ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ಎಡಗೈ ವೇಗದ ಬೌಲರ್ ಯಶ್ ದಯಾಳ್ಗೆ (Yash Dayal) ಪೋಕ್ಸೋ ಕಾಯ್ದೆಯಡಿ ಬಂಧನ ಭೀತಿ ಎದುರಾಗಿದೆ.
ಜೈಪುರದ ಪೋಕ್ಸೋ ನ್ಯಾಯಾಲಯವು ಯಶ್ ದಯಾಳ್ ಅವರ ನಿರೀಕ್ಷಣಾ ಜಾಮೀನು ಅರ್ಜಿ ತಿರಸ್ಕರಿಸಿದೆ. ವಾಸ್ತವವಾಗಿ ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಗಂಭೀರ ಆರೋಪದ ಮೇಲೆ ಪೊಲೀಸರು ಯಶ್ ದಯಾಳ್ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದರು. ನ್ಯಾಯಾಲಯದ ನ್ಯಾಯಾಧೀಶೆ ಅಲ್ಕಾ ಬನ್ಸಾಲ್ ಅವರ ತೀರ್ಪಿನ ಪ್ರಕಾರ, ಲಭ್ಯವಿರುವ ಪುರಾವೆಗಳು ಮತ್ತು ತನಿಖೆಯ ವರದಿಯನ್ನು ನೋಡಿದರೆ, ಆರೋಪಿ ವಿರುದ್ಧ ಷಡ್ಯಾಂತ್ರ ಮಾಡಲಾಗಿದೆ ಎಂಬುವುದನ್ನು ಒಪ್ಪಲಾಗದು. ಇದರಲ್ಲಿ ಆರೋಪಿಯ ಪಾತ್ರವಿದೆ ಎಂಬುದನ್ನು ಅರಿಯಬಹುದು ಎಂಬ ತೀರ್ಪು ನೀಡಿದ್ದು, ಜಾಮೀನು ಅರ್ಜಿಯನ್ನು ತಿರಸ್ಕರಿಸಿದ್ದಾರೆ.
ಜುಲೈ 23, 2025 ರಂದು, ಜೈಪುರದ ಸಂಗನೇರ್ ಸದರ್ ಪೊಲೀಸ್ ಠಾಣೆಯಲ್ಲಿ 19 ವರ್ಷದ ಯುವತಿಯೊಬ್ಬಳು ಯಶ್ ದಯಾಳ್ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಿಸಿದ್ದರು. ದೂರಿನಂತೆ, ‘ಎರಡು ವರ್ಷಗಳ ಹಿಂದೆ ಐಪಿಎಲ್ ಪಂದ್ಯವನ್ನಾಡಲು ಯಶ್ ದಯಾಳ್ ಜೈಪುರಕ್ಕೆ ಬಂದಿದ್ದರು. ಆ ವೇಳೆ ನಾನು ಅಪ್ರಾಪ್ತ ವಯಸ್ಸಿನವಳಾಗಿದ್ದು ತನ್ನ ಕ್ರಿಕೆಟ್ ವೃತ್ತಿಜೀವನದ ಬಗ್ಗೆ ಸಲಹೆ ನೀಡುವ ನೆಪದಲ್ಲಿ ಯಶ್ ದಯಾಳ್ ತನ್ನನ್ನು ಸೀತಾಪುರದಲ್ಲಿನ ಹೋಟೆಲ್ ಇಂಟರ್ ಕಾಂಟಿನೆಂಟಲ್‌ಗೆ ಕರೆಸಿ ನನ್ನ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆಂದು ದೂರಿದ್ದಾರೆ.
