ಬೆಂಗಳೂರು, ಫೆ.05: ಪ್ರಧಾನಿ ನರೇಂದ್ರ ಮೋದಿಯವರ ಮೇಲೆ ಕಾಂಗ್ರೆಸ್ ಸಂಸದರು ಹಲ್ಲೆಗೆ ಸಂಚು ರೂಪಿಸಿದ್ದರು ಅಂತಾ ಸ್ಪೀಕರ್ ಓ ಬಿರ್ಲಾ ಅವರು ಗಂಭೀರ ಆರೋಪ ಮಾಡಿದ್ದಾರೆ. ಬುಧವಾರ ಲೋಕಸಭೆ ಅಧಿವೇಶನದಲ್ಲಿ ನಡೆದ ಪ್ರತಿಭಟನೆಗಳ ಸಂದರ್ಭದಲ್ಲಿ ಮೋದಿ ಮೇಲೆ ಹಲ್ಲೆ ನಡೆಸಲು ಕಾಂಗ್ರೆಸ್ ಸಂಸದರು ಊಹಿಸಲಾಗದ ಘಟನೆಯೊಂದನ್ನು ಮಾಡಲು ಯೋಜಿಸಿದ್ದರು. ಹಾಗಾಗಿ ರಾಷ್ಟ್ರಪತಿಗಳ ಭಾಷಣಕ್ಕೆ ವಂದನಾ ನಿರ್ಣಯದ ಮೇಲೆ ಪ್ರಧಾನಿ ನೀಡಬೇಕಾಗಿದ್ದ ಉತ್ತರ ನೀಡುವುದನ್ನು ರದ್ದುಗೊಳಿಸಿದೆ ಅಂತಾ ಸ್ಪೀಕರ್ ಓಂ ಬಿರ್ಲಾ ತಿಳಿಸಿದ್ದಾರೆ.
ಸದನದಲ್ಲಿ ನಡೆದದ್ದೇನು? :
ಬುಧವಾರ ಹಲವು ಬಾರಿ ಮುಂದೂಡಿಕೆಯ ನಂತರ ಸಂಜೆ 5 ಗಂಟೆಗೆ ಲೋಕಸಭೆ ಕಲಾಪ ಶುರುವಾಯಿತು. ಪ್ರಧಾನಿ ಮೋದಿ ಬಂದು ರಾಷ್ಟ್ರಪತಿಗಳ ಭಾಷಣಕ್ಕೆ ವಂದನಾ ನಿರ್ಣಯದ ಮೇಲೆ ಉತ್ತರಿಸಲಿದ್ದಾರೆ ಎಂದು ಅನೇಕ ಸಂಸದರು ಕಾಯುತ್ತಿದ್ದರು. ಇದೇ ಸಮಯದಲ್ಲಿ ವಿರೋಧ ಪಕ್ಷದ ಸಂಸದರ ಪ್ರತಿಭಟನೆ ಮುಂದುವರಿದಿತ್ತು. ಎಂಟು ಅಥವಾ ಒಂಬತ್ತು ಮಂದಿ ಮಹಿಳಾ ಸಂಸದರು ಪ್ರಧಾನಿ ಮೋದಿ ಅವರ ಸೀಟನ್ನು ಸುತ್ತುವರಿದರು. ‘ಡೂ ವಾಟ್ ಈಸ್ ರೈಟ್’ ಎಂಬ ಬ್ಯಾನರ್ ಪ್ರದರ್ಶಿಸಿದಾಗ, ಅಲ್ಲಿಂದ ತೆರಳುವಂತೆ ಕೆಲವು ಸಚಿವರು ಕೋರಿದ್ದರಿಂದ ಅವರು ಹಿಂದೆ ಸರಿದರು.
ಸ್ಪೀಕರ್ ವಿವರಣೆ :
ಗುರುವಾರ ಲೋಕಸಭೆಯಲ್ಲಿ ಮಾತನಾಡಿದ ಸ್ಪೀಕರ್ ಓಂ ಬಿರ್ಲಾ, ವಿರೋಧ ಪಕ್ಷದ ಸಂಸದರ ವರ್ತನೆಯನ್ನು ಟೀಕಿಸುತ್ತಾ, ಇದು ಸಂಸದೀಯ ಸಂಪ್ರದಾಯಗಳಿಗೆ ವಿರುದ್ಧವಾಗಿದೆ. ಸದನದ ನಾಯಕರಾದ ಪ್ರಧಾನಿ ಮೋದಿ, ರಾಷ್ಟ್ರಪತಿಗಳ ಭಾಷಣಕ್ಕೆ ವಂದನಾ ನಿರ್ಣಯದ ಮೇಲೆ ಉತ್ತರಿಸಬೇಕಿದ್ದಾಗ, ಕಾಂಗ್ರೆಸ್‌ನ ಹಲವು ಸದಸ್ಯರು ಪ್ರಧಾನಿ ಸೀಟಿನ ಬಳಿ ತಲುಪಿ ಯಾವುದೋ ಅನಿರೀಕ್ಷಿತ ಕೃತ್ಯಕ್ಕೆ ಮುಂದಾಗಬಹುದು ಎಂಬ ಪಕ್ಕಾ ಮಾಹಿತಿ ನನಗೆ ಲಭಿಸಿತ್ತು. ಈ ಗೊಂದಲವು ಅನಪೇಕ್ಷಿತ ಘಟನೆಗೆ ಕಾರಣವಾಗಬಹುದು ಎಂಬ ಆತಂಕದಿಂದ, ತಕ್ಷಣವೇ ಪ್ರಧಾನಿಯವರನ್ನು ಲೋಕಸಭೆಗೆ ಬರಬೇಡಿ ಎಂದು ಕೋರಿದೆ ಅಂತಾ ಸ್ಪೀಕರ್ ತಿಳಿಸಿದ್ದಾರೆ.. ಒಂದು ವೇಳೆ ಆ ಘಟನೆ ನಡೆದಿದ್ದರೆ, ಅದು ದೇಶದ ಪ್ರಜಾಪ್ರಭುತ್ವದ ಸಂಪ್ರದಾಯಗಳನ್ನು ಛಿದ್ರಗೊಳಿಸುವ ಅತ್ಯಂತ ಅಸಹ್ಯಕರ ದೃಶ್ಯವಾಗುತ್ತಿತ್ತು. ಇದನ್ನು ತಡೆಯಲು ನಾನು ಪ್ರಧಾನಮಂತ್ರಿಯವರನ್ನು ಸದನಕ್ಕೆ ಬರಬೇಡಿ ಎಂದು ಕೋರಿದೆ. ಪ್ರಜಾಪ್ರಭುತ್ವದ ದೇವಾಲಯವಾದ ಸಂಸತ್ತಿನಲ್ಲಿ ಇಂತಹ ಘಟನೆಗಳನ್ನು ತಡೆಯಲು ತಾವು ಸದನವನ್ನು ಮುಂದೂಡಿದ್ದಾಗಿ ಓಂ ಬಿರ್ಲಾ ಹೇಳಿದ್ದಾರೆ.
ಆದರೆ, ಈ ಆರೋಪಗಳನ್ನು ತಳ್ಳಿಹಾಕಿರುವ ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ, ಇವು ‘ಹಸಿ ಸುಳ್ಳುಗಳು’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. “ಲೋಕಸಭೆಯಲ್ಲಿ ಮಾಜಿ ಸೇನಾ ಮುಖ್ಯಸ್ಥ ಜನರಲ್ ಎಂ.ಎಂ. ನರವಾಣೆ ಅವರ ಆತ್ಮಕಥೆಯ ಅಂಶಗಳನ್ನು ಪ್ರಸ್ತಾಪಿಸಲು ನನ್ನ ಸಹೋದರ ಹಾಗೂ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರಿಗೆ ಅನುಮತಿ ನೀಡದ ಕಾರಣ ಅಂದಿನಿಂದ ಕಾಂಗ್ರೆಸ್ ಪಕ್ಷ ಪ್ರತಿಭಟನೆಯ ಹಾದಿ ಹಿಡಿದಿದೆ. 2020ರ ಚೀನಾ ಗಡಿ ಬಿಕ್ಕಟ್ಟನ್ನು ಎದುರಿಸುವಲ್ಲಿ ರಾಜಕೀಯ ನಾಯಕತ್ವವು ಸೈನ್ಯವನ್ನು ಹೇಗೆ ನಿರ್ಲಕ್ಷಿಸಿತು ಎಂಬುದನ್ನು ಈ ಪುಸ್ತಕ ಬಹಿರಂಗಪಡಿಸುತ್ತದೆ” ಎಂದು ಪ್ರಿಯಾಂಕಾ ಗಾಂಧಿ ಹೇಳಿದ್ದಾರೆ.
