ಪ್ರಸ್ತುತ ಭಾರತ ಹಾಗೂ ಇಂಗ್ಲೆಂಡ್ ನಡುವೆ ಐದು ಪಂದ್ಯಗಳ ಟೆಸ್ಟ್ ಸರಣಿ ನಡೆಯುತ್ತಿದೆ. ಈ ಸರಣಿಯ ಮೊದಲ ಪಂದ್ಯವನ್ನು ಆತಿಥೇಯ ಇಂಗ್ಲೆಂಡ್ ಗೆದ್ದುಕೊಳ್ಳುವಲ್ಲಿ ಯಶಸ್ವಿಯಾಗಿದೆ. ಈ ಪಂದ್ಯದಲ್ಲಿ ಭಾರತ ತಂಡದಿಂದ ಐದು ಶತಕಗಳು ಸಿಡಿದರೂ ಗೆಲುವು ದಕ್ಕಿಸಿಕೊಳ್ಳಲು ಸಾಧ್ಯವಾಗಲಿಲ್ಲ.
ಭಾರತ ಮತ್ತು ಇಂಗ್ಲೆಂಡ್ ನಡುವಿನ ಐದು ಪಂದ್ಯಗಳ ಟೆಸ್ಟ್ ಸರಣಿಯ ಎರಡನೇ ಟೆಸ್ಟ್ ಪಂದ್ಯವು ಬರ್ಮಿಂಗ್‌ಹ್ಯಾಮ್‌ನ ಎಡ್ಜ್‌ಬಾಸ್ಟನ್ ಕ್ರಿಕೆಟ್ ಮೈದಾನದಲ್ಲಿ ನಿನ್ನೆಯಿಂದ ಆರಂಭವಾಗಿದೆ. ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ನಾಯಕತ್ವದ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸುವುದರ ಜೊತೆಗೆ ಗಿಲ್ ಬ್ಯಾಟಿಂಗ್‌ನಲ್ಲೂ ಅಬ್ಬರಿಸಿದ್ದಾರೆ. ಮೊದಲ ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ನಲ್ಲಿ ಶತಕ ಬಾರಿಸಿದ್ದ ಅವರು, ಎರಡನೇ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲೂ ದ್ವಿಶತಕ ಸಿಡಿಸಿ ಮಿಂಚಿದ್ದಾರೆ.
ಶುಭ್‌ಮನ್ ಗಿಲ್ ನಾಯಕರಾಗಿ ಎರಡನೇ ಪಂದ್ಯದಲ್ಲೂ ಶತಕ ಸಿಡಿಸುವ ಮೂಲಕ ದಿಗ್ಗಜರ ಸಾಲಿಗೆ ಸೇರಿದ್ದಾರೆ. ಇದಕ್ಕೂ ಮೊದಲು ವಿರಾಟ್ ಕೊಹ್ಲಿ ನಾಯಕರಾಗಿ ಮೊದಲ ಪಂದ್ಯದಲ್ಲಿ ಎರಡೂ ಇನ್ನಿಂಗ್ಸ್‌ಗಳಲ್ಲಿ ಶತಕ ಹಾಗೂ ನಂತರದ ಪಂದ್ಯದಲ್ಲಿ ಶತಕ ಸಿಡಿಸುವ ಮೂಲಕ ಮೊದಲ ನಾಯಕರಾಗಿ ಬ್ಯಾಕ್ ಟು ಬ್ಯಾಕ್ 3 ಶತಕ ಸಿಡಿಸಿ ಸಾಧನೆ ಮಾಡಿದ್ದರು.
ಇದರ ನಂತರ ಕ್ರಿಕೆಟ್ ದಂತಕಥೆ ವಿಜಯ್ ಹಜಾರೆ ಅವರ, ಕೂಡ ನಾಯಕರಾಗಿ ಮೊದಲ 2 ಪಂದ್ಯಗಳಲ್ಲಿ ಬ್ಯಾಕ್ ಟು ಬ್ಯಾಕ್ ಶತಕ ಸಿಡಿಸಿದ್ದರು. ಇವರ ಜೊತೆಗೆ ಮಾಜಿ ನಾಯಕ ಸುನಿಲ್ ಗವಾಸ್ಕರ್ ಕೂಡ ಬ್ಯಾಕ್ ಟು ಬ್ಯಾಕ್ ಎರಡು ಶತಕ ಸಿಡಿಸಿ ಸಾಧನೆ ಮಾಡಿದ್ದಾರೆ. ಸದ್ಯ ಇಂದಿನ ಪಂದ್ಯದಲ್ಲಿ ಶತಕ ಸಿಡಿಸುವ ಮೂಲಕ ಬ್ಯಾಕ್ ಟು ಬ್ಯಾಕ್ ಎರಡು ಪಂದ್ಯಗಳಲ್ಲಿ ನಾಯಕರಾಗಿ ಈ ಸಾಧನೆ ಮಾಡಿದ 4ನೇ ಭಾರತೀಯ ಆಟಗಾರ ಎನಿಸಿಕೊಂಡರು.
