ಕಳೆದ ವಾರ ಅಪಾರ ಭಕ್ತರಿಂದ ಅಗಲಿದ ಜ್ಞಾನದಾಸೋಹಿ ಡಾ.ಶರಣಬಸಪ್ಪ ಅಪ್ಪ ಹಾಗೂ ವಿಶ್ವಒಕ್ಕಲಿಗರ ಸಂಸ್ಥಾನ ಮಠದ ಶ್ರೀ ಕುಮಾರ ಚಂದ್ರಶೇಖರನಾಥ ಸ್ವಾಮೀಜಿ ಅವರಿಗೆ ವಿಧಾನಸಭೆಯಲ್ಲಿಂದು ಭಾವಪೂರ್ಣ ಶ್ರದ್ದಾಂಜಲಿ ಸಲ್ಲಿಸಲಾಯಿತು. ಜೆಡಿಎಸ್ ಶಾಸಕ ಶರಣಗೌಡ ಕಂದಕೂರ ಮಾತನಾಡಿ, ಕಲಬುರಗಿ ವಿಮಾನ ನಿಲ್ದಾಣಕ್ಕೆ ಶರಣಬಸಪ್ಪ ಅಪ್ಪ ಅವರ ಹೆಸರನ್ನು ಇಡಬೇಕೆಂದು ಮನವಿ ಮಾಡಿದರು. ಶಾಸಕ ಅಲ್ಲಮಪ್ರಭು ಪಾಟೀಲ್ ಮಾತನಾಡಿ, ಅಪ್ಪ ಅವರಿಗೆ ಕಾಯಕ ದಾಸೋಹ ರತ್ನ ಪ್ರಶಸ್ತಿ ನೀಡಬೇಕು ಎಂದರು.
ಬಿಜೆಪಿ ಶಾಸಕ ವಿಜಯೇಂದ್ರ ಮಾತನಾಡಿ, ಶರಣಬಸಪ್ಪ ಅಪ್ಪ ಹಾಗೂ ಶ್ರೀ ಕುಮಾರ ಚಂದ್ರಶೇಖರನಾಥ ಸ್ವಾಮೀಜಿಗಳು ಶಿಕ್ಷಣ ಹಾಗೂ ಧಾರ್ಮಿಕ ಕ್ಷೇತ್ರದಲ್ಲಿ ಅಪಾರ ಕೊಡುಗೆ ನೀಡಿದ್ದಾರೆ. ಅವರ ಸಂತರಿಬ್ಬರ ಅಗಲಿಕೆ ನಾಡಿಗೆ ತುಂಬಲಾರದ ನಷ್ಟ ಎಂದು ಹೇಳಿದರು.
ಕೃಷಿ ಸಚಿವ ಚಲುವರಾಯಸ್ವಾಮಿ, ಜೆಡಿಎಸ್ ಶಾಸಕ ಜಿ.ಟಿ ದೇವೆಗೌಡ, ವಿರೋಧ ಪಕ್ಷದ ಉಪನಾಯಕ ಅರವಿಂದ ಬೆಲ್ಲದ್, ಶಾಸಕರಾದ ಬಸವರಾಜ ಮತ್ತಿಮೋಡ್, ಡಾ.ಅವಿನಾಶ್ ಜಾದವ್, ಜಿ.ಟಿ.ದೇವೇಗೌಡ, ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ಸಂತರ ಗುಣಗಾನ ಮಾಡಿ ಸಂತಾಪ ಸೂಚಿಸಿದರು. ನಂತರ ಸದನದಲ್ಲಿ ಸದಸ್ಯರೆಲ್ಲರೂ ಎದ್ದು ನಿಂತು ಅಗಲಿತ ಸಂತರಿಗೆ ಮೌನ ಆಚರಿಸುವ ಮೂಲಕ ಶ್ರದ್ದಾಂಜಲಿ ಅರ್ಪಿಸಿದರು.
