ಐಸಿಸಿ ಏಕದಿನ ವಿಶ್ವಕಪ್ ಗೆದ್ದ ನಂತರ ಭಾರತೀಯ ಮಹಿಳಾ ತಂಡ ಉತ್ತಮ ಪ್ರದರ್ಶನ ಮುಂದುವರೆಸಿದೆ. 2025 ರ ಕೊನೆಯ ಟಿ20 ಸರಣಿಯಲ್ಲಿ ಶ್ರೀಲಾಂಕ ವಿರುದ್ಧ ಭಾರೀ ಪ್ರದರ್ಶನ ತೋರುತ್ತಿದೆ. ಶ್ರೀಲಂಕಾ ವಿರುದ್ಧದ 5 ಪಂದ್ಯಗಳ ಟಿ20 ಸರಣಿಯಲ್ಲಿ ಭಾರತ ತಂಡ 4-0 ಮುನ್ನಡೆಯಲ್ಲಿದೆ. ಅಂತಿಮ ಪಂದ್ಯವನ್ನೂ ಗೆಲ್ಲುವ ಮೂಲಕ ಕ್ಲೀನ್ ಸ್ವೀಪ್ ಮಾಡುವ ತವಕದಲ್ಲಿ ಈಗ ತಂಡ ಇದೆ.

4ನೇ ಟಿ20 ಪಂದ್ಯದಲ್ಲೂ ಹರ್ಮನ್ ಪಡೆ, ಶ್ರೀಲಂಕಾವನ್ನು 30 ರನ್‌ಗಳಿಂದ ಸೋಲಿಸಿದೆ. ಈ ಪಂದ್ಯದಲ್ಲಿ ಶಫಾಲಿ ವರ್ಮಾ ದೊಡ್ಡ ದಾಖಲೆ ನಿರ್ಮಿಸುವ ಅವಕಾಶ ಹೊಂದಿದ್ದಾರೆ. ಮೊದಲ ಪಂದ್ಯವನ್ನು ಹೊರತುಪಡಿಸಿ, ನಂತರದ ಎಲ್ಲಾ ಮೂರು ಪಂದ್ಯಗಳಲ್ಲಿ ಶಫಾಲಿ ವರ್ಮಾ ಅಬ್ಬರಿಸಿದ್ದಾರೆ. ಮೊದಲ ಪಂದ್ಯದಲ್ಲಿ ಶಫಾಲಿ 9 ರನ್‌ಗಳಿಗೆ ಔಟಾಗಿದ್ದರು. ಆದರ ಎರಡನೇ, ಮೂರನೇ ಮತ್ತು ನಾಲ್ಕನೇ ಪಂದ್ಯಗಳಲ್ಲಿ ಸತತ ಅರ್ಧಶತಕಗಳನ್ನು ಬಾರಿಸುವುದರ ಮೂಲಕ ಉತ್ತಮ ಪ್ರದರ್ಶನ ತೋರುತ್ತಿದ್ದಾರೆ. ಈಗ ಶಫಾಲಿ ಅಂತಿಮ ಪಂದ್ಯದಲ್ಲಿಯೂ ಇದೇ ರೀತಿ ಅಬ್ಬರಿಸಿದರೆ, 2025 ರಲ್ಲಿ ಅಂತರರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್‌ಗಳನ್ನು (ಪೂರ್ಣ ಸದಸ್ಯರ ತಂಡ) ಗಳಿಸಿದ ಮಹಿಳಾ ಬ್ಯಾಟರ್ ಎಂಬ ದಾಖಲೆ ನಿರ್ಮಿಸಲಿದ್ದಾರೆ.

ಶಫಾಲಿ ಇದುವರೆಗೆ 4 ಟಿ20 ಪಂದ್ಯಗಳಲ್ಲಿ 118 ಸರಾಸರಿ ಮತ್ತು 185.83 ಸ್ಟ್ರೈಕ್ ರೇಟ್‌ನಲ್ಲಿ 236 ರನ್ ಗಳಿಸಿದ್ದಾರೆ. ಈ ಸರಣಿಯಲ್ಲಿ 200ಕ್ಕೂ ಅಧಿಕ ರನ್ ಗಳಿಸಿದ ಏಕೈಕ ಬ್ಯಾಟರ್ ಶಫಾಲಿ ಆಗಿದ್ದಾರೆ. ಸ್ಮೃತಿ ಮಂಧಾನ ಎರಡನೇ ಸ್ಥಾನದಲ್ಲಿದ್ದು, 120 ರನ್ ಗಳಿಸಿದ್ದಾರೆ. ಶಫಾಲಿ 9 ಪಂದ್ಯಗಳಲ್ಲಿ 58.85 ಸ್ಟ್ರೈಕ್ ರೇಟ್‌ನಲ್ಲಿ ಒಟ್ಟು 412 ರನ್ ಗಳಿಸಿದ್ದಾರೆ. 2025 ರಲ್ಲಿ ಇಲ್ಲಿಯವರೆಗೆ, ಮಹಿಳಾ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಟಿ20 ರನ್ ಗಳಿಸಿದ ದಾಖಲೆ ಐರ್ಲೆಂಡ್‌ನ ಗ್ಯಾಬಿ ಲೂಯಿಸ್ ಹೆಸರಿನಲ್ಲಿದೆ. ಗ್ಯಾಬಿ 454 ರನ್ ಗಳಿಸಿದ್ದಾರೆ. ಗ್ಯಾಬಿ 13 ಟಿ20 ಪಂದ್ಯಗಳ 11 ಇನ್ನಿಂಗ್ಸ್‌ಗಳಲ್ಲಿ 50.44 ಸರಾಸರಿಯಲ್ಲಿ ಈ ರನ್ ಗಳಿಸಿದ್ದಾರೆ. ಈ ದಾಖಲೆ ಮುರಿಯಲು ಶಫಾಲಿಗೆ ಈಗ 43 ರನ್‌ಗಳ ಅವಶ್ಯಕತೆಯಿದೆ. ಹೀಗಾಗಿ 5ನೇ ಪಂದ್ಯದಲ್ಲೂ ಶಫಾಲಿ ಅರ್ಧ ಶತಕ ಬಾರಿಸುವ ಮೂಲಕ ದಾಖಲೆ ಬರೆಯಬೇಕು ಎಂದು ಅಭಿಮಾನಿಗಳು ಹಾರೈಸುತ್ತಿದ್ದಾರೆ.

Share.
Leave A Reply