ಬೆಂಗಳೂರು, ಫೆ.27: ದೆಹಲಿಯ ಮಾಜಿ ಸಿಎಂ ಅರವಿಂದ್ ಕೇಜ್ರಿವಾಲ್‌ಗೆ ಬಿಗ್ ರಿಲೀಫ್ ಸಿಕ್ಕಿದೆ. ಅವರ ಜೊತೆಗೆ ಮಾಜಿ ಡಿಸಿಎಂ ಮನೀಶ್ ಸಿಸೋಡಿಯಾ ಕೂಡ ನಿರಾಳರಾಗಿದ್ದಾರೆ. ಅವರ ವಿರುದ್ಧವಾಗಿ ಇದ್ದ ಅಬಕಾರಿ ನೀತಿ ಕೇಸ್ ಕೊನೆಗೂ ಖುಲಾಸೆಗೊಂಡಿದೆ. ದೆಹಲಿಯ ರೌಸ್ ಅವೆನ್ಯೂ ನ್ಯಾಯಾಲಯ ಪ್ರಕರಣದ ಎಲ್ಲಾ 23 ಆರೋಪಿಗಳನ್ನ ಖುಲಾಸೆ ಮಾಡಿದೆ. 2021-22ರಲ್ಲಿ ದೆಹಲಿ ಸರ್ಕಾರ ಜಾರಿಗೊಳಿಸಿದ್ದ ಮದ್ಯ ನೀತಿಯಲ್ಲಿ ಸಾವಿರಾರು ಕೋಟಿ ರೂ. ಹಗರಣ ಆಗಿದೆ ಅಂತ ಆರೋಪಿಸಲಾಗಿತ್ತು. ಈ ಪ್ರಕರಣದಲ್ಲಿ ಕೇಂದ್ರ ತನಿಖಾ ಸಂಸ್ಥೆಗಳಾದ ಸಿಬಿಐ ಹಾಗೂ ಇಡಿ ತನಿಖೆ ನಡೆಸಿದ್ದವು. ಕೇಜ್ರಿವಾಲ್ ಹಾಗೂ ಸಿಸೋಡಿಯಾ ಅರೆಸ್ಟ್ ಕೂಡ ಆಗಿದ್ದರು. ಆದ್ರೆ ಈ ಪ್ರಕರಣದ ವಿಚಾರಣೆ ನಡೆಸಿದ ದೆಹಲಿ ನ್ಯಾಯಾಲಯ ಯಾವುದೇ ನಿರ್ದಿಷ್ಟ ಸಾಕ್ಷ್ಯಾಧಾರಗಳಿಲ್ಲ ಅಂತ ಆರೋಪಿಗಳನ್ನ ಕೇಸ್‌ನಿಂದ ಖುಲಾಸೆಗೊಳಿಸಿದೆ. ಅಂದು ದೆಹಲಿ ಸರ್ಕಾರ ಜಾರಿಗೊಳಿಸಿದ್ದ ಅಬಕಾರಿ ನೀತಿಯಲ್ಲಿ ಯಾವುದೇ ಪಿತೂರಿ ಅಥವಾ ಕ್ರಿಮಿನಲ್ ಉದ್ದೇಶ ಇರಲಿಲ್ಲ ಅಂತ ತೀರ್ಪು ನೀಡಿದೆ. ಜೊತೆಗೆ ತನಿಖೆಯಲ್ಲಿನ ಲೋಪಗಳಿಂದಾಗಿ ಸಿಬಿಐಗೆ ನ್ಯಾಯಾಲಯ ಛೀಮಾರಿ ಹಾಕಿದೆ.

ಪ್ರಕರಣದಲ್ಲಿ ಖುಲಾಸೆ: ಕೇಜ್ರಿವಾಲ್ ಹೇಳಿದ್ದೇನು?
ದೆಹಲಿಯ ರೌಸ್ ಅವೆನ್ಯೂ ನ್ಯಾಯಾಲಯ ಅವರಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕೇಜ್ರವಾಲ್, ‘ದೆಹಲಿ ಅಬಕಾರಿ ನೀತಿ ಪ್ರಕರಣ ಸಂಬಂಧ ಕಳೆದ ಕೆಲವು ವರ್ಷಗಳಿಂದ ಬಿಜೆಪಿ ನಾಯಕರು ನಮ್ಮ ಮೇಲೆ ಆರೋಪ ಮಾಡುತ್ತಿದ್ದರು. ಇಂದು ನ್ಯಾಯಾಲಯವು ಈ ಎಲ್ಲಾ ಆರೋಪಗಳನ್ನು ತಿರಸ್ಕರಿಸಿದೆ. ಇನ್ನೂ ಈ ಬಗ್ಗೆ ಬಿಕ್ಕಿ ಬಿಕ್ಕಿ ಅತ್ತಿರುವ ಕೇಜ್ರಿವಾಲ್ ಸತ್ಯಮೇವ ಜಯತೆ ಅಂತ ಪ್ರತಿಕ್ರಿಯಿಸಿದ್ದಾರೆ. ಇದು ಸತ್ಯಕ್ಕೆ ಲಭಿಸಿದ ಗೆಲುವು’ ಎಂದು ಭಾವುಕರಾಗಿದ್ದಾರೆ. ‘ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ನಮ್ಮ ಪಕ್ಷದ (ಎಎಪಿ) ವಿರುದ್ಧ ಪಿತೂರಿ ನಡೆಸಿದ್ದರು. ಹಾಲಿ ಮುಖ್ಯಮಂತ್ರಿಯಾಗಿದ್ದ ನನ್ನನ್ನೂ ಸೇರಿದಂತೆ ಐವರು ಎಎಪಿ (ಆಮ್ ಆದ್ಮಿ ಪಕ್ಷ) ನಾಯಕರನ್ನು ಬಂಧಿಸಲಾಗಿತ್ತು. ನಮ್ಮ ಮೇಲೆ ಇಲ್ಲ ಸಲ್ಲದ ಆರೋಪ ಹೊರಿಸಲಾಗಿತ್ತು. ಪ್ರತಿ ಚಾನೆಲ್‌ನಲ್ಲಿಯೂ ನಮ್ಮನ್ನು ಭ್ರಷ್ಟರೆಂದು ಬಿಂಬಿಸಲಾಗಿತ್ತು. ಆದರೆ, ನಾನು ಭ್ರಷ್ಟನಲ್ಲ. ನಾನು ಪ್ರಾಮಾಣಿಕತೆಯನ್ನು ಮಾತ್ರ ಗಳಿಸಿದ್ದೇನೆ. ಕೇಜ್ರವಾಲ್, ಸಿಸೋಡಿಯಾ ಸೇರಿದಂತೆ ಎಎಪಿ ನಾಯಕರು ಪ್ರಾಮಾಣಿಕರು ಎಂದು ನ್ಯಾಯಾಲಯ ಹೇಳಿದೆ’ ಎಂದು ಅವರು ಕಣ್ಣೀರು ಹಾಕಿದ್ದಾರೆ. ಒಟ್ಟಿನಲ್ಲಿ ತಮ್ಮ ಮೇಲಿದ್ದ ಕಪ್ಪುಚುಕ್ಕೆ ಕಳಚಿರುವ ಕಾರಣ ಅರವಿಂದ್ ಕೇಜ್ರಿವಾಲ್ ದೆಹಲಿ ರಾಜಕಾರಣದಲ್ಲಿ ಮತ್ತಷ್ಟು ಶಕ್ತಿಶಾಲಿ ಆಗ್ತಾರಾ? ಅಂತ ಕಾದು ನೋಡಬೇಕಿದೆ.
