ಬೆಳಗಾವಿ: ಇಂದಿನಿಂದ ಬೆಳಗಾವಿ ಸುವರ್ಣ ಸೌಧದಲ್ಲಿ ಚಳಿಗಾಲದ ಅಧಿವೇಶನ ಆರಂಭವಾಗಲಿದ್ದು, ತೊಡೆ ತಟ್ಟಲು ವಿಪಕ್ಷಗಳು ಸಿದ್ಧವಾಗಿವೆ.
ಉತ್ತರ ಕರ್ನಾಟಕ ಭಾಗದ ಸಮಸ್ಯೆಗಳನ್ನು ಆಲಿಸಿ, ಚರ್ಚಿಸಿ, ಪರಿಹರಿಸುವುದಕ್ಕಾಗಿ ಸುವರ್ಣಸೌಧ ನಿರ್ಮಿಸಲಾಯಿತು. ಆದರೆ, ಗದ್ದಲ-ಗೊಂದಲ, ಪ್ರತಿಭಟನೆಗಳಿಗೆ ಮಾತ್ರ ಇಲ್ಲಿಯವರೆಗೆ ಉಭಯ ಕಲಾಪಗಳು ಸಾಕ್ಷಿಯಾಗಿವೆಯೇ ಹೊರತು, ಜನರ ಸಮಸ್ಯೆಗಳು ಮಾತ್ರ ಹಾಗೆಯೇ ಇವೆ ಎಂದು ಜನ ಆರೋಪಿಸುತ್ತಿದ್ದಾರೆ.
ಡಿ. 19ರ ವರೆಗೆ 10 ದಿನಗಳ ಕಾಲ ಅಧಿವೇಶನ ನಡೆಯಲಿದ್ದು, 21ಕ್ಕೂ ಅಧಿಕ ವಿಧೇಯಕಗಳ ಮಂಡನೆ ಸಾಧ್ಯತೆ ಇದೆ. ಸುವರ್ಣ ವಿಧಾನಸೌಧದಲ್ಲಿ ಇಂದಿನಿಂದ ಚಳಿಗಾಲದ ಅಧಿವೇಶನ (Winter Session) ಆರಂಭವಾಗಲಿದೆ. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಈ ಬಾರಿ ಬೆಳಗಾವಿ ನಗರದಲ್ಲಿ ಹೆಚ್ಚುವರಿ ಭದ್ರತೆ ನಿಯೋಜನೆ ಮಾಡಲಾಗಿದೆ.
ವಿರೋಧ ಪಕ್ಷಗಳ ಆರೋಪಕ್ಕೆ ತಿರುಗೇಟು ನೀಡಲು ಸರ್ಕಾರ ಸಿದ್ಧತೆ ಮಾಡಿಕೊಂಡಿದ್ದರೆ, ಇಕ್ಕಟ್ಟಿಗೆ ಸಿಲುಕಿಸಲು ಬಿಜೆಪಿ-ಜೆಡಿಎಸ್ ದೋಸ್ತಿಗಳು ಸಜ್ಜಾಗಿವೆ. ಸಿಎಂ ಕುರ್ಚಿಯ ಫೈಟ್ ಸುವರ್ಣ ಸೌಧದಲ್ಲೂ ಸದ್ದು ಮಾಡುವ ಸಾಧ್ಯತೆ ಇದೆ. ಹೀಗಾಗಿ ಅಧಿವೇಶನದಲ್ಲಿ ಅವಿಶ್ವಾಸ ನಿಲುವಳಿ ಮಂಡನೆಗೆ ವಿಪಕ್ಷ ಬಿಜೆಪಿ ಚಿಂತಿಸಿತ್ತು. ಈಗ ಆ ನಿರ್ಧಾರ ಕೈ ಬಿಟ್ಟಿದೆ ಎನ್ನಲಾಗಿದೆ.
ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಸಮಸ್ಯೆಗಳೇ ಪ್ರಮುಖ ಅಸ್ತ್ರವಾಗಲಿವೆ. ಕಳೆದ ಬೆಳಗಾವಿ ಅಧಿವೇಶನದಲ್ಲಿ ನೀಡಿದ್ದ ಭರವಸೆಗಳ ಅನುಷ್ಠಾನದ ಸ್ಥಿತಿಗತಿ ಕುರಿತು ಸರ್ಕಾರದಿಂದ ಮಾಹಿತಿ ಕೋರಲಿವೆ ಎನ್ನಲಾಗಿದೆ. ಮೆಕ್ಕೆಜೋಳ, ಕಬ್ಬಿನ ಬೆಲೆ ನಿಗದಿ, ಹೆಸರು ಕಾಳು ಬೆಲೆ ಕುಸಿದಿರುವುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ. ಹೀಗಾಗಿ ರೈತರು ಹಲವಾರು ಬೇಡಿಕೆ ಮುಂದಿಟ್ಟುಕೊಂಡು ಪ್ರತಿಭಟನೆಗೆ ಮುಂದಾಗಿದ್ದಾರೆ. ಇದರೊಂದಿಗೆ ಕಬ್ಬು ಬೆಳೆಗಾರರ ಹೋರಾಟ ಕೂಡ ಮುಂಚೂಣಿಯಲ್ಲಿರಲಿದೆ. ಹೀಗಾಗಿ ರೈತರು ಸುವರ್ಣಸೌಧಕ್ಕೆ ಮುತ್ತಿಗೆ ಹಾಕಲು ನಿರ್ಧರಿಸಿದ್ದಾರೆ.
ಹೀಗಾಗಿ ಹೆಚ್ಚುವರಿ ಪೊಲೀಸರನ್ನು ನಿಯೋಜಿಸಲಾಗಿದೆ. ಸುಮಾರು 6 ರಿಂದ 8 ಸಾವಿರದಷ್ಟು ಪೊಲೀಸರನ್ನು ನಿಯೋಜಿಸಲಾಗಿದೆ. ಇದರೊಂದಿಗೆ ಉದ್ಯೋಗಾಕಾಂಕ್ಷಿಗಳು ಕೂಡ ಸರ್ಕಾರದ ವಿರುದ್ಧ ಮುಗಿ ಬೀಳಲು ನಿರ್ಧರಿಸಿದ್ದಾರೆ. ಒಟ್ಟು 180ಕ್ಕೂ ಅಧಿಕ ಸಂಘಟನೆಗಳು ಈ ಬಾರಿ ಹೋರಾಟ ನಡೆಸಲಿವೆ ಎನ್ನಲಾಗಿದೆ. ಆದರೆ, ಅ ಅಧಿವೇಶನದಿಂದಲಾದರೂ ಉತ್ತರ ಕರ್ನಾಟಕದ ಕನಸುಗಳು ನನಸಾಗಲಿವೆಯೇ ಕಾಯ್ದು ನೋಡಬೇಕಿದೆ.
