ಸಿಎಂ ಸಿದ್ದರಾಮಯ್ಯ ಕೊಲೆ ಮಾಡಿದ್ದಾರೆ ಎಂದು ಹೇಳಿಕೆ ನೀಡಿದ್ದ ಮಹೇಶ್ ತಿಮರೋಡಿ ಬಂಧಿಸಿ ಕಾನೂನು ಕ್ರಮಕೈಗೊಳ್ಳಲು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಸೂಚನೆ ನೀಡಿದ್ದಾರೆ. ಸಿಎಂ ಸಿದ್ದರಾಮಯ್ಯ 24 ಕೊಲೆ ಮಾಡಿದ್ದಾರೆಂದು ಸಿಎಂ ವಿರುದ್ದ ಮಹೇಶ್ ತಿಮರೋಡಿ ಹೇಳಿಕೆ ನೀಡಿದ್ದ ವಿಚಾರ ವಿಧಾನಸಭೆಯಲ್ಲೂ ಭಾರೀ ಚರ್ಚೆಯಾಗಿದ್ದು, ಕೂಡಲೇ ಕ್ರಮ ಕೈಗೊಳ್ಳುವಂತೆ ವಿಪಕ್ಷ ನಾಯಕ ಆರ್.ಅಶೋಕ್ ಸದನದಲ್ಲಿ ಆಗ್ರಹಿಸಿದ್ದರು.
ಈ ಹಿನ್ನಲೆಯಲ್ಲಿ ಇದೀಗ ಮಹೇಶ್ ತಿಮರೋಡಿ ವಿರುದ್ಧ ಕಾನೂನು ಕ್ರಮಕ್ಕೆ ಪೊಲೀಸರಿಗೆ ಗೃಹ ಸಚಿವ ಡಾ.ಜಿ ಪರಮೇಶ್ವರ್ ಸೂಚಿಸಿದ್ದಾರೆ. ಇಂದು ಸಂಜೆಯೊಳಗೆ ಮಹೇಶ್ ತಿಮರೋಡಿ ಬಂಧಿಸುವ ಸಾಧ್ಯತೆ ಇದೆ. ಹಿರಿಯ ಪೊಲೀಸ್ ಅಧಿಕಾರಿಗಳಿಗೆ ದೂರವಾಣಿ ಕರೆ ಮಾಡಿದ ಪರಮೇಶ್ವರ್ ಸಂಜೆಯೊಳಗೆ ಅರೆಸ್ಟ್ ಮಾಡುವಂತೆ ಸೂಚನೆ ನೀಡಿದರು.
ಸದನದಲ್ಲಿ ವಿಪಕ್ಷಗಳಿಗೆ ಗೃಹ ಸಚಿವ ತಿರುಗೇಟು
ವಿಪಕ್ಷ ನಾಯಕ ಆರ್. ಅಶೋಕ್ ಮಾತನಾಡುತ್ತಾ, ಸಿಎಂ 24 ಕೊಲೆ ಮಾಡಿದ್ದಾರೆಂಬ ಆರೋಪ ಬಗ್ಗೆ ಪ್ರಸ್ತಾಪ ಮಾಡಿದರು. ಏನ್ ನಡೀತಿದೆ ರಾಜ್ಯದಲ್ಲಿ, ಸಿಎಂ ಮೇಲೆಯೇ ಆಪಾದನೆ ಮಾಡಿದ್ದಾರೆ. ಹಾಗಾದರೆ ಸಿಎಂ ಕೊಲೆಗಾರರಾ? ಆರೋಪ ಮಾಡಿದವರ ಮೇಲೆ ಕ್ರಮ ಏನು? ನೀವು ಮೌನವಾಗಿದ್ರೆ ಏನ್ ತಿಳ್ಕೊಳ್ಳೋದು ನಾವು? ಅಂತ ಪ್ರಶ್ನೆ ಮಾಡಿದರು.
ಇದಕ್ಕೆ ಉತ್ತರ ಕೊಟ್ಟ ಪರಮೇಶ್ವರ್ ಸರ್ಕಾರ ಅಷ್ಟೊಂದು ಹೆಲ್ಪ್ ಲೆಸ್ ಆಗಿದೆ ಅನ್ಕೊಂಡಿದ್ದೀರಾ? ಅಂತ ತಿರುಗೇಟು ಕೊಟ್ಟರು. ಈ ವೇಳೆ ಸುನೀಲ್ ಕುಮಾರ್ ದೇಶದ ನಂ.1 ಗೃಹ ಸಚಿವರು ಕ್ರಮ ತಗೊಳ್ಳಿ ಅಂತ ಕಾಲೆಳೆದರು. ನಂತ್ರ ಮಾತು ಮುಂದುವರಿಸಿದ ಪರಂ, ಆ ವ್ಯಕ್ತಿ ವಿರುದ್ಧ ಹಲವು ಕೇಸ್ ಇವೆ, ಆ ವ್ಯಕ್ತಿ ಹೆಸರು ಹೇಳಲ್ಲ. ಇಂಥ ವ್ಯಕ್ತಿಯನ್ನು ಸಮಾಜದಲ್ಲಿ ಹೀಗೇ ಸುಮ್ಮನೆ ಬಿಡಲ್ಲ. ಕಾನೂನು ಚಲಾಯಿಸಿ ಕ್ರಮ ತಗೋತೀವಿ. ಏನು ಕ್ರಮ ತಗೋಬೇಕೋ ತಗೋತೀವಿ. ಈಗಾಗಲೇ ಕ್ರಮ ತಗೊಳ್ಳೋಕ್ಕೆ ಪೊಲೀಸರಿಗೆ ಸೂಚನೆ ಕೊಡಲಾಗಿದೆ ಎಂದು ತಿಳಿಸಿದರು.
Read Also : ಧರ್ಮಸ್ಥಳ ಕೇಸ್ ಉಲ್ಟಾ.. ಕ್ಲೈಮ್ಯಾಕ್ಸ್‌ನಲ್ಲಿ ಬಿಗ್ ಟ್ವಿಸ್ಟ್.. ಬಯಲಾಯ್ತಾ ಷಡ್ಯಂತ್ರ ರೂಪಿಸಿದವರ ಬಣ್ಣ..?