ʻಅಶ್ವಿನ್‌ ರಿಟೈರ್ಡ್‌, ರೋಹಿತ್‌ ರಿಟೈರ್ಡ್‌, ಕೊಹ್ಲಿ ರಿಟೈರ್ಡ್‌..ʼ Team ಇಂಡಿಯಾ ಇನ್ಮುಂದೆ ಅಂದುಕೊಂಡಂತೆ ಇರಲ್ಲ ಅಂತ ಸ್ವತಃ ಕ್ರೀಡಾಭಿಮಾನಿಗಳು ಬೇಸರ ಹೊರಹಾಕ್ತಿದ್ದಾರೆ.. ಪ್ರಸ್ತುತ ಐಪಿಎಲ್‌ನಲ್ಲಿ ಅದ್ಭುತ ಬ್ಯಾಟಿಂಗ್‌ನಿಂದ ಮಿಂಚುತ್ತಿದ್ದ ಕಿಂಗ್‌ & ಹಿಟ್‌ಮ್ಯಾನ್‌ ದಿಢೀರ್‌ ಟೆಸ್ಟ್‌ ಮಾದರಿಗೆ ವಿದಾಯ ಹೇಳ್ತಾರೆ ಅಂದ್ರೆ ಯಾರಿಗಾದ್ರೂ ಅನುಮಾನ ಬರ್ದೇ ಇರುತ್ತಾ..? ನಿರೀಕ್ಷೆಯಂತೆ ಅವರಿಬ್ಬರ ನಿರ್ಧಾರ ಫ್ಯಾನ್ಸ್‌ಗೆ ಭಾರೀ ಶಾಕ್‌ ಕೊಟ್ಟಿದೆ.. ಇವ್ರಿಬ್ಬರ ಈ ನಿರ್ಧಾರದ ಹಿಂದೆ ಹೆಡ್‌ಕೋಚ್‌ನ ಕುಮ್ಮಕ್ಕಿದೆ ಅಂತಲೂ ಸಾಕಷ್ಟು ಜನ ಆಕ್ರೋಶ ಹೊರಹಾಕ್ತಿದ್ದಾರೆ.

ಟೀಂ ಇಂಡಿಯಾ 2024ರ ಟಿ20 ವಿಶ್ವಕಪ್‌ ಗೆದ್ದ ಬಳಿಕ ರೋಹಿತ್‌ ಶರ್ಮಾ, ವಿರಾಟ್‌ ಕೊಹ್ಲಿ ಟಿ20 ಮಾದರಿಗೆ ಗುಡ್‌ಬೈ ಹೇಳಿ ಏಕದಿನ ಹಾಗೂ ಟೆಸ್ಟ್‌ ಮಾದರಿಯ ಪಂದ್ಯಗಳನ್ನ ಯಶಸ್ವಿಯಾಗಿ ನಿರ್ವಹಿಸಿಕೊಂಡು ಹೋಗಲು ಮನಸ್ಸು ಮಾಡಿದ್ರು.. ಆದ್ರೆ ಒಂದು ವರ್ಷ ಕಳೆಯುವದರ ಒಳಗೆ ಈ ಇಬ್ಬರು ಟೆಸ್ಟ್‌ಗೆ ನಿವೃತ್ತಿ ಘೋಷಿಸಿರೋದು ಹಲವು ಸಂದೇಹಗಳನ್ನ ಹುಟ್ಟುಹಾಕಿದೆ..

ಇಷ್ಟು ವರ್ಷ ಯಶಸ್ಸಿನ ಉನ್ಮಾದದಲ್ಲಿ ಮೆರೆದಿದ್ದ ಈ ಇಬ್ಬರು ದಿಗ್ಗಜರ ಟೆಸ್ಟ್‌ ನಿರ್ಗಮನದ ಹಿಂದೆ ಇತ್ತೀಚೆಗೆ ಆಗಮಿಸಿರುವ ಹೆಡ್‌ಕೋಚ್‌ ಗೌತಮ್‌ ಗಂಭೀರ್‌ ಚಮತ್ಕಾರವಿದೆ ಅಂತ ಸಾಕಷ್ಟು ಅಭಿಪ್ರಾಯಗಳು ವ್ಯಕ್ತವಾಗ್ತಿವೆ. ಟೀಂ ಇಂಡಿಯಾದಲ್ಲಿ ಪಾರುಪತ್ಯ ಸಾಧಿಸಿದ್ದ ಸ್ಟಾರ್‌ಗಿರಿಗೆ ಅಂತ್ಯ ಹಾಡಿ. ಕೋಚ್‌ ನಿರ್ಧಾರಗಳನ್ನೇ ಅಂತಿಮಗೊಳಿಸುವ ಹುನ್ನಾರಕ್ಕೆ ಗಂಭೀರ್‌ ಇಳಿದಿದ್ದಾರೆ ಅನ್ನೋ ಅನುಮಾನಗಳು ಹುಟ್ಟಿಕೊಳ್ತಿವೆ.

ರಾಹುಲ್‌ ದ್ರಾವಿಡ್‌ ನಿವೃತ್ತರಾದ ಬಳಿಕ ಗಂಭೀರ್‌ ಕೋಚ್‌ ಸ್ಥಾನಕ್ಕೆ ಬಂದಿಳಿದಿದ್ದೇ ತಡ ಟೀಂ ಇಂಡಿಯಾಗೆ ಬರಸಿಡಿಲು ಬಡಿದಂತಾಗಿದೆ.. ಗಂಭೀರ್‌ ಮುಖ್ಯಸ್ಥಿಕೆಯಲ್ಲಿ ಭಾರತ ಚಾಂಪಿಯನ್ಸ್‌ ಟ್ರೋಫಿ ಗೆದ್ರೂ ಸಹಾ ಟೆಸ್ಟ್‌ ಕ್ರಿಕೇಟ್‌ನಲ್ಲಿ ಅತ್ಯಂತ ಕಳಪೆ ಪ್ರದರ್ಶನ ನೀಡಿದೆ. ನ್ಯೂಜಿಲೆಂಡ್‌ ವಿರುದ್ಧದ ಟೆಸ್ಟ್‌ ಸರಣಿ ಹಾಗೂ ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್‌ ಗವಾಸ್ಕರ್‌ ಟ್ರೋಫಿಯಲ್ಲಿ ಭಾರತ ಮುಗ್ಗರಿಸಿದ ಬಳಿಕ ಗಂಭೀರ್‌ ಸಾಕಷ್ಟು ಟೀಕೆಗಳನ್ನು ಎದುರಿಸಿದ್ರು..

ಟೀಂ ಇಂಡಿಯಾದ ವೈಫಲ್ಯಕ್ಕೆ ಗಂಭೀರ್‌ ಕಾರಣ ಅನ್ನೋ ಕಳಂಕ ಹೊತ್ತಿದ್ರು. ಇತ್ತ ರೋಹಿತ್‌ ಹಾಗೂ ಕೊಹ್ಲಿ ಕೂಡ ಆ ಟೆಸ್ಟ್‌ ಪಂದ್ಯಗಳಲ್ಲಿ ನೀರಸ ಪ್ರದರ್ಶನ ತೋರಿಸಿದ್ರು. ಹೀಗಾಗಿಯೇ ಇದನ್ನೇ ಬಂಡವಾಳ ಮಾಡಿಕೊಂಡ ಗಂಭೀರ್‌ ಸ್ಟಾರ್‌ ಆಟಗಾರರಿಗೆ ಕೋಕ್‌ ಕೊಟ್ಟು ಯುವ ಹಾಗೂ ಹೊಸ ಮುಖಗಳಿಗೆ ಅವಕಾಶ ಕೊಡುವ ಅಭಿಪ್ರಾಯವನ್ನ ಬಿಸಿಸಿಐ ಮುಂದೆ ಇಟ್ಟಿದ್ರು..

2025-27ರ ವರ್ಡ್‌ ಟೆಸ್ಟ್‌ ಚಾಂಪಿಯನ್ಸ್‌ಶಿಪ್‌ ಸೈಕಲ್‌ ಇಂಗ್ಲೆಂಡ್‌ ಟೆಸ್ಟ್‌ ಸರಣಿಯಿಂದ ಶುರುವಾಗಲಿದ್ದು.. ಇದಕ್ಕೆ ಗಂಭೀರ್‌ ಈಗ್ಲಿಂದಾನೇ ತಂಡ ಕಟ್ಟುವ ಕಾರ್ಯದಲ್ಲಿ ತೊಡಗಿದ್ದಾರೆ.. ಈಗಾಗಲೇ ಭಾರತದ ಟಿ20 ಟೀಂಗೆ ಗಂಭೀರ್‌ ಹೇಳಿದ್ದೇ ವೇದವಾಕ್ಯ.. ಅದೇ ರೀತಿ ಟೆಸ್ಟ್‌ ಮಾದರಿಯಲ್ಲೂ ತನ್ನ ಪ್ರಾಬಲ್ಯವನ್ನು ಮುಂದುವರಿಸಲೆಂದೇ ಗಂಭೀರ್‌ ಕೊಹ್ಲಿ-ರೋಹಿತ್‌ರಂತಹ ಸ್ಟಾರ್‌ ಆಟಗಾರರಿಗೆ ಕೋಕ್‌ ಕೊಡಿಸಿದ್ದಾರೆ ಅನ್ನೋ ಚರ್ಚೆಗಳು ಶುರುವಾಗಿವೆ.. ತಂಡದ ಆಯ್ಕೆ, ಗೇಮ್‌ಪ್ಲ್ಯಾನ್‌ ವಿಚಾರದಲ್ಲಿ ತಮ್ಮದೇ ಸ್ವಂತ ನಿರ್ಧಾರಗಳನ್ನ ಹೇರಲು ಗಂಭೀರ್‌ ಭಾರತದ ಯುವ ತಂಡವನ್ನು ಕಟ್ಟುವ ಪ್ರಯತ್ನದಲ್ಲಿದ್ದಾರೆ.. ಈ ಮೂಲಕ ಭಾರತದ ಸ್ಟಾರ್‌ ಸಂಸ್ಕೃತಿಗೆ ಅಂತ್ಯ ಹಾಡಲು ಮುಂದಾಗಿದ್ದಾರೆ ಎನ್ನಲಾಗಿದೆ.. ಇವರ ಕಾರ್ಯಕ್ಕೆ ಅಜಿತ್‌ ಅಗರ್ಕರ್‌ ಕೂಡ ಸಾಥ್‌ ನೀಡಿದ್ದಾರೆ..

ಗಂಭೀರ್‌ ಏನೋ ಸ್ಟಾರ್‌ಗಿರಿ ಕಿತ್ತು ತನ್ನ ಮಾತೇ ನಡೆಯಬೇಕು ಅಂತ ಯಂಗ್‌ ಟೀಂ ಕಟ್ಟುತ್ತಿದ್ದಾರೆ.. ಆದ್ರೆ ಈ ಹಿಂದೆ ಇದೇ ಗಂಭೀರ್‌ ಬಹುತೇಕ ಸಹಾ ಆಟಗಾರರ ಜೊತೆ ಉತ್ತಮ ಬಾಂಧವ್ಯವನ್ನು ಉಳಿಸಿಕೊಂಡಿರಲಿಲ್ಲ.. ಪ್ರತಿಯೊಂದು ವಿಚಾರದಲ್ಲೂ ಕಿರಿಕ್‌ ತೆಗೆದು ತನ್ನದೇ ನಿರ್ಧಾರ ನಡೆಯಬೇಕು ಅಂತ ಜಗಳವಾಡಿದ್ದು ಇದೆ.. ಹೀಗಿರುವಾಗ ಅನುಭವವಿಲ್ಲದ ಆಟಗಾರರ ತಂಡ ಕಟ್ಟಿ ಬೇಕಾಬಿಟ್ಟಿ ನಿರ್ಧಾರಗಳನ್ನ ತೆಗೆದುಕೊಂಡ್ರೆ ಟೀಂ ಇಂಡಿಯಾಗೆ ಭಾರೀ ಸಂಕಷ್ಟ ಎದುರಾಗ್ಬೋದು. ಪ್ರತಿಯೊಂದು ಸರಣಿಗೂ ಆಟಗಾರರನ್ನು ಬದಲು ಮಾಡ್ತಾ ಹೋದ್ರೆ ಹೊಂದಾಣಿಕೆಯ ಕೊರತೆ ಎದುರಾಗ್ಬೋದು. ಇದ್ರಿಂದ ಗಂಭೀರ್‌ ತಮ್ಮ ಅವಧಿ ಮುಗಿಸಿದ ಬಳಿಕ ಇತರೆ ಕೋಚ್‌ಗಳಿಗೂ ಸಾಕಷ್ಟು ಸಮಸ್ಯೆ ಎದುರಾಗೋ ಸಾಧ್ಯತೆಗಳಿವೆ.

Also Read: UPSC ಆಕಾಂಕ್ಷಿಗಳಿಗೆ ಗುಡ್‌ನ್ಯೂಸ್‌ : ಅಧಿಸೂಚನೆ ಹೊರಡಿಸಿದ ಆಯೋಗ

ಒಟ್ನಲ್ಲಿ ಟೀಂ ಇಂಡಿಯಾದಲ್ಲಿ ಇಲ್ಲೀವರೆಗೆ ಗಂಗೂಲಿ, ಎಂಎಸ್‌ ಧೋನಿ ಇಂದ ಹಿಡಿದು ರೋಹಿತ್‌, ಕೊಹ್ಲಿವರೆಗೂ ಸ್ಟಾರ್‌ ಆಟಗಾರರು ತೆಗೆದುಕೊಂಡ ನಿರ್ಧಾರಗಳೇ ಫೈನಲ್‌ ಆಗ್ತಿತ್ತು. ಆಟಗಾರರ ಹಾಗೂ ಕೋಚ್‌ಗಳ ಮನಸ್ತಾಪದಲ್ಲಿ ಆಟಗಾರರೇ ಮೇಲುಗೈ ಸಾಧಿಸ್ತಿದ್ರು.. ಆದ್ರೆ ಟೀಂ ಇಂಡಿಯಾದ ಕೋಚ್‌ ಗಂಭೀರ್‌ ಇವೆಲ್ಲಕ್ಕೂ ಫುಲ್‌ಸ್ಟಾಪ್‌ ಇಟ್ಟಿದ್ದಾರೆ ಎನ್ನಲಾಗಿದೆ.. ಆದ್ರೆ ಗಂಭೀರ್‌ ಲೆಕ್ಕಾಚಾರದಂತೆ ಎಲ್ಲವೂ ನಡೆಯುತ್ತಾ ಅಥವಾ ಶುಭ್‌ಮನ್‌ ಗಿಲ್‌ರಂತಹ ಆಟಗಾರರು ಸ್ಟಾರ್‌ ಪಟ್ಟಕ್ಕೇರಿ ಗಂಭೀರ್‌ಗೆ ಕೋಕ್‌ ಕೊಡ್ತಾರಾ..? ಸದ್ಯದ ಪರಿಸ್ಥಿತಿ ಟೀಂ ಇಂಡಿಯಾ ಮೇಲೆ ಯಾವ ರೀತಿಯ ಪರಿಣಾಮ ಬೀರುತ್ತೆ ಅನ್ನೋದು ಕಾದು ನೋಡಬೇಕಿದೆ..

Share.
Leave A Reply