ವುಮೆನ್ಸ್ ಪ್ರೀಮಿಯರ್ ಲೀಗ್ನಲ್ಲಿ ಸತತ 5 ಪಂದ್ಯಗಳಲ್ಲಿ ಗೆದ್ದಿದ್ದ ಆರ್ಸಿಬಿ ಮಹಿಳಾ ತಂಡವು ಡೆಲ್ಲಿ ವಿರುದ್ಧ ಹೀನಾಯ ಸೋಲು ಕಂಡಿದೆ. ಹೀಗಾಗಿ ಫೈನಲ್ ಲೆಕ್ಕಾಚಾರ ಶುರುವಾಗಿದೆ.
ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಆರ್ಸಿಬಿ ತಂಡವು ಗೆಲುವು ದಾಖಲಿಸಿದ್ದರೆ ನೇರವಾಗಿ ಫೈನಲ್ ತಲುಪಲಿತ್ತು. ಈಗ ಸೋತಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಮುಂದಿನ ಎರಡು ಪಂದ್ಯಗಳಲ್ಲಿ ಒಂದು ಗೆಲುವು ಅನಿವಾರ್ಯವಾಗಿದೆ.
ಲೀಗ್ ಹಂತದ ಪಂದ್ಯಗಳ ಮುಕ್ತಾಯದ ವೇಳೆ ಅಂಕ ಪಟ್ಟಿಯಲ್ಲಿ ಮೊದಲ ಸ್ಥಾನ ಅಲಂಕರಿಸುವ ತಂಡವು ನೇರವಾಗಿ ಫೈನಲ್ಗೆ ಪ್ರವೇಶಿಸುತ್ತದೆ.
2ನೇ ಮತ್ತು 3ನೇ ಸ್ಥಾನಗಳನ್ನು ಪಡೆಯುವ ತಂಡಗಳು ಎಲಿಮಿನೇಟರ್ ಪಂದ್ಯದಲ್ಲಿ ಮುಖಾಮುಖಿಯಾಗಲಿವೆ. ಈಗಾಗಲೇ 5 ಪಂದ್ಯಗಳನ್ನು ಗೆದ್ದು 10 ಅಂಕ ಗಳಿಸಿರುವ ಆರ್ಸಿಬಿ ಪ್ಲೇ ಆಫ್ಗೆ ಅರ್ಹತೆ ಪಡೆದಿದೆ. ಮೊದಲ ಸ್ಥಾನದಲ್ಲಿರುವ ಆರ್ಸಿಬಿ ತಂಡವು ಮುಂದಿನ ಎರಡು ಮ್ಯಾಚ್ಗಳಲ್ಲಿ ಒಂದು ಪಂದ್ಯದಲ್ಲಿ ಗೆದ್ದರೆ ಫೈನಲ್ಗೆ ಪ್ರವೇಶಿಸಲಿದೆ.
ಆರ್ಸಿಬಿ ತಂಡವನ್ನು ಹೊರತುಪಡಿಸಿ ಬೇರೆ ಯಾವುದೇ ತಂಡಕ್ಕೆ 12 ಅಂಕಗಳನ್ನು ಪಡೆಯಲು ಅವಕಾಶವಿಲ್ಲ. ಉಳಿದ ನಾಲ್ಕು ತಂಡಗಳು ಮುಂದಿನ ಎಲ್ಲಾ ಮ್ಯಾಚ್ಗಳನ್ನು ಗೆದ್ದರೂ ಒಟ್ಟು 10 ಅಂಕಗಳನ್ನು ಮಾತ್ರ ಪಡೆಯಬಹುದು.
ಹೀಗಾಗಿ ಆರ್ಸಿಬಿ ತಂಡವು ತನ್ನ ಮುಂದಿನ ಎರಡು ಪಂದ್ಯಗಳಲ್ಲಿ ಒಂದು ಪಂದ್ಯ ಗೆದ್ದು ಫೈನಲ್ಗೇರುವುದು ಖಚಿತವಾಗಿದೆ.
ಆರ್ಸಿಬಿಯು ಜ. 26ರಂದು ಮುಂಬೈ ಇಂಡಿಯನ್ಸ್ ಹಾಗೂ ಜ.29ರಂದು ಯುಪಿ ವಾರಿಯರ್ಸ್ ವಿರುದ್ಧ ಸೆಣಸಲಿದೆ.
