ್ಮ ರಾಜ್ಯ ಪೊಲೀಸ್ ಇಲಾಖೆಯ ಪಾತ್ರ ಮತ್ತು ತೆಗೆದುಕೊಳ್ಳಬೇಕಾದ ಕ್ರಮಗಳ ಕುರಿತು ತಿಳಿಸಲಾಗುವುದು ಎಂದಿದ್ದಾರೆ.
