ಬೆಂಗಳೂರು, ಜ.08: ಹಿಂದಿನ ವರ್ಷದ ಕ್ರಾಂತಿಗಳೆಲ್ಲಾ ಡಮ್ಮಿಯಾಯ್ತು. ಸಿಎಂ ಸಿದ್ದರಾಮಯ್ಯ ಅರಸು ದಾಖಲೆಯನ್ನ ಬ್ರೇಕ್ ಮಾಡಿದ್ದೂ ಆಯ್ತು. ಆದರೆ, ಮುಖ್ಯಮಂತ್ರಿ ಸ್ಥಾನದಲ್ಲಿ ಮಾತ್ರ ಯಾವುದೇ ಬದಲಾವಣೆಯಾಗಿಲ್ಲ. ಆದ್ರೀಗ ಡಿಕೆಶಿಗೆ ಎಲ್ಲಾ ಕಾಲ ಕೂಡಿ ಬಂದಿದೆ. ಇನ್ನೇನು ಸಿಎಂ ಆಗೇ ಬಿಡ್ತಾರೆ ಅಂತಾ ಕನಸು ಕಾಣುತ್ತಿದ್ದ ಅಭಿಮಾನಿಗಳಿಗೆ ಮತ್ತೆ ನಿರಾಸೆ ಮೂಡಿಸಿದೆ. ವರಿಷ್ಠರು ಈ ಬಾರಿ ಕೊಟ್ಟ ಮಾಸ್ಟರ್‌ಸ್ಟ್ರೋಕ್‌ಗೆ ಡಿಕೆ ಶಿವಕುಮಾರ್ ಒಂದು ವರ್ಷದ ತನಕ ಕೆಮ್ಮಂಗಿಲ್ಲ ಅಂತ ಹೇಳಲಾಗ್ತಿದೆ.
ಹೌದು, ಕುರ್ಚಿ ಕದನಲ್ಲಿ ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ಇಬ್ಬರ ಪ್ರತಾಪವೂ ಜೋರಾಗಿಯೇ ನಡೆದಿತ್ತು. ಐದು ವರ್ಷ ನಾನೇ ಸಿಎಂ ಅಂತ ಘರ್ಜಿಸುವ ಸಿದ್ದರಾಮಯ್ಯ, ಹೌದು ಅವರೇ ಸಿಎಂ ಆಗಿ ಮುಂದುವರಿಯುತ್ತಾರೆ ಅಂತ ದನಿಗೂಡಿಸುವ ಸಿದ್ದು ಬಣ. ಇತ್ತ ವರಿಷ್ಠರ ಸಮ್ಮುಖದಲ್ಲಿ ಒಪ್ಪಂದ ಆಗಿದೆ ಅಂತ ಸದಾ ನೆನಪಿಸುವ ಡಿಕೆ ಶಿವಕುಮಾರ್, ಡಿಕೆಶಿ ಸಿಎಂ ಆಗುವ ಕಾಲ ಸನಿಹದಲ್ಲಿದೆ ಅಂತ ಕಥೆ ಕಟ್ಟುವ ಡಿಕೆಶಿ ಬಣ. ಹೀಗೆ ಇವರಿಬ್ಬರ ಹಾವು ಏಣಿ ಆಟ ಮುಗಿಯದ ಕಥೆಯಾಗಿ ಹೋಗಿತ್ತು.. ಆದ್ರೀಗ ಮಹತ್ವದ ಬೆಳವಣಿಗೆಯೊಂದು ನಡೆದಿದೆ.. ಕಾಂಗ್ರೆಸ್‌ನಲ್ಲಿದ್ದ ಕುರ್ಚಿ ಕೋಲಾಹಲವನ್ನು ಶಮನಗೊಳಿಸಲು ಹೈಕಮಾಂಡ್ ಯಾರೂ ಊಹಿಸಿರದ ರೀತಿಯಲ್ಲಿ ದಾಳ ಉರುಳಿಸಿದೆ.. ಇದ್ರಿಂದ ಡಿಕೆಶಿಗೆ ಭಾರೀ ಹಿನ್ನಡೆಯಾಗಿದ್ದು, ಹೇಳಿಕೊಳ್ಳಲೂ ಆಗದ ಇಕ್ಕಟ್ಟಿಗೆ ಸಿಲುಕಿದ್ದಾರೆ.

ದೇಶದಲ್ಲಿ ಇದೇ ವರ್ಷ ಪಂಚರಾಜ್ಯಗಳ ಚುನಾವಣೆಯ ಕಾವು ರಂಗೇರಲಿದೆ. ಮೇ ತಿಂಗಳಲ್ಲಿ ನಡೆಯಲಿರುವ ಎಲೆಕ್ಷನ್‌ಗೆ ಕಾಂಗ್ರೆಸ್ ಈಗಿಂದಲೇ ಶಸ್ತ್ರಾಭ್ಯಾಸ ನಡೆಸಿದೆ. ಇಲ್ಲೇ ನೋಡಿ ಕಾಂಗ್ರೆಸ್ ಹೈಕಮಾಂಡ್ ಒಂದೇ ಕಲ್ಲಲ್ಲಿ ಎರಡು ಕಾಯಿ ಉದುರಿಸಲು ಯೋಜನೆ ರೂಪಿಸಿದ್ದು. ಅಸ್ಸಾಂ ಎಲೆಕ್ಷನ್‌ಗೆ ಪರಿವೀಕ್ಷಕರಾಗಿ ಡಿ.ಕೆ.ಶಿವಕುಮಾರ್‌ರನ್ನ ಆಯ್ಕೆ ಮಾಡಲಾಗಿದೆ. ಆದ್ರೆ ಇದಕ್ಕೂ ನಮ್ಮ ರಾಜ್ಯದ ಗೊಂದಲಕ್ಕೂ ಏನ್ ಸಂಬಂಧ ಅನ್ನೋ ಪ್ರಶ್ನೆಗೆ ಉತ್ತರ ಇಲ್ಲಿದೆ. ಸಾಮಾನ್ಯವಾಗಿ ಯಾವುದೇ ರಾಜ್ಯದ ಮುಖ್ಯಮಂತ್ರಿಗಳನ್ನ ಈ ರೀತಿ ಪರಿವೀಕ್ಷಕರಾಗಿ ಆಯ್ಕೆ ಮಾಡುವುದಿಲ್ಲ. ಆದ್ರೆ ಇಲ್ಲಿ ಡಿಕೆಶಿಯನ್ನು ಆಯ್ಕೆ ಮಾಡಲಾಗಿದೆ. ಇದರ ಅರ್ಥ 5-6 ತಿಂಗಳು ಅವರು ಪಂಚರಾಜ್ಯಗಳ ಚುನಾವಣೆಯಲ್ಲಿ ಬ್ಯುಸಿ ಇರಲಿದ್ದಾರೆ. ಇತ್ತ ಸಿದ್ದರಾಮಯ್ಯನವರೇ ಅನುಭವದ ಆಧಾರದ ಮೇಲೆ ಈ ವರ್ಷದ ಬಜೆಟ್ ಅಧಿವೇಶನವನ್ನು ನಡೆಸಿಕೊಡಬೇಕಿದೆ. ಹೀಗಿರುವಾಗ ಸಿದ್ದರಾಮಯ್ಯನವರನ್ನು ಕೆಳಗಿಳಿಸಿ ಡಿಕೆಶಿಯನ್ನ ಸಿಎಂ ಮಾಡುವ ಸಾಧ್ಯತೆಯೇ ತೀರಾ ಕಡಿಮೆ ಅಂತಾ ವಿಶ್ಲೇಷಿಸಲಾಗುತ್ತಿದೆ.
ಸಿಎಂ ಗಾದಿಗೇರಲು ತುದಿಗಾಲಲ್ಲಿ ನಿಂತಿದ್ದ ಡಿಕೆಶಿಗೆ ಈ ವರ್ಷವೂ ನಿರಾಸೆ ಮೂಡಿಸುವ ಎಲ್ಲಾ ಲಕ್ಷಣಗಳು ಗೋಚರಿಸಿವೆ. ಹೈಕಮಾಂಡ್ ಮನಗೆದ್ದಿರುವ ದಾಖಲೆ ರಾಮಯ್ಯ ಇನ್ನಷ್ಟು ಸಮಯ ಸಿಎಂ ಕುರ್ಚಿ ಮೇಲೆ ಗಟ್ಟಿಯಾಗಿ ಕೂರೋದು ಫಿಕ್ಸ್ ಅಂತ ಹೇಳಲಾಗ್ತಿದೆ. ಆದ್ರೆ ಈ ಎಲ್ಲಾ ಬೆಳವಣಿಗೆಗಳು ಡಿಕೆಶಿಗೆ ಗಾಯದ ಮೇಲೆ ಬರೆ ಎಳೆದಂತಾಗಿದ್ದು. ಇದಕ್ಕೆ ಡಿಕೆಶಿ ಹೇಗೆ ಪ್ರತಿಕ್ರಿಯಿಸಲಿದ್ದಾರೆ. ಯಾವ ದಾಳ ಉರುಳಿಸಲಿದ್ದಾರೆ ಅನ್ನೋದು ಸಾಕಷ್ಟು ಕುತೂಹಲ ಮೂಡಿಸಿದೆ.
