ಬೆಂಗಳೂರು: ಹೊಸ ವರ್ಷಕ್ಕೆ ಕೌಂಟ್ ಡೌನ್ ಶುರುವಾಗಿದ್ದು, ಬೆಂಗಳೂರಿನಲ್ಲಿ (Bengaluru) ಬಸ್ ಸೇವೆ ಹಾಗೂ ಮೆಟ್ರೋ ಸೇವೆ ವಿಸ್ತರಿಸಲಾಗುತ್ತಿದೆ.
ಹೊಸ ವರ್ಷವನ್ನು (New Year 2026) ಅದ್ಧೂರಿಯಾಗಿ ಸ್ವಾಗತಿಸಲು ಭರ್ಜರಿ ತಯಾರಿ ನಡೆದಿದೆ. ಸುರಕ್ಷ ಸಂಚಾರಕ್ಕಾಗಿ ಮೆಟ್ರೋ (Namma Mtero), ಬಿಎಂಟಿಸಿ (BMTC) ತನ್ನ ಸೇವೆ ಸಮಯ ಮತ್ತು ಮಾರ್ಗಗಳನ್ನು ವಿಸ್ತರಿಸಲಾಗಿದೆ.
ಹೊಸ ವರ್ಷದ ಹಿನ್ನೆಲೆಯಲ್ಲಿ ರಾತ್ರಿ ಹಾಗೂ ಜನವರಿ 1ರಂದು ಮೆಟ್ರೋ ವಿಶೇಷ ವೇಳಾಪಟ್ಟಿ ಜಾರಿಯಾಗಿರಲಿದೆ. ನೇರಳೆ, ಹಸಿರು ಮತ್ತು ಹಳದಿ ಮಾರ್ಗಗಳಲ್ಲಿ ಸೇವಾ ಸಮಯ ತಡರಾತ್ರಿವರೆಗೆ ವಿಸ್ತರಣೆ ಮಾಡಲಾಗಿದೆ.
ಎಲ್ಲಿವರೆಗೆ ಸಮಯ ವಿಸ್ತರಣೆ? ಎಲ್ಲೆಲ್ಲಿಗೆ?
ನೇರಳೆ ಮಾರ್ಗ:
ಬೈಯಪ್ಪನಹಳ್ಳಿ-ಕೆಂಗೇರಿ ಮಾರ್ಗ: 1:45ರ ವರೆಗೆ
ಕೆಂಗೇರಿ- ಬೈಯಪ್ಪನಹಳ್ಳಿ ಮಾರ್ಗ: ರಾತ್ರಿ 2ರ ವರೆಗೆ
ಹಸಿರು ಮಾರ್ಗ:
ಮೆಜೆಸ್ಟಿಕ್ – ಮಾದಾವರ: ರಾತ್ರಿ 2ರ ವರೆಗೆ
ಮಾದಾವರ – ಮೆಜೆಸ್ಟಿಕ್: ರಾತ್ರಿ 2ರ ವರೆಗೆ
ಹಳದಿ ಮಾರ್ಗ:
ಆರ್‌ವಿ ರಸ್ತೆ – ಬೊಮ್ಮಸಂದ್ರ ಮಾರ್ಗ: ರಾತ್ರಿ 3:10ರ ವರೆಗೆ
ಬೊಮ್ಮಸಂದ್ರ – ಆರ್‌ವಿ ರಸ್ತೆ: 1:30ರ ವರೆಗೆ
ಮೆಜೆಸ್ಟಿಕ್ ಕೇಂದ್ರದಲ್ಲಿ ಎಲ್ಲಾ ಮಾರ್ಗಗಳ ಕೊನೆಯ ರೈಲು ರಾತ್ರಿ 2:45ಕ್ಕೆ ಹೋಗಲಿದೆ
ಇಂದು ರಾತ್ರಿ 11 ಗಂಟೆಯಿಂದ ನೇರಳೆ ಮತ್ತು ಹಸಿರು ಮಾರ್ಗಗಳಲ್ಲಿ 8 ನಿಮಿಷಗಳ ಅಂತರದಲ್ಲಿ, ಹಳದಿ ಮಾರ್ಗದಲ್ಲಿ 15 ನಿಮಿಷಗಳ ಅಂತರದಲ್ಲಿ ರೈಲು ಸಂಚಾರ ಮಾಡಲಿದೆ. ಡಿ. 31ರ ರಾತ್ರಿ ಎಂಜಿ ರೋಡ್ ಮೆಟ್ರೋ ನಿಲ್ದಾಣವನ್ನು ರಾತ್ರಿ 10 ಗಂಟೆಯಿಂದ ಎಂಟ್ರಿ ಹಾಗೂ ಎಕ್ಸಿಟ್ ಸಂಪೂರ್ಣ ಬಂದ್ ಮಾಡಲಾಗುತ್ತದೆ. ಹೀಗಾಗಿ ಟ್ರಿನಿಟಿ ಹಾಗೂ ಕಬ್ಬನ್ ಪಾರ್ಕ್ ಮೆಟ್ರೋ ನಿಲ್ದಾಣಗಳು ಕಾರ್ಯನಿರ್ವಹಿಸಲಿದ್ದು, ಎಂಜಿ ರೋಡ್‌ಗೆ ಬರುವವರು ಈ ಎರಡು ನಿಲ್ದಾಣಗಳಲ್ಲಿ ಹೋಗಿ ಮೆಟ್ರೋ ಸಂಚಾರ ಮಾಡಬೇಕು.
ಪ್ರಯಾಣಿಕರು ಕ್ಯೂಆರ್ ಕೋಡ್ ಅಥವಾ ಡಿಜಿಟಲ್ ಟಿಕೆಟ್ ಬಳಸಿ ಪ್ರಯಾಣಿಸುವಂತೆ ಬಿಎಂಆರ್‌ಸಿಎಲ್ ಮನವಿ ಮಾಡಿದೆ. ಬಿಎಂಟಿಸಿ ಕೂಡ ಪ್ರಯಾಣಿಕರ ಅನೂಕೂಲಕ್ಕಾಗಿ, ಇಂದು ತಡರಾತ್ರಿವರೆಗೂ ಬಿಎಂಟಿಸಿ ಬಸ್‌ಗಳ ಕಾರ್ಯಾಚರಣೆಗೆ ಮುಂದಾಗಿದೆ. ಸಾರ್ವಜನಿಕರ ಅನುಕೂಲಕ್ಕಾಗಿ ಎಂ.ಜಿ.ರಸ್ತೆ/ಬ್ರಿಗೇಡ್ ರಸ್ತೆಯಿಂದ ನಗರದ ವಿವಿಧ ಭಾಗಗಳಿಗೆ ಹೆಚ್ಚಿನ ಸಾರಿಗೆ ಸೌಲಭ್ಯ ಒದಗಿಸಲಾಗಿದೆ. ರಾತ್ರಿ 11 ಗಂಟೆಯ ನಂತರ ತಡರಾತ್ರಿ 2 ಗಂಟೆಯವರೆಗೆ ಹೆಚ್ಚುವರಿ ಬಸ್ ಓಡಾಡಲಿವೆ. ಅಲ್ಲದೇ, ಪೊಲೀಸ್ ಇಲಾಖೆ ಕೂಡ ಎಲ್ಲೆಡೆ ಹದ್ದಿನ ಕಣ್ಣಿಟ್ಟಿದೆ.
