ಬೆಂಗಳೂರು: ವಿಶೇಷ ಚೇತನ ಮಕ್ಕಳ ಬಾಳಲ್ಲಿ ಸಂತಸ ಮೂಡಲಿ ಎಂಬ ನಿಟ್ಟಿನಲ್ಲಿ ಬೈಕ್ ಮತ್ತು ಜೀಪ್ ರ್ಯಾಲಿ ಹಮ್ಮಿಕೊಳ್ಳಲಾಗಿದೆ ಎಂದು ಸ್ಪರ್ಶ್ ಫೌಂಡೇಶನ್ ಸಂಸ್ಥಾಪಕರಾದ ಗಾಯತ್ರಿ ಹೇಳಿದರು.

ನಗರದಲ್ಲಿ ಸ್ಪರ್ಶ್ ಫೌಂಡೇಶನ್, ಹಸಿರೋತ್ಸವ ಫೋರಂ ಮತ್ತು ಸುದಯ ಫೌಂಡೇಶನ್ ಸಹಯೋಗದೊಂದಿಗೆ ಸೋರ್ ಬೇರಿ ಹೋಟೆಲ್ ನಿಂದ ಆರಂಭವಾಗಿ ಹಾಲಿಡೇ ಇನ್ ಹೋಟೆಲ್ ವರೆಗೆ “ಸಂತಾ ರೈಡ್ ಮತ್ತು ಡ್ರೈವ್” ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಗಾಯತ್ರಿ ಅವರು, ನಾವು ವಿಶೇಷ ಚೇತನವುಳ್ಳ ಮಕ್ಕಳ ಶಿಕ್ಷಣ, ಚಿಕಿತ್ಸೆ ಮತ್ತು ಒಟ್ಟಾರೆ ಅಭಿವೃದ್ಧಿಯ ಮೇಲೆ ಕೇಂದ್ರೀಕರಿಸಿ ಈವರೆಗೆ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸಿದ್ದೇವೆ. ಅದರಂತೆ ಇಂದು ಕೈಗೊಂಡ ಸಂತಾ ರೈಡ್‌ ಕೇವಲ ಆಯೋಜನೆಯಲ್ಲ, ಜನರಲ್ಲಿ ಅರಿವು ಮೂಡಿಸಲು ಮತ್ತು ಮಕ್ಕಳಿಗೆ ಅರ್ಥಪೂರ್ಣವಾಗಿ ಬೆಂಬಲ ನೀಡಲು ಸಮುದಾಯವನ್ನು ಪ್ರೋತ್ಸಾಹಿಸುವ ಒಂದು ಮಾರ್ಗವಾಗಿದೆ ಎಂದರು.

ಹಸಿರೋತ್ಸವ ಫೋರಂ ನ ಸಂಸ್ಥಾಪಕರಾದ ಆರತಿ ಮಾತನಾಡಿ, ಈ ರೀತಿಯ ಕಾರ್ಯಕ್ರಮಗಳ ಮೂಲಕ ನಾವು ವಿಶೇಷ ಚೇತನವುಳ್ಳ ಮಕ್ಕಳಿಗೆ ಬೆಂಬಲವನ್ನು ಸೂಚಿಸಬೇಕು. ಅವರ ಉತ್ತಮ ಭವಿಷ್ಯಕ್ಕಾಗಿ ನಾವು ನೆರವಾಗಬೇಕು ಎಂದರು.

ಸುದಯ ಫೌಂಡೇಶನ್‌ನ ಸಂಸ್ಥಾಪಕರಾದ ಡಾ. ದಿವ್ಯಾ ರಂಗೇನಹಳ್ಳಿ ಮಾತನಾಡಿ, ಪ್ರತಿ ವಿಶೇಷ ಚೇತನವುಳ್ಳ ಮಗುವು ಗುಣಮಟ್ಟದ ಶಿಕ್ಷಣ ಮತ್ತು ಆರೈಕೆಯನ್ನು ಪಡೆಯಲು ಅರ್ಹವಾಗಿದೆ. ಸಂಸ್ಥೆಗಳು ಮತ್ತು ನಾಗರಿಕರು ಈ ರೀತಿ ಒಟ್ಟಾಗಿ ಬಂದಾಗ ಮಾತ್ರ ಸಮಾಜವು ಅವರೊಂದಿಗಿದೆ ಎಂಬ ಪ್ರಬಲ ಸಂದೇಶವನ್ನು ಸಾರಲು ಸಾಧ್ಯ. ಹಬ್ಬದ ಆಚರಣೆಗಳನ್ನು ಒಂದು ಉತ್ತಮ ಸಾಮಾಜಿಕ ಕಾರಣದೊಂದಿಗೆ ಆಚರಿಸಿದರೆ ಅದಕ್ಕೊಂದು ಅರ್ಥ ಸಿಗಲಿದೆ. ಕ್ರಿಸ್‌ಮಸ್‌ ಆಚರಣೆಗೆ ಜೊತೆಗೆ ಇಂದು ಮಕ್ಕಳ ಅಗತ್ಯವನ್ನು ಪೂರೈಸುವ ಒಂದು ಉತ್ತಮ ಕೆಲಸ ಜರುಗಿದೆ ಎಂದು ಸಂತಸ ವ್ಯಕ್ತಪಡಿಸಿದರು.

ಈ ರ್ಯಾಲಿ ಯಲ್ಲಿ ಭಾಗವಹಿಸಿದ ಮಕ್ಕಳಿಗೆ ಚರ್ಚ್ ಸ್ಟ್ರೀಟ್ ರಸ್ತೆಯ ಸಿಬಿಡಿ ಹೋಟೆಲ್ ಆಕರ್ಷಕ ಉಡುಗೊರೆಗಳನ್ನು ನೀಡಿ ಸಂತಸ ಪಡಿಸಿದರು. ರ್ಯಾಲಿ ಯಲ್ಲಿ ಸಾಂತಾ ಕ್ಲಾಸ್ ಉಡುಪು ಧರಿಸಿ 30ಕ್ಕೂ ಹೆಚ್ಚು ಹಬ್ಬದ ರೀತಿಯಲ್ಲಿ ಅಲಂಕರಿಸಿದ ಬೈಕ್‌ಗಳು ಮತ್ತು ಜೀಪ್‌ಗಳಲ್ಲಿ ಸಂಚರಿಸಲಾಯಿತು. ಈ ಆಕರ್ಷಕ ರ್ಯಾಲಿ ಕಂಡು ಜನರು ಸಂಭ್ರಮದಿಂದ ವೀಕ್ಷಿಸಿದರು.

Share.
Leave A Reply