ರಾಜ್ಯ ಕಾಂಗ್ರೆಸ್‌ನಲ್ಲಿ ಆತಂರಿಕ ಬಿಕ್ಕಟ್ಟು ಭುಗಿಲೆದ್ದಿದೆ. ಕೈ ಪಾಳಯದಲ್ಲಿರುವ ಅಸಮಾಧಾನವನ್ನ ಶಮನ ಮಾಡೋದಕ್ಕೆ ಕಾಂಗ್ರೆಸ್ ಪಕ್ಷದ ರಾಜ್ಯ ಉಸ್ತುವಾರಿ ರಣದೀಪ್ ಸುರ್ಜೆವಾಲಾ ರಾಜ್ಯಕ್ಕೆ ಭೇಟಿ ನೀಡಿದ್ದಾರೆ. ಕಾಂಗ್ರೆಸ್ ಆಂತರಿಕ ಗೊಂದಲಗಳಿಗೆ ತೆರೆ ಎಳೆಯಲು ರಣದೀಪ್ ಸಿಂಗ್ ಸುರ್ಜೇವಾಲಾ ಕಾಂಗ್ರೆಸ್ ಶಾಸಕರೊಂದಿಗೆ ಮುಖಾಮುಖಿ ಚರ್ಚೆ ನಡೆಸಲಿದ್ದಾರೆ. ರಾಜ್ಯ ರಾಜಧಾನಿಯಲ್ಲಿ ಮೂರು ದಿನಗಳ ಕಾಲ ವಾಸ್ತವ್ಯ ಹೂಡಲಿದ್ದಾರೆ.
ಶಾಸಕರಾದ ಬಿ.ಆರ್. ಪಾಟೀಲ್ ಹಾಗೂ ರಾಜು ಕಾಗೆ ಅವರು ಆಡಳಿತ ವೈಫಲ್ಯದ ಬಗ್ಗೆ ಮಾಡಿರುವ ಬಹಿರಂಗ ಆರೋಪದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಸರ್ಕಾರಕ್ಕೆ ಮುಜುಗರ ಉಂಟಾಗಿದೆ. ಜೊತೆಗೆ ಹಲವು ಶಾಸಕರು ಅನುದಾನ ಕೊರತೆ, ಸಚಿವರ ಅಸಹಕಾರ, ಅಧಿಕಾರಿಗಳ ನಿರ್ಲಕ್ಷ್ಯದ ಬಗ್ಗೆ ಅಸಮಾಧಾನಗೊಂಡಿದ್ದಾರೆ.
ಈ ಹಿನ್ನೆಲೆಯಲ್ಲಿ ಸುರ್ಜೇವಾಲಾ ಅವರು ಬೆಂಗಳೂರಿಗೆ ಆಗಮಿಸಿ ಜೂ.30ರಿಂದ ಜು.2ರವರೆಗೆ 3 ದಿನಗಳ ಕಾಲ ಬೆಂಗಳೂರು ವಿಭಾಗದ 27 ಮಂದಿ, ಮೈಸೂರು ವಿಭಾಗದ 13 ಶಾಸಕರೊಂದಿಗೆ ಮೊದಲ ಹಂತದಲ್ಲಿ ‘ಒನ್ ಟು ಒನ್’ ಸಭೆ ನಡೆಸಲಿದ್ದಾರೆ.
ಇದಕ್ಕೂ ಮೊದಲು ಆಡಳಿತ ವೈಫಲ್ಯದ ಬಗ್ಗೆ ಬಹಿರಂಗವಾಗಿ ಅಸಮಾಧಾನ ಹೊರ ಹಾಕಿರುವ ಶಾಸಕ ರಾಜು ಕಾಗೆ ಹಾಗೂ ಬಿ.ಆರ್. ಪಾಟೀಲ್ ಜತೆ ಪ್ರತ್ಯೇಕವಾಗಿ ತಲಾ ಅರ್ಧಗಂಟೆ ಚರ್ಚೆ ನಡೆಸಿ ಮನವೊಲಿಕೆ ಯತ್ನ ಮಾಡಲಿದ್ದಾರೆ ಎನ್ನಲಾಗಿದೆ.
