ಪಕ್ಷದಲ್ಲಿ ಎಲ್ಲಿಯೂ ಅಸಮಾಧಾನವಿಲ್ಲ. ಪಕ್ಷ ಸಂಘಟನೆ ಸೇರಿದಂತೆ ಪಕ್ಷದ ಹಾಗುಹೋಗುಗಳನ್ನು ಗಮನಿಸಲು ರಣದೀಪ್ ಸುರ್ಜೇವಾಲಾ ಅವರು ಭೇಟಿ ನೀಡಿದ್ದಾರೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಹೇಳಿದರು.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಿನಿಂದಲೇ ಚುನಾವಣೆಗೆ ಹೇಗೆ ತಯಾರಿ ನಡೆಸಬೇಕು ಎಂಬುದು ಸೇರಿದಂತೆ, ಜವಾಬ್ದಾರಿಗಳ ನಿರ್ವಹಣೆ ಹೇಗೆ ಮಾಡಬೇಕು ಎಂದು ಚರ್ಚೆ ನಡೆಸಲು, ಜವಾಬ್ದಾರಿ ವಹಿಸಲು ಸುರ್ಜೆವಾಲ ಅವರು ಬಂದಿದ್ದಾರೆ ಎಂದರು.
ಶಾಸಕ ಇಕ್ಬಾಲ್ ಹುಸೇನ್‌ಗೆ ನೋಟಿಸ್
ಶಾಸಕ ಇಕ್ಬಾಲ್ ಹುಸೇನ್‌ಗೆ ನೋಟಿಸ್ ನೀಡಿರುವ ಬಗ್ಗೆ ಪ್ರತಿಕ್ರಿಯಿಸಿ, ಪಕ್ಷದಲ್ಲಿ ಶಿಸ್ತು ಮುಖ್ಯ. ಅವರಿಗೂ ನೋಟಿಸ್ ಕೊಡ್ತೀನಿ, ಬೇರೆ ಅವರಿಗೂ ನೋಟಿಸ್ ಕೊಡಬೇಕಾಗುತ್ತದೆ. ಪಕ್ಷದ ಶಿಸ್ತು ಯಾರೂ ಉಲ್ಲಂಘನೆ ಮಾಡಬಾರದು. ಪಕ್ಷದಲ್ಲಿ ಶಿಸ್ತು ಮುಖ್ಯ. ನಾನು ಯಾರಿಗೂ ನನ್ನ ಹೆಸರು ಹೇಳಿ, ಸಿಎಂ ಮಾಡಿ ಅಂತ ಹೇಳಿಲ್ಲ. ಸಿದ್ದರಾಮಯ್ಯ ಮುಖ್ಯಮಂತ್ರಿ ಇದ್ದಾಗ ಬೇರೆ ಯಾರೂ ಅಪಸ್ವರ ಎತ್ತಬಾರದು ಎಂದು ಎಚ್ಚರಿಕೆ ನೀಡಿದರು.
ಪಕ್ಷಕ್ಕೆ ಎಲ್ಲರೂ ಕಷ್ಟಪಟ್ಟಿದ್ದಾರೆ. ನನ್ನಂತ ನೂರಾರು ಕಾರ್ಯಕರ್ತರು ಕಷ್ಟಪಟ್ಟಿದ್ದಾರೆ. ನಾನು ಒಬ್ಬನೇ ಕಷ್ಟಪಟ್ಟಿದ್ದೀನಾ? ಸಾವಿರಾರು ಜನ, ಲಕ್ಷಾಂತರ ಜನ ಕಷ್ಟಪಟ್ಟಿದ್ದಾರೆ. ಮೊದಲು ನಾವು ಅವರ ಬಗ್ಗೆ ಯೋಚನೆ ಮಾಡಬೇಕು ಎಂದು ಶಿಸ್ತು ಉಲ್ಲಂಘನೆ ಮಾಡುತ್ತಿರುವ ಶಾಸಕರಿಗೆ ಎಚ್ಚರಿಕೆ ಕೊಟ್ಟು ಸಿಎಂ ಪರ ಬ್ಯಾಟಿಂಗ್ ಮಾಡಿದ್ದಾರೆ.
