ಬೆಂಗಳೂರು: ಇಲ್ಲಿಯವರೆಗೆ ಜನರು ಉಡ್ತಾ ಪಂಜಾಬ್ ಅನ್ನೋದನ್ನು ಕೇಳಿದ್ದರು. ಆದರೆ, ಈಗ ಉಡ್ತಾ ಕರ್ನಾಟಕ ಅನ್ನೋವಂತಾಗಿದೆ. ಪಂಜಾಬ್ ರಾಜ್ಯದಲ್ಲಿ ಡ್ರಗ್ ಮಾಫಿಯಾ ಯಾವ ರೀತಿ ಯುವ ಜನರ ಬದುಕನ್ನು ಹಾಳು ಮಾಡುತ್ತಿದೆ ಎನ್ನೋದನ್ನು ಉಡ್ತಾ ಪಂಜಾಬ್ ಚಿತ್ರ ತೋರಿಸಿತ್ತು. ಈಗ ಆ ಪರಿಸ್ಥಿತಿ ಕರ್ನಾಟಕಕ್ಕೂ ಬಂದೋದಗಿದೆ.

ರಾಜ್ಯದಲ್ಲೂ ಬೃಹತ್ ಡ್ರಗ್ಸ್ ಮಾಫಿಯಾ ಕಾರ್ಯಾಚರಣೆ ಮಾಡುತ್ತಿದೆ. ದೇಶ, ವಿದೇಶದ ಯುವ ಜನರನ್ನು ಆಕರ್ಷಣೆ ಮಾಡುವ ಬೆಂಗಳೂರಿನಲ್ಲಿ ಮಾದಕ ವಸ್ತುಗಳ ಮಾರಾಟ, ಉತ್ಪಾದನಾ ಜಾಲ ವ್ಯವಸ್ಥಿತವಾಗಿ ಕಾರ್ಯರೂಪಗೊಂಡಿದ್ದು, ದೊಡ್ಡ ಆತಂಕಕ್ಕೆ ಕಾರಣವಾಗುತ್ತಿದೆ. ಮಹಾರಾಷ್ಟ್ರದಲ್ಲಿ ಸೆರೆಯಾಗಿದ್ದ ಡ್ರಗ್ ಪೆಡ್ಲರ್ ತನಿಖೆಯ ಸಂದರ್ಭದಲ್ಲಿ ನೀಡಿದ್ದ ಮಾಹಿತಿ ಈಗ ಇಡೀ ಕರ್ನಾಟಕವನ್ನೇ ಬೆಚ್ಚಿ ಬೀಳಿಸಿದೆ. ಪೆಡ್ಲರ್ ಮಾಹಿತಿಯ ಆಧಾರದಲ್ಲಿ ಮಹಾರಾಷ್ಟ್ರ ಪೊಲೀಸರು ಮೈಸೂರು ಹೊರ ವಲಯದ ರಿಂಗ್ ರಸ್ತೆಯ ಬಳಿ ಇದ್ದ ಡ್ರಗ್ಸ್ ತಯಾರಕಾ ಘಟಕದ ಮೇಲೆ ದಾಳಿ ನಡೆಸಿ ಕೋಟ್ಯಾಂತರ ರೂ. ಮೌಲ್ಯದ ಡ್ರಗ್ ವಶಕ್ಕೆ ಪಡೆದಿದ್ದಾರೆ. ದೇಶ, ವಿದೇಶಕ್ಕೆ ಡ್ರಗ್ಸ್ ಪೂರೈಕೆ ಆಗುತ್ತಿತ್ತು. ಆದರೂ ಇದರ ಬಗ್ಗೆ ಸ್ಥಳೀಯರಿಗೆ ಮಾಹಿತಿ ಇರಲಿಲ್ಲ ಎನ್ನುವುದು ಮಾತ್ರ ಭಯಾನಕ ಅಚ್ಚರಿಯ ಸಂಗತಿ.

ಜುಲೈನಲ್ಲಿ ಮೈಸೂರಿನಲ್ಲಿ ಕೂಡ ದೊಡ್ಡ ಡ್ರಗ್ಸ್ ಜಾಲ ಪತ್ತೆಯಾಗಿತ್ತು. ಈ ಘಟನೆ ಮಾಸುವ ಮುನ್ನವೇ ಈಗ ಮಹಾರಾಷ್ಟ್ರ ಪೊಲೀಸರು ಕೋಟ್ಯಾಂತರ ರೂ. ಮೊತ್ತದ ಡ್ರಗ್ಸ್ ವಶಕ್ಕೆ ಪಡೆದಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ತಲೆಮರೆಸಿಕೊಂಡಿರುವ ಆರೋಪಿಗಳಿಗೆ ಹುಡುಕಾಟ ತೀವ್ರಗೊಳಿಸಲಾಗಿದೆ. ರಾಜಸ್ಥಾನದ ಉದ್ಯಮಿಗಳಾದ ಯೋಗಿರಾಜ್ ಕುಮಾರ್, ನಯನ್ ಪವಾರ್ ಹಾಗೂ ಇತರರು ಬೆಂಗಳೂರಿನಲ್ಲಿ ಡ್ರಗ್ಸ್ ತಯಾರಕಾ ಕಾರ್ಖಾನೆ ನಡೆಸುತ್ತಿದ್ದರು. ದಾಳಿಯ ಸಂದರ್ಭದಲ್ಲಿ 4.1 ಕೆಜಿ ಘನರೂಪದ ಎಂಡಿಎಂಎ ಮತ್ತು 17 ಕೆಜಿ ದ್ರವರೂಪದ ಎಂಡಿಎಂಎ ಸೇರಿದಂತೆ ಒಟ್ಟು 21.4 ಕೆಜಿ ಡ್ರಗ್ಸ್ ವಶಕ್ಕೆ ಪಡೆದುಕೊಳ್ಳಲಾಗಿದೆ.

ಇಷ್ಟೆಲ್ಲ ನಡೆದರೂ ಕರ್ನಾಟಕ ಪೊಲೀಸರು ಏನು ಮಾಡುತ್ತಿದ್ದಾರೆ ಎಂಬ ಸಹಜ ಪ್ರಶ್ನೆ ಉದ್ಭವಿಸಿದೆ. ಇದು ರಾಜ್ಯ ಗೃಹ ಸಚಿವ ಡಾ. ಜಿ ಪರಮೇಶ್ವರ್ ಅವರಿಗೂ ಮುಜುಗರ ಉಂಟುಮಾಡಿದೆ. ರಾಜ್ಯದಲ್ಲಿ ಡ್ರಗ್ಸ್ ಮಾಫಿಯಾಗೆ ಸಂಬಂಧಿಸಿದಂತೆ 2023 ರಲ್ಲಿ 6768 , 2024 ರಲ್ಲಿ 4168 ಹಾಗೂ 2025 ರಲ್ಲಿ 5743 ಪ್ರಕರಣ ದಾಖಲಾಗಿವೆ. ಮಾರಾಟ ಮತ್ತು ಬಳಕೆ ಆರೋಪದ ಅಡಿಯಲ್ಲಿ 8654 ಮಂದಿ ಆರೋಪಿಗಳನ್ನು ಎರಡು ವರ್ಷಗಳಲ್ಲಿ ಬಂಧಿಸಲಾಗಿದೆ. 5901 ಎಫ್ ಐ ಆರ್ ದಾಖಲು ಮಾಡಲಾಗಿವೆ. ಬೆಂಗಳೂರು ನಗರದಲ್ಲಿ 2024 ರಲ್ಲಿ ಎನ್ ಡಿ ಪಿ ಎಸ್ ಕಾಯ್ದೆ ಅಡಿಯಲ್ಲಿ 520 ಪ್ರಕರಣಗಳು ದಾಖಲಾಗಿವೆ.

ಒಟ್ಟು 1884.79 ಕೆಜಿ ಗಾಂಜಾ ಹಾಗೂ ಸಿಂಥೆಟಿಕ್ ಡ್ರಗ್ಸ್ ವಶಕ್ಕೆ ಪಡೆಯಲಾಗಿವೆ. 2025 ರಲ್ಲಿ ಗಾಂಜಾ ಮತ್ತು ಸಿಂಥೆಟಿಕ್ ಡ್ರಗ್ಸ್ ಮಾರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ 1099 ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ. 1381.54 ಕೆಜಿ ಗಾಂಜಾವನ್ನು ವಶಕ್ಕೆ ಪಡೆಯಲಾಗಿದ್ದು, 445 ಮಾರಾಟಗಾರರ ವಿರುದ್ಧ ಎಫ್ಐಆರ್ ದಾಖಲಾಗಿದೆ. ಡ್ರಗ್ಸ್ ಮಾಫಿಯಾದಲ್ಲಿ ಭಾಗಿಯಾದ ವಿದೇಶಿ ಪ್ರಜೆಗಳ ವಿರುದ್ಧನೂ ಕಾನೂನು ಕ್ರಮಗಳನ್ನು ಜರಗಿಸಲಾಗುತ್ತಿದೆ. ಆದರೂ ರಾಜ್ಯದಲ್ಲಿ ಡ್ರಗ್ಸ್ ಮಾಫಿಯಾವನ್ನು ಹತ್ತಿಕ್ಕಲು ಆಗುತ್ತಿಲ್ಲ ಎನ್ನುವುದೇ ದುರಂತ.

Share.
Leave A Reply