ವಿಜಯಪುರ: ಗಂಡು ಮಗುವಿನ ಆಸೆಗೆ ಇಲ್ಲೊಬ್ಬ ವ್ಯಕ್ತಿ ಪತ್ನಿಯ ತಲೆಯನ್ನೇ ಬೋಳಿಸಿರುವ ಹೀನ ಕೃತ್ಯವೊಂದು ಬೆಳಕಿಗೆ ಬಂದಿದೆ.
ಈ ಕೃತ್ಯ ವಿಜಯಪುರ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯ ಹೊನ್ನುಟಗಿ ಗ್ರಾಮದಲ್ಲಿ ನಡೆದಿದೆ. ಪಾಪಿ ಪತಿ ಹಾಗೂ ಆತನ ಕುಟುಂಬಸ್ಥರು ಸೇರಿಕೊಂಡು ಮಾಟಗಾತಿಯೊಬ್ಬರ ಮಾತು ನಂಬಿ ಚಿತ್ರಹಿಂಸೆ ನೀಡಿದ್ದಲ್ಲದೇ, ಮಹಿಳೆಯ ತಲೆಯಲ್ಲಿ ರಕ್ತ ಕಾಣುವಂತೆ ತಲೆ ಬೋಳಿಸಿದ್ದಾರೆ. ಗಂಡು ಮಕ್ಕಳು ಆಗಿಲ್ಲ ಎಂಬ ಕಾರಣಕ್ಕೆ ಈ ಕೃತ್ಯ ಎಸಗಿದ್ದಾರೆ ಎನ್ನಲಾಗಿದೆ.
ಹಲವು ದಿನಗಳ ಹಿಂದೆಯೇ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಜ್ಯೋತಿ ದಳವಾಯಿ ಎಂಬ ಮಹಿಳೆಯೇ ಈ ರೀತಿ ಚಿತ್ರ ಹಿಂಸೆ ಅನುಭವಿಸಿದವರು. ಜ್ಯೋತಿ ಕಳೆದ 8 ವರ್ಷಗಳ ಹಿಂದೆ ದುಂಡೇಶ್ ಎಂಬ ವ್ಯಕ್ತಿಯನ್ನು ಮದುವೆಯಾಗಿದ್ದರು. ಈ ದಂಪತಿಗೆ ಮೂವರು ಹೆಣ್ಣ ಮಕ್ಕಳಿದ್ದರು. ಆದರೆ, ಪತಿಗೆ ಗಂಡು ಮಗು ಬೇಕಿತ್ತು. ಗಂಡು ಮಗು ಆಗದಿದ್ದ ಕಾರಣ ಪತ್ನಿಗೆ ಮಾನಸಿಕ ಹಾಗೂ ದೈಹಿಕ ಚಿತ್ರ ಹಿಂಸೆ ನೀಡುತ್ತಿದ್ದ ಎನ್ನಲಾಗಿದೆ. ಆತನೊಂದಿಗೆ ಆತನ ತಾಯಿ ಹಾಗೂ ತಂದೆ ಕೂಡ ಚಿತ್ರಹಿಂಸೆ ನೀಡುತ್ತಿದ್ದರೆಂಬ ಆರೋಪ ಕೂಡ ಕೇಳಿ ಬಂದಿದೆ.
ಮೂರು ಹೆಣ್ಣ ಮಕ್ಕಳಾದ ನಂತರ ನಾಲ್ಕನೇ ಮಗುವಿಗಾಗಿ ತಯಾರಿ ನಡೆಸಿದ್ದ ದುಂಡೇಶ್ ಅದು ಗಂಡು ಮಗು ಆಗಬೇಕೆಂದು ಮಾಟಗಾತಿಯ ಮೊರೆ ಹೋಗಿದ್ದಾನೆ. ಕೊಲ್ಹಾರ ತಾಲೂಕಿನ ಮುಳಗಾಡ ಮೂಲದ ಮಂಗಳಾ ಎಂಬ ಮಾಟಗಾತಿಯ ಮೊರೆ ಹೋಗಿ ಆಕೆ ಹೇಳಿದಂತೆ ಕೇಳಿದ್ದಾನೆ. ದುಂಡೇಶ್ ಹಾಗೂ ಆತನ ಕುಟುಂಬಸ್ಥರಿಗೆ ಮಾಟಗಾತಿ ಮಂಗಳಾ, ನಿನ್ನ ಪತ್ನಿಯ ಮೈಯಲ್ಲಿ ದೆವ್ವವಿದೆ. ಇದೇ ಕಾರಣದಿಂದ ನಿಮಗೆ ಗಂಡು ಮಗು ಪಡೆಯಲು ಸಾಧ್ಯವಾಗುತ್ತಿಲ್ಲ.
ದೆವ್ವ ಬಿಡಿಸಬೇಕಾದರೆ ಆಕೆಯ ನೆತ್ತಿಯ ಭಾಗದಲ್ಲಿ ರಕ್ತ ಕಾಣುವಂತೆ ಕೂದಲು ಕತ್ತರಿಸಬೇಕೆಂದು ಹೇಳಿದ್ದಾಳೆ. ಇದನ್ನು ನಂಬಿದ ಪಾಪಿ ಪತಿ, ಜ್ಯೋತಿ ಮೇಲೆ ಹಲ್ಲೆ ಮಾಡಿದ್ದಾನೆ. ಜ್ಯೋತಿ ಒಪ್ಪದಿದ್ದಾಗ ಬಲವಂತವಾಗಿ ಬ್ಲೇಡ್ ನಿಂತ ರಕ್ತ ಬರುವಂತೆ ಕೂದಲು ಕತ್ತರಿಸಿದ್ದಾನೆ. ಆನಂತರ ತೆಗೆದುಕೊಂಡು ಹೋಗಿ ಮಾಟಗಾತಿಯ ಸೂಚನೆಯಂತೆ ಕೂದಲನ್ನು ಸ್ಮಶಾನದಲ್ಲಿ ಸುಟ್ಟಿದ್ದಾನೆ. ಇತ್ತ ಪತಿಯ ಕೃತ್ಯದಿಂದಾಗಿ ತೀವ್ರ ರಕ್ತಸ್ರಾವದಿಂದಾಗಿ ಜ್ಯೋತಿ ಆಸ್ಪತ್ರೆ ಸೇರಿದ್ದಾರೆ. ಚಿಕಿತ್ಸೆ ಪಡೆದ ನಂತರ ತವರು ಮನೆಗೆ ಹೋಗಿದ್ದಾರೆ. ಅಲ್ಲಿ ಕುಟುಂಬಸ್ಥರಿಗೆ ನಡೆದ ಘಟನೆಯಲ್ಲಿ ವಿವರಿಸಿದ್ದಾರೆ. ನಂತರ ಕುಟುಂಬಸ್ಥರು ಹಾಗೂ ಪತ್ನಿ ಜ್ಯೋತಿ ವಿಜಯಪುರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.
