5 ವರ್ಷದ ಅವಧಿಯಲ್ಲಿ ಎರಡೂವರೆ ವರ್ಷ ಸಿದ್ದರಾಮಯ್ಯ ಸಿಎಂ.. ಇನ್ನುಳಿದ ಅರ್ಧ ಅವಧಿಗೆ ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿ ಅನ್ನೋದು 2023ರ ಮೇ ತಿಂಗಳಿನಿಂದಲೂ ಚರ್ಚೆಯಾಗುತ್ತಲೇ ಇದೆ.. ಇದೇ ಅವಧಿಯಲ್ಲಿ ಡಿಕೆಶಿ ಸಿಎಂ ಆಗಿಯೇ ಆಗ್ತಾರೆ ಅಂತಾ ಬೆಂಬಲಿಗರು ಆಗಾಗ ಬಾಂಬ್ ಸಿಡಿಸುತ್ತಿರೋದು ಹೊಸದೇನಲ್ಲ.. ಆದ್ರೀಗ ಸದ್ಯದ ಬೆಳವಣಿಗೆಗಳನ್ನು ಗಮನಿಸಿದರೆ 50:50 ಒಪ್ಪಂದ ನಿಜ ಎಂಬ ಮುನ್ಸೂಚನೆ ನೀಡುತ್ತಿದೆ.. ಅರ್ಧ ಅವಧಿ ಪೂರೈಸಿ ಸಿದ್ದರಾಮಯ್ಯ ಕೆಳಗಿಳಿಯೋದು ಪಕ್ಕಾ ಎಂಬಂತೆ ಕಾಣುತ್ತಿದೆ.. ಸೆಪ್ಟೆಂಬರ್ ಕ್ರಾಂತಿ ಘಟಿಸೋದು ದೃಢ ಅಂತಾ ಭಾಸವಾಗುತ್ತಿದೆ.
ಅಧಿಕಾರ ಹಂಚಿಕೆ ಸೂತ್ರದಂತೆ ನಡೆಯುತ್ತಿದೆ ಬೆಳವಣಿಗೆ?
ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕಾರದ ಸೂರ್ಯಾಸ್ತದ ಸಮಯ ಹತ್ತಿರ ಬಂದಂತೆ ಅನ್ನಿಸುತ್ತಿದೆ.. ಡಿಸಿಎಂ ಆಗಿರುವ ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿ ಗಾದಿಗೇರುವ ಸಮಯ ಸನ್ನಿಹಿತವಾದಂತೆ ಕಾಣ್ತಿದೆ… ಯಾಕಂದ್ರೆ, ರಾಜ್ಯ ಕಾಂಗ್ರೆಸ್‌ನಲ್ಲಿ ಹೈಕಮಾಂಡ್ ನಾಯಕರು ಮಹತ್ವದ ಬದಲಾವಣೆ ಪ್ರಕ್ರಿಯೆಗೆ ಕೈ ಹಾಕಿದ್ದಾರೆ.. ಅತಿದೊಡ್ಡ ಬದಲಾವಣೆಯ ಕ್ರಾಂತಿಗೆ ಈಗಿನಿಂದಲೇ ಮುಂದಡಿ ಇಟ್ಟಿದ್ದಾರೆ.. ಅದಕ್ಕೆ ಸಾಕ್ಷಿಯೇ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೇವಾಲ ಕರುನಾಡಿಗೆ ಎಂಟ್ರಿ ಕೊಟ್ಟಿದ್ದು, ಅತೃಪ್ತ ಶಾಸಕರ ಸಮಸ್ಯೆ ಆಲಿಸುವ ನೆಪದಲ್ಲಿ ಅಭಿಪ್ರಾಯ ಸಂಗ್ರಹಿಸುತ್ತಿದ್ದಾರೆ ಅಂತಾ ವಿಶ್ಲೇಷಿಸಲಾಗುತ್ತಿದೆ..
ರಾಷ್ಟ್ರ ರಾಜಕಾರಣಕ್ಕೆ ಸಿದ್ದು.. ಡಿಕೆಶಿ ಮುಖ್ಯಮಂತ್ರಿ ಪಟ್ಟ..?
ರಾಜ್ಯ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ಅಧಿಕಾರ ಹಂಚಿಕೆ ಬಗ್ಗೆ ಚರ್ಚೆ ನಡೆಯುತ್ತಲೇ ಇದೆ.. ಹೈಕಮಾಂಡ್ ಅಂಗಳದಲ್ಲಿ ಅಧಿಕಾರ ಹಂಚಿಕೆ ಒಪ್ಪಂದ ಆಗಿದ್ದರೂ, ಖುರ್ಚಿಯಿಂದ ಸಿದ್ದರಾಮಯ್ಯ ಕೆಳಗಿಳಿಯೋದು ಅಷ್ಟು ಸುಲಭದ ಮಾತಲ್ಲ.. ಯಾಕಂದ್ರೆ, ಸಿದ್ದರಾಮಯ್ಯಗೆ ಅತಿಹೆಚ್ಚು ಶಾಸಕರ ಬೆಂಬಲ ಇದೆ. ಮತ್ತು ಕಾಂಗ್ರೆಸ್‌ನ ಬ್ಯಾಕ್‌ಬೋನ್ ಅಹಿಂದ ವೋಟ್ ಬ್ಯಾಂಕ್ ಸಿದ್ದರಾಮಯ್ಯ ಬೆನ್ನಿಗಿದೆ.. ಒಂದೊಮ್ಮೆ ಸಿದ್ದರಾಮಯ್ಯರನ್ನು ಕೆಳಗಿಳಿಸಿದರೆ ರಾಜ್ಯ ಕಾಂಗ್ರೆಸ್‌ನಲ್ಲಿ ಅಲ್ಲೋಲ ಕಲ್ಲೋಲ ಪರಿಸ್ಥಿತಿ ನಿರ್ಮಾಣವಾಗಬಹುದು..
ಇದೇ ಕಾರಣಕ್ಕಾಗಿ ಸಿದ್ದರಾಮಯ್ಯರನ್ನು ಕುರ್ಚಿಯಿಂದ ಕೆಳಗಿಳಿಸೋ ಬದಲು ಹೈಕಮಾಂಡ್ ಸೂಕ್ಷ್ಮವಾದ ತಂತ್ರ ಹೆಣೆದಿದೆ ಅಂತಾ ಹೇಳಲಾಗ್ತಿದೆ. ಅದು ಏನಂದ್ರೆ ಸಿದ್ದರಾಮಯ್ಯರನ್ನು ರಾಷ್ಟ್ರ ರಾಜಕಾರಣಕ್ಕೆ ಕಳಿಸೋದು.. ಹೌದು.. ಇದರ ಮೊದಲ ಭಾಗವಾಗಿ ಎಐಸಿಸಿ ರಚಿಸಿರೋ ಒಬಿಸಿ ಸಲಹಾ ಮಂಡಳಿ ಪಟ್ಟಿಯಲ್ಲಿ ಸಿದ್ದರಾಮಯ್ಯಗೆ ಮೊದಲ ಸ್ಥಾನ ನೀಡಲಾಗಿದೆ. ಈ ಮೂಲಕ ಸಿದ್ದರಾಮಯ್ಯರನ್ನು ದಿಲ್ಲಿ ರಾಜಕಾರಣಕ್ಕೆ ತಳ್ಳಿ ರಾಜ್ಯದಲ್ಲಿ ಎದ್ದಿರುವ ಗೊಂದಲ ಬಗೆಹರಿಸೋದು ಹೈಕಮಾಂಡ್ ಪ್ಲ್ಯಾನ್ ಎನ್ನಲಾಗಿದೆ..
ಸೆಪ್ಟೆಂಬರ್ ಕ್ರಾಂತಿಗೆ ವೇದಿಕೆ ಸಜ್ಜುಗೊಳಿಸಿದ ಹೈಕಮಾಂಡ್?
ಮತ್ತೊಂದೆಡೆ, ಸೆಪ್ಟೆಂಬರ್‌ನಲ್ಲಿ ರಾಜ್ಯ ಕಾಂಗ್ರೆಸ್‌ನಲ್ಲಿ ದೊಡ್ಡ ಕ್ರಾಂತಿ ನಡೆಯಲಿದೆ ಅಂತಾ ವಿಪಕ್ಷ ನಾಯಕರುಗಳು ಹೇಳಿಕೆ ನೀಡಿ ಸಂಚಲನ ಸೃಷ್ಟಿಸುತ್ತಿದ್ದಾರೆ.. ಇದರ ಭಾಗವಾಗಿಯೇ ಏನೋ ಕಾಂಗ್ರೆಸ್ ಹೈಕಮಾಂಡ್, ಸಿದ್ದರಾಮಯ್ಯರನ್ನು ರಾಷ್ಟ್ರ ರಾಜಕಾರಣಕ್ಕೆ ಕಳಿಸಲು ದಾರಿ ರೆಡಿ ಮಾಡಿದೆ.. ಒಬಿಸಿ ಸಲಹಾ ಮಂಡಳಿಯಲ್ಲಿ ಸಿದ್ದರಾಮಯ್ಯಗೆ ಸ್ಥಾನ ನೀಡಿ, ಸಿದ್ದುಗೆ ದಿಲ್ಲಿ ರಾಜಕಾರಣದ ದಾರಿ ತೋರಿಸಿದೆ.. ಆದ್ರೆ ಸಿದ್ದರಾಮಯ್ಯ ರಾಷ್ಟ್ರ ರಾಜಕಾರಣಕ್ಕೆ ಹೋಗುವ ಬಗ್ಗೆ ಸುಳಿವು ಕೊಟ್ಟಿಲ್ಲ. ಒಂದೊಮ್ಮೆ ಹೈಕಮಾಂಡ್ ಹೇಳಿದಂತೆ ಸಿದ್ದು ನಡೆದುಕೊಂಡರೆ ಅನಿವಾರ್ಯವಾಗಿ ಸಿಎಂ ಸ್ಥಾನ ತ್ಯಾಗ ಮಾಡಬೇಕಾದ ಪರಿಸ್ಥಿತಿ ಬರಬಹುದು. ಆಗ ಸಹಜವಾಗಿಯೇ ಡಿಕೆಶಿ ಹೆಗಲಿಗೆ ಸಿಎಂ ಸ್ಥಾನದ ಜವಾಬ್ದಾರಿ ಬೀಳಲಿದೆ ಅಂತಾ ಹೇಳಲಾಗ್ತಿದೆ..
ಶಾಸಕರ ಜೊತೆಗೆ ಸುರ್ಜೇವಾಲ ಒನ್ ಟು ಒನ್ ಮೀಟಿಂಗ್!
ಇನ್ನೊಂದು ಮಹತ್ವದ ಬೆಳವಣಿಗೆ ಅಂದರೆ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೇವಾಲ ಪದೇ ಪದೆ ರಾಜ್ಯಕ್ಕೆ ಆಗಮಿಸುತ್ತಿದ್ದಾರೆ. ಕಳೆದ ವಾರ ಬಂದು ಹೋಗಿ ಈಗ ಮತ್ತೆ ವಾಪಸ್ ಬಂದಿದ್ದು, ಕಳೆದ ಮೂರು ದಿನಗಳಿಂದ ಬೆಂಗಳೂರಿನಲ್ಲೇ ಬೀಡು ಬಿಟ್ಟಿದ್ದಾರೆ.. 3ನೇ ದಿನವೂ ಶಾಸಕರ ಜೊತೆ ಸುರ್ಜೇವಾಲ ಒನ್ ಟು ಒನ್ ಮೀಟಿಂಗ್ ನಡೆಸಿದ್ದಾರೆ. ಅನುದಾನದ ಕೊರತೆ, ಅಭಿವೃದ್ಧಿ ಕೆಲಸಗಳ ಪ್ರಗತಿ ಬಗ್ಗೆ ಮಾಹಿತಿ ಪಡೆದಿದ್ದಾರೆ ಅಂತಾ ಹೇಳಲಾಗ್ತಿದೆ.. ಇನ್ನೂ ಕೆಲವು ಶಾಸಕರು ಸುರ್ಜೇವಾಲ ಮೀಟಿಂಗ್ ವೇಳೆ ಡಿಕೆಶಿ ಪರ ಬ್ಯಾಟಿಂಗ್ ಮಾಡಿದ್ದಾರೆ ಅನ್ನೋ ಸೀಕ್ರೆಟ್ ಹೊರಬಿದ್ದಿದೆ.. ಸಹಜವಾಗಿಯೇ ಈ ವಿಚಾರ ಭಾರಿ ಕುತೂಹಲಕ್ಕೆ ಕಾರಣವಾಗಿದೆ…
ಒಟ್ನಲ್ಲಿ, ರಾಜ್ಯ ಕಾಂಗ್ರೆಸ್ ಮನೆಯಲ್ಲಿ ಅಧಿಕಾರ ಹಂಚಿಕೆ ಒಪ್ಪಂದದ ಕಿಚ್ಚು ನಿಧಾನಕ್ಕೆ ಕೆಲಸ ಆರಂಭಿಸಿದೆ. ಕಾಂಗ್ರೆಸ್ ಪಾಳಯದಲ್ಲಿ ಘಟಿಸುತ್ತಿಸುವ ಒಂದಿಷ್ಟು ಬೆಳವಣಿಗೆಗಳು ಸ್ಫೋಟಕ ಸುಳಿವು ನೀಡ್ತಿವೆ. ಆದ್ರೆ, ರಾಜಕೀಯದ ಕೊನೆಗಾಲದಲ್ಲಿರುವ ಸಿದ್ದರಾಮಯ್ಯ, ಅರ್ಧಕ್ಕೇ ಅಧಿಕಾರದಿಂದ ಕೆಳಗಿಳಿಯುತ್ತಾರಾ ಅಥವಾ ಡಿಕೆಶಿಗೆ ಬಿಟ್ಟು ಕೊಡದೇ ಪೂರ್ಣಾವಧಿ ಪೂರೈಸ್ತಾರಾ ಅನ್ನೋದು ಭಾರಿ ಕುತೂಹಲ ಹುಟ್ಟು ಹಾಕಿದೆ.
