ನವದೆಹಲಿ: ಭಾರತ ಹಾಗೂ ರಷ್ಯಾ ಮಧ್ಯೆ ಇಂದು 23ನೇ ವಾರ್ಷಿಕ ಶೃಂಗಸಭೆ (India Russia 23rd Joint Annual Summit) ನಡೆಯಿತು. ಇಡೀ ದೆಹಲಿ ಇದಕ್ಕೆ ಸಾಕ್ಷಿಯಾಗಿತ್ತು. ದೆಹಲಿಯಾದ್ಯಂತ ಸಂಭ್ರಮ ಕೂಡ ಮನೆ ಮಾಡಿತ್ತು. ಇದೀಗ ಇಡೀ ದೇಶವೇ ಈ ಸಂಭ್ರಮದಲ್ಲಿ ಭಾಗಿಯಾಗಿದೆ. ಏಕೆಂದರೆ ಈ ಸಭೆ ಕೇವಲ ಔಪಚಾರಿಕ ಸಭೆಯಾಗಿರಲಿಲ್ಲ. ಬದಲಾಗಿ ನಮ್ಮ ದೇಶದ ಶತ್ರುಗಳಿಗೂ ನಡುಕ ಹುಟ್ಟಿಸುವಂತಾಗಿದೆ.
ಪ್ರಧಾನಿ ನರೇಂದ್ರ ಮೋದಿ (Narendra Modi) ಹಾಗೂ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಜಾಗತಿಕ ರಾಜಕೀಯ ಅನಿಶ್ಚಿತ ಪರಿಸ್ಥಿತಿಯಲ್ಲಿ ಎರಡೂ ದೇಶಗಳ ನಡುವಿನ ಆರ್ಥಿಕ ಸಂಬಂಧ ಸುಧಾರಿಸುವ ಕುರಿತು ಚರ್ಚಿಸಲಾಯಿತು. ಸಭೆಯ ನಂತರ ‘ಭಾರತ-ರಷ್ಯಾ: ನಂಬಿಕೆ ಮತ್ತು ಗೌರವದ ತಳಹದಿಯಲ್ಲಿ ದೀರ್ಘ ಸಮಯದ ಪ್ರಗತಿದಾಯಕ ಜೊತೆಗಾರಿಕೆ’ ಎಂಬ ಶೀರ್ಷಿಕೆಯಡಿ ಇಬ್ಬರೂ ನಾಯಕರು ಮಾತನಾಡಿದ್ದಾರೆ.
ಎರಡೂ ದೇಶಗಳ ವ್ಯಾಪಾರ ವಹಿವಾಟನ್ನು 100 ಬಿಲಿಯನ್ ಡಾಲರ್ಗೆ ಏರಿಸುವ ಮಹತ್ವಾಕಾಂಕ್ಷಿ ಗುರಿ ಹೊಂದಿರುವುದಾಗಿ ನಾಯಕರು ಪ್ರಸ್ತಾಪಿಸಿದ್ದಾರೆ. ಈಗಾಗಲೇ ಎರಡೂ ದೇಶಗಳ ವ್ಯಾಪಾರ ವಹಿವಾಟು 69 ಬಿಲಿಯನ್ ಡಾಲರ್ನಷ್ಟು ಇದೆ.ನೂರು ಬಿಲಿಯನ್ ಡಾಲರ್ಗೆ ವ್ಯಾಪಾರ ವಹಿವಾಟು ಹೆಚ್ಚಿಸಲು ಎರಡೂ ದೇಶಗಳು ವಿವಿಧ ಕ್ರಮಗಳನ್ನು ಕೈಗೊಳ್ಳಲು ಸಿದ್ಧವಿವೆ. ಇದರ ಭಾಗವಾಗಿ 2030ರವರೆಗೆ ಆರ್ಥಿಕ ಸಹಕಾರ ಒಪ್ಪಂದಕ್ಕೂ ಸಹಿ ಹಾಕಿ ನಾಯಕರು ಪರಸ್ಪರ ಸಹಕಾರ ಕೋರಿದ್ದಾರೆ.
ಫಾರ್ಮಾ, ಆಟೊಮೊಬೈಲ್, ಕೃಷಿ, ಹೈಟೆಕ್ನಾಲಜಿ ಉತ್ಪನ್ನಗಳನ್ನು ಭಾರತದಿಂದ ರಷ್ಯಾಗೆ ರಫ್ತು ಮಾಡಲು ಕೂಡ ಭಾರತ ಈ ಮೂಲಕ ನಿರ್ಧರಿಸಿದೆ. ಈ ಮೂಲಕ ಭಾರತದ ವಿರೋಧಿ ರಾಷ್ಟ್ರಗಳಿಗೆ ನಡುಕ ಶುರುವಾಗಿದೆ. ಅದರಲ್ಲೂ ನೆರೆಯ ರಾಷ್ಟ್ರಗಳಾದ ಚೀನಾ ಹಾಗೂ ಪಾಕ್ ಗೆ ನಡುಕ ಶುರುವಾಗಿದೆ.
ಇದರೊಂದಿಗೆ ಅಮೆರಿಕಾಗೂ ಶಾಕ್ ಎದುರಾಗಿದೆ. ಅಮೇರಿಕಾದ ನಿರಂತರ ಒತ್ತಡದ ನಡುವೆಯೂ ರಷ್ಯಾದಿಂದ ತೈಲ ಖರೀದಿ ಮಾಡುವುದನ್ನು ಮುಂದುವರಿಸುವ ನಿಟ್ಟಿನಲ್ಲಿ ರಷ್ಯಾ ಮತ್ತು ಭಾರತದ ನಡುವೆ ಮಹತ್ವದ ಮಾತುಕತೆ ನಡೆದಿದೆ.
ರಷ್ಯಾ ಮತ್ತು ಉಕ್ರೇನ್ ನಡುವೆ ಯುದ್ಧ ಮುಂದುವರಿಯುವುದಕ್ಕೆ ಭಾರತ ಮತ್ತು ಚೀನಾ ದೇಶಗಳು ರಷ್ಯಾದಿಂದ ತೈಲ ಖರೀದಿ ಮಾಡುತ್ತಿರುವುದೇ ಪ್ರಮುಖ ಕಾರಣ. ಈ ತೈಲ ಖರೀದಿಯಿಂದ ಬರುವ ಅಪಾರ ಪ್ರಮಾಣದ ಹಣವನ್ನು ರಷ್ಯಾ – ಉಕ್ರೇನ್ ವಿರುದ್ಧದ ಯುದ್ಧಕ್ಕೆ ಬಳಕೆ ಮಾಡಿಕೊಳ್ಳುತ್ತಿದೆ ಎಂದು ಆರೋಪಿಸಿದ್ದ ಅಮೆರಿಕಾ, ಇಂಧನ ಖರೀದಿ ಮಾಡದಂತೆ ಒತ್ತಡ ಹೇರಿತ್ತು. ಆದರೆ, ಭಾರತ ಮಾತ್ರ ಅಮೆರಿಕಾಗಿ ಈ ಮೂಲ ಸೆಡ್ಡು ಹೊಡೆದಿದೆ. ಈಗ ಭಾರತಕ್ಕೆ ಬಂದಿರುವ ವ್ಲಾಡಿಮಿರ್ ಪುಟಿನ್ ನಾವು ನಿರಂತರವಾಗಿ ಕಚ್ಚಾ ತೈಲ ಸರಬರಾಜು ಮಾಡುವುದಕ್ಕೆ ಸಿದ್ಧವಿದ್ದೇವೆ ಎಂದು ಹೇಳಿದ್ದಾರೆ. ಚೀನಾದ ನಂತರ ಭಾರತವು ರಷ್ಯಾದ ಕಚ್ಚಾ ತೈಲದ ಎರಡನೇ ಅತಿದೊಡ್ಡ ಖರೀದಿದಾರ ರಾಷ್ಟ್ರವಾಗಿದೆ ಎಂದಿದ್ದಾರೆ.
ಅಮೇರಿಕಾದ ತೆರಿಗೆ ನೀತಿಯು ಭಾರತದ ಆರ್ಥಿಕತೆಯ ಮೇಲೆ ಪರಿಣಾಮ ಬೀರುತ್ತಿದೆ. ಹೀಗಾಗಿ ಭಾರತ ದಿಟ್ಟ ಹೆಜ್ಜೆಗಳನ್ನು ಇರಿಸುತ್ತಿದೆ. ಅಮೇರಿಕಾ ದೇಶವೇ ತನ್ನ ಸ್ವಂತ ಪರಮಾಣು ವಿದ್ಯುತ್ ಸ್ಥಾವರಗಳಿಗೆ ರಷ್ಯಾದಿಂದ ಪರಮಾಣು ಇಂಧನವನ್ನು ಖರೀದಿಸುತ್ತಿದೆ. ಹೀಗಾಗಿ ಹಲವು ರಾಷ್ಟ್ರಗಳು ಅಮೆರಿಕಾದ ನೀತಿಯನ್ನು ಪ್ರಶ್ನಿಸುತ್ತಿವೆ. ಇದರ ಮಧ್ಯೆ ಭಾರತ ಕೂಡ ದಿಟ್ಟ ಹೆಜ್ಜೆಯನ್ನಿಟ್ಟಿದ್ದು, ವ್ಯಾಪಾರ ವಹಿವಾಟು ಸೇರಿದಂತೆ ಶತ್ರು ರಾಷ್ಟ್ರಗಳಿಗೆ ಇದೊಂದು ಸರಿಯಾದ ಉತ್ತರ ಎನ್ನಲಾಗುತ್ತಿದೆ.
