ಬೆಂಗಳೂರು, ಜ.02 : ಬೆಂಗಳೂರಿನ ಮತ್ತಿಕೆರೆ ಬಳಿ ಇರುವ ರಾಮಯ್ಯ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್‌ನ 29ನೇ ವಾರ್ಷಿಕ ಘಟಿಕೋತ್ಸವು ಡಿಸೆಂಬರ್ 31ರಂದು ನೆರವೇರಿದೆ. 2023ರಿಂದ 2025ನೇ ಸಾಲಿನ ಪದವಿ ಬ್ಯಾಚ್‌ನ ಒಟ್ಟು 280 ವಿದ್ಯಾರ್ಥಿಗಳು, ಈ ಘಟಿಕೋತ್ಸವದಲ್ಲಿ ಪಾಲ್ಗೊಂಡಿದ್ದರು. ಈ ಸಮಾರಂಭದ ಮುಖ್ಯ ಅತಿಥಿಗಳಾಗಿ ಮಿಟ್ಟಿ ಕೆಫೆಯ (mitti cafe) ಸಂಸ್ಥಾಪಕಿ ಮತ್ತು ಸಿಇಒ ಆದ ಅಲೀನಾ ಆಲಂ ಅವರು ಪಾಲ್ಗೊಂಡಿದ್ದರು. ಗೋಕುಲ ಎಜುಕೇಷನ್ ಫೌಂಡೇಶನ್‌ನ (GEF) ನಿರ್ದೇಶಕರು ಮತ್ತು ಕಾರ್ಯದರ್ಶಿಗಳಾದ ಎಂ. ಆರ್. ಆನಂದರಾವ್, ಮುಖ್ಯ ಕಾರ್ಯ ನಿವಾರ್ಹಕರು (ಎಂಜಿನಿಯರಿಂಗ್ ಮತ್ತು ಜನರಲ್ ಸೈನ್ಸಸ್ ಜಿಇಎಫ್) ಡಾ. ಪಾರ್ಶ್ವನಾಥ್ ಎಚ್.ವಿ., ಹಣಕಾಸು ಮುಖ್ಯಸ್ಥರಾದ ಜಿ. ರಾಮಚಂದ್ರ (ಇ ಅಂಡ್ ಜಿಎಸ್, ಜಿಇಎಫ್), ಆರ್‌ಎಂಐನ ಪ್ರೊಫೆಸರ್ ಮತ್ತು ಡೀನ್ ಡಾ.ಎ.ವಿ. ಅರುಣ್‌ಕುಮಾರ್ ಮತ್ತು ಆರ್‌ಐಎಂನ ರಿಜಿಸ್ಟ್ರಾರ್ ಡಾ. ಸವಿತಾ ರಾಣಿ ರಾಮಚಂದ್ರನ್ ಅವರು ವೇದಿಕೆ ಮೇಲೆ ಉಪಸ್ಥಿತರಿದ್ದರು.

ಔಪಚಾರಿಕ ಮೆರವಣಿಗೆಯೊಂದಿಗೆ ಘಟಿಕೋತ್ಸವವು ಶುರುವಾಗಿ, ಪ್ರಾರ್ಥನೆ ಮತ್ತು ರಾಮಯ್ಯ ಗೀತೆಯೊಂದಿಗೆ ಮುಂದುವರಿಯಿತು. ಪದವಿ ಪಡೆಯುತ್ತಿರುವ ವಿದ್ಯಾರ್ಥಿಗಳು, ಪೋಷಕರು, ರಾಮಯ್ಯ ಸಮೂಹ ಸಂಸ್ಥೆಗಳ ಮುಖ್ಯಸ್ಥರು, ಪತ್ರಿಕಾ ಪ್ರತಿನಿಧಿಗಳು, ಹಳೆಯ ವಿದ್ಯಾರ್ಥಿಗಳು, ಆಡಳಿತ ಮತ್ತು ಶೈಕ್ಷಣಿಕ ಮಂಡಳಿಯ ಸದಸ್ಯರು ಹಾಗೂ ಅತಿಥಿಗಳನ್ನು ಡೀನ್ ಡಾ. ಅರುಣ್‌ಕುಮಾರ್ ಅವರು ಸ್ವಾಗತಿಸಿದರು. ಸಂಸ್ಥೆಯ ವಾರ್ಷಿಕ ವರದಿಯಲ್ಲಿ ಅವರು ಮಂಡಿಸುತ್ತಾ 2024-2025ರ ಶೈಕ್ಷಣಿಕ ವರ್ಷದಲ್ಲಿ ಸಾಧಿಸಿದ ಪ್ರಮುಖ ಮೈಲುಗಲ್ಲುಗಳನ್ನು ಉಲ್ಲೇಖ ಮಾಡಿದರು.
ಶೈಕ್ಷಣಿಕ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ಅತ್ಯುತ್ತಮವಾದ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಚಿನ್ನ ಮತ್ತ ಬೆಳ್ಳಿಯ ಪದಕಗಳನ್ನು ನೀಡಿ ಗೌರವಿಸಲಾಯಿತು. ಈ ಬ್ಯಾಚ್‌ನ ಅತ್ಯುತ್ತಮ ಶೈಕ್ಷಣಿಕ ಸಾಧನೆ ಮತ್ತು ಸರ್ವತೋಮುಖ ಶ್ರೇಷ್ಠತೆಗಾಗಿ ಪೂಜಾ ಸಾಸನೂರ್ ಅವರು ಚಿನ್ನದ ಪದಕವನ್ನು ತಮ್ಮದಾಗಿಸಿಕೊಂಡರು. ಮುಖ್ಯ ಅತಿಥಿಗಳು ಮತ್ತು ಇತರ ಗಣ್ಯರು ಎಲ್ಲಾ ಪದವೀಧರರಿಗೆ ಸ್ನಾತಕೋತ್ತರ ಡಿಪ್ಲೊಮಾ ಪ್ರಮಾಣಪತ್ರಗಳನ್ನು ವಿತರಿಸಿದರು.

ದಿವ್ಯಾಂಗರಿಗೆ ಉದ್ಯೋಗಾವಕಾಶಗಳನ್ನು ನೀಡುವ ಮೂಲಕ ಅವರ ಜೀವನವನ್ನು ಹೇಗೆ ಬದಲಾಯಿಸಬಹುದು ಎಂಬ ಬಗ್ಗೆ ಹಾಗೂ ತಾವು ಮಿಟ್ಟಿ ಕೆಫೆಯನ್ನು ಕಟ್ಟಿದ ಸ್ಫೂರ್ತಿದಾಯಕ ಪ್ರಯಾಣವನ್ನು ಘಟಿಕೋತ್ಸವ ಭಾಷಣದಲ್ಲಿ ಮುಖ್ಯ ಅತಿಥಿ ಅಲೀನಾ ಆಲಂ ಅವರು ಹಂಚಿಕೊಂಡರು. ಸಮಾಜವನ್ನು ರೂಪಿಸುವಲ್ಲಿ ಘನತೆ ಹಾಗೂ ಒಳಗೊಳ್ಳುವಿಕೆ, ಸಮುದಾಯದ ಬೆಂಬಲ, ಧೈರ್ಯ ಮತು ಗಟ್ಟಿತನದ ಪ್ರಾಮುಖ್ಯವನ್ನು ಒತ್ತಿ ಹೇಳಿದರು. ಉದ್ದೇಶಪೂರ್ವಕವಾಗಿ ಕೆಲಸ ಮಾಡಿದಾಗ ಸಾಮಾನ್ಯ ಆಲೋಚನೆಗಳು ಸಹ ಹೇಗೆ ಯಶಸ್ವಿಯಾಗುತ್ತವೆ ಎಂಬುದನ್ನು ಅವರು ವಿವರಿಸಿದರು. ಕೊನೆಯಲ್ಲಿ ನಮ್ಮೆಲ್ಲರ ಬಳಿಯೂ ಜಗತ್ತನ್ನು ಬದಲಾಯಿಸುವ ಕೀಲಿಯಿದೆ ಎಂಬ ಸಂದೇಶದೊಂದಿಗೆ ತಮ್ಮ ಭಾಷಣವನ್ನು ಮುಕ್ತಾಯ ಮಾಡಿದರು.

ಗೋಕುಲ ಎಜುಕೇಷನ್ ಫೌಂಡೇಶನ್‌ನ ಅಧ್ಯಕ್ಷರಾದ ಡಾ.ಎಂ. ಆರ್. ಸೀತಾರಾಮ್ ಮತ್ತು ಆರ್‌ಐಎಂ ನಿರ್ದೇಶಕರು ಹಾಗೂ ಜಿಇಎಫ್ ಟ್ರಸ್ಟಿ ಡಾ.ಎಂ. ಆರ್. ಪಟ್ಟಾಭಿರಾಮ್ ಅವರು ತಮ್ಮ ಸಂದೇಶಗಳ ಮೂಲಕ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ಮೌಲ್ಯಾಧಾರಿತ ಶಿಕ್ಷಣ ಮತ್ತು ನಿರಂತರ ಪ್ರಗತಿಯ ಮೂಲಕ ರಾಮಯ್ಯ ಸಮೂಹದ ಪರಂಪರೆಯನ್ನು ಮುಂದುವರಿಸಬೇಕು ಎಂದು ಅವರು ತಿಳಿಸಿದರು. ಜಿಇಎಫ್ ನಿರ್ದೇಶಕ ಮತ್ತು ಕಾರ್ಯದರ್ಶಿ ಎಂ. ಆರ್. ಆನಂದರಾಮ್ ಅವರು ಘಟಿಕೋತ್ಸವದ ಮುಕ್ತಾಯವನ್ನು ಘೋಷಿಸಿದರು.
ರಿಜಿಸ್ಟ್ರಾರ್ ಡಾ.ಸವಿತಾ ರಾಣಿ ರಾಮಚಂದ್ರನ್ ಅವರು ವಂದನಾರ್ಪಣೆ ಸಲ್ಲಿಸುತ್ತಾ, ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು. ರಾಷ್ಟ್ರಗೀತೆಯೊಂದಿಗೆ ಘಟಿಕೋತ್ಸವ ಮುಕ್ತಾಯವಾಯಿತು.
