ಭಾನುವಾರ ಬೆಂಗಳೂರಿನಲ್ಲಿ ಎಲ್ಲಿ ನೋಡಿದ್ರೂ ಈ ಜೈಘೋಷ ಮೊಳಗುತ್ತಿತ್ತು… ಮಹಾನಗರದ ರಸ್ತೆಯುದ್ದಕ್ಕೂ ಮಳೆಯನ್ನೂ ಲೆಕ್ಕಿಸದೆ ನಿಂತಿದ್ದ ಅಭಿಮಾನಿಗಳು ತಮ್ಮ ನೆಚ್ಚಿನ ನಾಯಕನನ್ನು ಕಣ್ತುಂಬಿಕೊಂಡು ಸಂಭ್ರಮಿಸುವ ದೄಶ್ಯ ಸಾಮಾನ್ಯವಾಗಿತ್ತು. ಬೆಂಗಳೂರಿಗೆ ಆಗಮಿಸಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದ ಪ್ರಧಾನಿ ನರೇಂದ್ರ ಮೋದಿ ಇದರ ಜೊತೆ ಜೊತೆಗೇ ಕಳೆಗುಂದಿದ್ದ ರಾಜ್ಯ ಬಿಜೆಪಿಗೆ ಹಾಗೂ ಕಾರ್ಯಕರ್ತರಿಗೆ ನವ ಚೈತನ್ಯ ನೀಡಿದಂತೆ ಕಂಡುಬಂತು.

ರಸ್ತೆಯುದ್ದಕ್ಕೂ ನಿಂತು ಮೋದಿ ಕಣ್ತುಂಬಿಕೊಂಡ ಜನಸಾಗರ
ಬೆಂಗಳೂರು ನಗರದ ಹಲವು ರಸ್ತೆಗಳು ಭಾನುವಾರ ಸಂಪೂರ್ಣವಾಗಿ ಮೋದಿ ಮಯವಾಗಿದ್ವು. ನಗರದ ಬೀದಿ ಬೀದಿಗಳಲ್ಲಿ ಮಕ್ಕಳು ಮಹಿಳೆಯರು, ವೃದ್ಧರೆನ್ನದೆ ನಿಂತಿದ್ದ ಪ್ರಧಾನಿ ಅಭಿಮಾನಿಗಳು ಕೇಸರಿ ಶಾಲು, ಭಾವುಟಗಳೊಂದಿಗೆ ನಮೋಗೆ ಜೈಕಾರ ಹಾಕಿದ್ರು. ಸಾಂಸ್ಕೃತಿಕ ಕಲಾ ತಂಡಗಳೊಂದಿಗೆ ನೆಚ್ಚಿನ ಪ್ರಧಾನಿಗೆ ಸ್ವಾಗತ ಕೋರಿದ್ರು. ವಿಮಾನ ನಿಲ್ದಾಣದಲ್ಲಿ ಮಾಜಿ ಸಿಎಂ ಬಿ.ಎಸ್‌. ಯಡಿಯೂರಪ್ಪ ಹಾಗೂ ಪ್ರತಿಪಕ್ಷ ನಾಯಕ ಆರ್‌. ಅಶೋಕ್‌ ಸ್ವಾಗತಿಸಿದ್ರೆ, ಮತ್ತೊಂದೆಡೆ ಸಿಎಂ ಸಿದ್ದರಾಮಯ್ಯ ಹಾಗೂ ರಾಜ್ಯಪಾಲರಾದ ಥಾವರ್‌ಚಂದ್‌ ಗೆಹ್ಲೋಟ್‌ ಪ್ರಧಾನಿಯನ್ನು ಆತ್ಮೀಯವಾಗಿ ಬರಮಾಡಿಕೊಂಡ್ರು.

3 ವಂದೇ ಭಾರತ್ ರೈಲುಗಳಿಗೆ ಲೋಕಾರ್ಪಣೆ
ಪ್ರಧಾನಿ ಮೋದಿ, ರಾಜ್ಯಪಾಲರು, ಸಿಎಂ ಹಾಗೂ ಕೇಂದ್ರ ಸಚಿವರು ಸೇರಿದಂತೆ ಹಲವು ಗಣ್ಯರ ಸಮ್ಮುಖದಲ್ಲಿ 3 ವಂದೇ ಭಾರತ್‌ ರೈಲುಗಳಿಗೆ ಚಾಲನೆ ನೀಡಿದ್ರು. ಬೆಂಗಳೂರು-ಬೆಳಗಾವಿ, ಅಮೃತಸರ- ಶ್ರೀ ಮಾತಾ ವೈಷ್ಣೋದೇವಿ ಕತ್ರಾ, ನಾಗಪುರ-ಪುಣೆ ಈ ಮೂರು ಮಾರ್ಗಗಳಲ್ಲಿ ಸಂಚರಿಸುವ ವಂದೇ ಭಾರತ್‌ ರೈಲುಗಳಿಗೆ ಹಸಿರು ನಿಶಾನೆ ತೋರಿದ್ರು. ಅಲ್ಲಿದ್ದ ಪುಟಾಣಿಗಳೊಂದಿಗೆ ಆತ್ಮೀಯವಾಗಿ ಮಾತುಕತೆ ನಡೆಸಿ ಪ್ರೀತಿ ತೋರಿಸಿದ್ರು.

ಮೆಟ್ರೋ ಎಲ್ಲೋ ಲೈನ್‌ಗೆ ನಮೋ ಗ್ರೀನ್‌ ಸಿಗ್ನಲ್‌
ನಗರಕ್ಕೆ ಪ್ರಧಾನಿ ಮೋದಿ ಆಗಮನದೊಂದಿಗೆ ಬೆಂಗಳೂರು ದಕ್ಷಿಣ ಭಾಗದ ಜನರ ಬಹುನಿರೀಕ್ಷಿತ ಕನಸೊಂದು ನನಸಾಯಿತು. ಜಯನಗರದ ರಾಗಿಗುಡ್ಡ ಮೆಟ್ರೋ ನಿಲ್ದಾಣದಲ್ಲಿ ಆರ್‌ವಿ ರಸ್ತೆ- ಬೊಮ್ಮಸಂದ್ರ ನಡುವಿನ ಎಲ್ಲೋ ಲೈನ್‌ ಮೆಟ್ರೋ ಮಾರ್ಗದ ಸಂಚಾರಕ್ಕೆ ಮೋದಿ ಅಧಿಕೃತ ಚಾಲನೆ ನೀಡಿದ್ರು. 7,160 ಕೋಟಿ ರೂ ವೆಚ್ಚದ ಈ ಮಾರ್ಗ ಎಲ್ಲೆಲ್ಲಿ ಹಾದು ಹೋಗುತ್ತೆ ಅನ್ನೋದು ಸೇರಿದಂತೆ ಎಲ್ಲೋ ಲೈನ್‌ನ ವಿಶೇಷತೆಗಳನ್ನು ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್‌ ಪ್ರಧಾನಿಗೆ ವಿವರಿಸಿದ್ರು. ರಾಗಿಗುಡ್ಡ ನಿಲ್ದಾಣದಲ್ಲಿ ಸ್ಕ್ಯಾನ್‌ ಮಾಡಿ ತಾವೇ ಟಿಕೆಟ್‌ ಖರೀದಿಸಿದ ಪ್ರಧಾನಿ ಕೋನಪ್ಪನ ಅಗ್ರಹಾರ ಸ್ಟೇಷನ್‌ವರೆಗೆ ಮಕ್ಕಳೊಂದಿಗೆ ಮಾತಾಡ್ತ ಮೆಟ್ರೊದಲ್ಲಿ ಪ್ರಯಾಣ ಮಾಡಿದ್ರು.

ಸಿಎಂ, ಡಿಸಿಎಂ ಜೊತೆಗೆ ಆತ್ಮೀಯವಾಗಿ ಬೆರೆತ ಪ್ರಧಾನಿ
ಮೋದಿಯವರ ಎಡ-ಬಲದಲ್ಲಿ ಸಿಎಂ-ಡಿಸಿಎಂ ಕುಳಿತು ಪ್ರಯಾಣಿಸಿದ್ದಲ್ಲದೆ ಕೇಂದ್ರ ಸಚಿವರಾದ ಎಚ್‌.ಡಿ. ಕುಮಾರಸ್ವಾಮಿ, ಮನೋಹರ್‌ಲಾಲ್‌ ಖಟ್ಟರ್‌, ಅಶ್ವನಿ ವೈಷ್ಣವ್‌ ಪ್ರಲ್ಹಾದ್‌ ಜೋಷಿ, ವಿ. ಸೋಮಣ್ಣ, ಶೋಭಾ ಕರಂದ್ಲಾಜೆ, ಸಂಸದರಾದ ಡಾ. ಮಂಜುನಾಥ್‌, ತೇಜಸ್ವಿ ಸೂರ್ಯ ಸೇರಿದಂತೆ ನಾಯಕರು ಪಕ್ಷ ಬೇಧ ಮರೆತು ಬೆರೆತಿದ್ದು ವಿಶೇಷವಾಗಿತ್ತು. ಬಳಿಕ ನಡೆದ ಕಾರ್ಯಕ್ರಮದಲ್ಲಿ 15,611 ಕೋಟಿ ರೂಪಾಯಿ ವೆಚ್ಚದ ಮೆಟ್ರೋ ಮೂರನೆ ಹಂತದ ಯೋಜನೆಗೂ ಶಂಕುಸ್ಥಾಪನೆ ನೆರವೇರಿಸಿದ್ರು. ಇದಲ್ಲದೆ ಇಂಟರ್‌ನ್ಯಾಷನಲ್‌ ಇನ್‌ಸ್ಟಿಟ್ಯೂಟ್‌ ಆಫ್‌ ಇನ್‌ಫಾರ್‌ಮೇಷನ್‌ ಟೆಕ್ನಾಲಜಿ ಕ್ಯಾಂಪಸ್‌ನ ಕಾರ್ಯಕ್ರಮದಲ್ಲಿ ಭಾಗಿಯಾದ್ರು.

ಇನ್ನಾದ್ರೂ ಮೈಕೊಡವಿ ಏಳ್ತಾರಾ ರಾಜ್ಯ ಬಿಜೆಪಿ ನಾಯಕರು?
ರಾಜ್ಯದಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್‌ ನಿರಂತರವಾಗಿ ಸಮಾವೇಷ, ಕಾರ್ಯಕ್ರಮಗಳ ಮೂಲಕ ಅಬ್ಬರಿಸುತ್ತಿದ್ರೆ ಬಿಜೆಪಿ ನಾಯಕರು ಆಂತರಿಕ ಕಚ್ಚಾಟದಲ್ಲಿ ಕಳೆದುಹೋಗಿದ್ರು. ಅದರಲ್ಲೂ ಎರಡು ದಿನಗಳ ಹಿಂದಷ್ಟೇ ಬೆಂಗಳೂರಿಗೆ ಆಗಮಿಸಿದ್ದ ಕಾಂಗ್ರೆಸ್‌ ಅಧಿನಾಯಕ ರಾಹುಲ್‌ ಗಾಂಧಿ, ಮತಗಳ್ಳತನ ವಿರೋಧಿ ಹೋರಾಟ ನಡೆಸಿ ಸದ್ದು ಮಾಡಿದ್ರು. ಆದ್ರೆ ಭಾನುವಾರ ಪ್ರಧಾನಿ ನರೇಂದ್ರ ಮೋದಿ ಎಂಟ್ರಿಯಿಂದಾಗಿ ಬೆಂಗಳೂರಿನಲ್ಲಿ ಪ್ರಧಾನಿ ಮೋದಿ ಹವಾ ಎದ್ದು ಕಾಣುತ್ತಿತ್ತು.

ಬಿಜೆಪಿ ಕಾರ್ಯಕರ್ತರಿಗಂತೂ ಸಿಕ್ತು ನವ ಚೈತನ್ಯ
ಮೋದಿ ಆಗಮನದಿಂದಾಗಿ ರಾಜ್ಯದ ಬಿಜೆಪಿ ನಾಯಕರಿಗೆ ಉತ್ಸಾಹ ಬಂದಂತೆ ಬಾಸವಾಯ್ತು. ಇದೆಲ್ಲದಕ್ಕಿಂತ ಹೆಚ್ಚಾಗಿ ಪ್ರತಿಪಕ್ಷವಾಗಿ ಆಡಳಿತ ಪಕ್ಷವನ್ನು ಸಮರ್ಥವಾಗಿ ಎದುರಿಸಿ ಇಕ್ಕಟ್ಟಿಗೆ ಸಿಲುಕಿಸಲು ವಿಫಲವಾಗಿರುವ, ಜೀವ ಕಳೆದುಕೊಂಡಿರುವ ರಾಜ್ಯ ಬಿಜೆಪಿ ನಾಯಕರ ಕಾರ್ಯವೈಖರಿಯಿಂದ ಬೇಸತ್ತಿದ್ದ ಬಿಜೆಪಿ ಕಾರ್ಯಕರ್ತರಿಗೆ ಮಾತ್ರ ಭಾನುವಾರ ಹೊಸ ಕಳೆ ಮೂಡಿದ್ದು, ನವ ಚೈತನ್ಯ ಮೂಡಿದ್ದು ಕಂಡುಬಂತು. ಆದ್ರೆ ರಾಜ್ಯ ಬಿಜೆಪಿ ನಾಯಕರು ಇನ್ನಾದ್ರೂ ಮೈ ಕೊಡವಿ ಏಳ್ತಾರ ಎನ್ನುವ ಪ್ರಶ್ನೆ ಮಾತ್ರ ರಾಜ್ಯದ ಜನತೆಯಲ್ಲಿ ಹಾಗೆಯೇ ಉಳಿದುಕೊಂಡಿದೆ.

Share.
Leave A Reply