ಬೆಂಗಳೂರು, ಫೆ.01: ರೈತರು, ಕೃಷಿ ವಿದ್ಯಾರ್ಥಿಗಳು, ತಂತ್ರಜ್ಞರು ಇಲ್‌ ಕೇಳಿ.. ಫೆಬ್ರವರಿ 6ರಿಂದ 8ರವರೆಗೆ 3 ದಿನಗಳ ಕಾಲ ಅಂತಾರಾಷ್ಟ್ರೀಯ ವಾಣಿಜ್ಯ ಮೇಳ 2026 ನಡೆಯಲಿದೆ. ಕೃಷಿ ಇಲಾಖೆಯ ನೇತೃತ್ವದಲ್ಲಿ ಬೆಂಗಳೂರಿನ ತ್ರಿಪುರವಾಸಿನಿ ಅರಮನೆ ಮೈದಾನದಲ್ಲಿ ಈ ಮೇಳ ನಡೆಯಲಿದ್ದು, ಈ ಬಾರಿಯ ವಾಣಿಜ್ಯ ಮೇಳದ ಪ್ರಮುಖ ಧ್ಯೇಯ ಉತ್ಪಾದೋನ್ನತರ ಕೃಷಿ – ರೈತರ ಸಬಲೀಕರಣ. ಅಂದ್ರೆ, ರಾಜ್ಯದ ರೈತರ ಆದಾಯ ದ್ವಿಗುಣಗೊಳಿಸುವ ನಿಟ್ಟಿನಲ್ಲಿ ಕೃಷಿ ಇಲಾಖೆಯು ಈ ಮೇಳವನ್ನು ಆಯೋಜಿಸುತ್ತಿದೆ.

ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್‌ ಹಾಗೂ ಕೃಷ ಸಚಿವ ಚಲುವರಾಯಸ್ವಾಮಿ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಈ ಬಾರಿಯ ವಾಣಿಜ್ಯ ಮೇಳದಲ್ಲಿ, ರಾಜ್ಯ, ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದ ಗಣ್ಯರು ಭಾಗವಹಿಸಲಿದ್ದಾರೆ. ಕೇಂದ್ರ ಕೃಷಿ ಸಚಿವರು, ವಿವಿಧ ರಾಜ್ಯ ಸರ್ಕಾರಗಳ ಕೃಷಿ ಸಚಿವರು, ಅಂತಾರಾಷ್ಟ್ರೀಯ ಕೃಷಿ ಸಂಸ್ಥೆಗಳ ಪ್ರತಿನಿಧಿಗಳು, ಉದ್ಯಮಿಗಳು ಮತ್ತು ತಜ್ಞರು ಅವರ ಅನುಭವಗಳನ್ನು ಹಂಚಿಕೊಳ್ಳಲಿದ್ದಾರೆ. ಕೃಷಿ ಬೆಳೆಗಳ ಸಂಸ್ಕರಣೆ, ಮೌಲ್ಯವರ್ಧನೆ, ಕೃಷಿ ಪರಿಸರ ವಿಜ್ಞಾನ, ಬ್ರ್ಯಾಂಡಿಂಗ್‌ ಇನ್ನಿತರ ವಿಷಯಗಳ ಕುರಿತು ವಾಣಿಜ್ಯ ಮೇಳದಲ್ಲಿ ಮಾಹಿತಿ ಸಿಗಲಿದೆ.

ಡಾ. ರಾಜ್ ಕುಮಾರ್ ಅವರ ‘ಬಂಗಾರದ ಮನುಷ್ಯ’ ಚಿತ್ರದಿಂದ ಪ್ರೇರಣೆ ಪಡೆದು ಕೃಷಿಗೆ ಮರಳಿದ ನಿದರ್ಶನಗಳನ್ನು ನಾವು ನೋಡಿದ್ದೀವಿ. ಕಲಬುರಗಿಯ ತೊಗರಿ, ಕೊಡಗು/ಚಿಕ್ಕಮಗಳೂರಿನ ಕಾಫಿ ತೋಟಗಳು, ಮೈಸೂರಿನ ರೇಷ್ಮೆ ಸಂಸ್ಕೃತಿ, ಈ ನಾಡಿನ ಸಿರಿಧಾನ್ಯಗಳು, ದಕ್ಷಿಣದ ಹಣ್ಣಿನ ತೋಟಗಳು ಮತ್ತು ಕರಾವಳಿಯ ಮಸಾಲೆ ಬೆಳೆಗಳು, ತೋಟಗಾರಿಕೆ ಬೆಳೆಗಳು ಮತ್ತು ಹಲವು ವಿಶಿಷ್ಟ ಉತ್ಪನ್ನಗಳ ಮೂಲಕ ಕರ್ನಾಟಕವು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿದೆ. ಇವೆಲ್ಲವೂ ನಮ್ಮ ರಾಜ್ಯದ ಕೃಷಿ ವೈವಿಧ್ಯತೆಯನ್ನು ಪ್ರತಿಬಿಂಬಿಸುತ್ತವೆ ಅಂತಾ ಕೃಷಿ ಸಚಿವ ಚಲುವರಾಯಸ್ವಾಮಿ ಹೇಳಿದ್ದಾರೆ.

ಈ ಮೇಳವು ರೈತರಿಗೆ ಹೊಸ ಅವಕಾಶಗಳನ್ನು ಒದಗಿಸುವ ಮಹತ್ವದ ವೇದಿಕೆಯಾಗಲಿದೆ. ಕೇಂದ್ರ ಸರಕಾರದ ‘ಡಿಜಿಟಲ್ ಕೃಷಿ ಮಿಷನ್’ ಮತ್ತು ‘ಅಗ್ರಿ ಸ್ಟಾಕ್’ ಯೋಜನೆಗಳು ರೈತ ಕೇಂದ್ರಿತ ಸೌಲಭ್ಯಗಳನ್ನು ನೀಡುತ್ತಿವೆ. ಹಾಗೆ, ರಾಜ್ಯದ ‘ಕೃಷಿ ಭಾಗ್ಯ’ ಮತ್ತು ರೈತ ಉತ್ಪಾದಕ ಸಂಸ್ಥೆಗಳಿಗೆ ಸಿಗುತ್ತಿರುವ ಡಿಜಿಟಲ್ ಬೆಂಬಲವು ಕೃಷಿ ಮಾರುಕಟ್ಟೆಯನ್ನು ಬಲಪಡಿಸುತ್ತಿವೆ. ಕರ್ನಾಟಕವನ್ನು ಕೃಷಿ ಕ್ಷೇತ್ರದಲ್ಲಿ ದೇಶಕ್ಕೇ ಮಾದರಿ ರಾಜ್ಯವನ್ನಾಗಿ ರೂಪಿಸಬೇಕು ಎನ್ನುವುದು ಸರಕಾರದ ಗುರಿಯಾಗಿದೆ. ಈ ಬಾರಿಯ ವಾಣಿಜ್ಯ ಮೇಳ ಅದಕ್ಕೆ ಪೂರಕವಾಗಿರಲಿದೆ. ಸೋ, ಸಾರ್ವಜನಿಕರೂ ಕೂಡ ಈ ಮೇಳದಲ್ಲಿ ಭಾಗಿಯಾಗ್ಬಹುದು. ಪ್ರವೇಶ ಕೂಡ ಉಚಿತವಾಗಿರಲಿದೆ. ರೈತರಿಗೆ ಮಾತ್ರವಲ್ಲದೇ ಜನಸಾಮಾನ್ಯರಿಗೂ ಕೃಷಿಕರ ಬದುಕನ್ನು ಅರ್ಥಮಾಡಿಕೊಳ್ಳಲು ಹಾಗೂ ಕೃಷಿಯಲ್ಲಿ ತೊಡಗಿಸಿಕೊಳ್ಳಲು ಸಹಕಾರಿಯಾಗಲಿದೆ.

Share.
Leave A Reply