ಇಂಗ್ಲೆಂಡ್ (england test) ವಿರುದ್ಧದ ಟೆಸ್ಟ್ ಸರಣಿ ಆರಂಭಕ್ಕೆ ಇನ್ನು ಕ್ಷಣಗಣನೆ ಶುರುವಾಗಿದೆ. ಶುಕ್ರವಾರದಿಂದ ಶುರುವಾಗಲಿರುವ ಈ ಸರಣಿಗೂ ಮುನ್ನ ಭಾರತ ಎ ತಂಡದ ಆಟಗಾರರು ತವರಿಗೆ ಹಿಂತಿರುಗಿದ್ದಾರೆ. ಅದರಲ್ಲೂ ಅಭ್ಯಾಸ ಪಂದ್ಯದಲ್ಲಿ ಭರ್ಜರಿ ಸೆಂಚುರಿ ಸಿಡಿಸಿ ಮಿಂಚಿದ್ದ ಓರ್ವ ಭಾರತೀಯ ಆಟಗಾರ ಸಧ್ಯ ತವರಿಗೆ ಮರಳಿದ್ದಾರೆ.

ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್-ಗವಾಸ್ಕರ್ (Border–Gavaskar Trophy) ಟೆಸ್ಟ್ ಸರಣಿಯಲ್ಲಿ ಕಾಣಿಸಿಕೊಂಡಿದ್ದ ಸರ್ಫರಾಜ್ ಖಾನ್ (sarfaraz khan) ಅವರನ್ನು ಇಂಗ್ಲೆಂಡ್ ಸರಣಿಗೆ ಆಯ್ಕೆ ಮಾಡಲಾಗಿಲ್ಲ. ಇದಾಗ್ಯೂ ಯುವ ದಾಂಡಿಗನಿಗೆ ಭಾರತ ಎ ತಂಡದ ಪರ ಕಣಕ್ಕಿಳಿಯಲು ಅವಕಾಶ ನೀಡಲಾಗಿತ್ತು. ಅದರಂತೆ ಇಂಗ್ಲೆಂಡ್ ಲಯನ್ಸ್ ವಿರುದ್ಧದ ಪಂದ್ಯದಲ್ಲಿ ಭಾರತ ಎ ಪರ ಬ್ಯಾಟ್ ಬೀಸಿದ್ದ ಸರ್ಫರಾಝ್ ಖಾನ್ 92 ರನ್ ಬಾರಿಸಿ ಮಿಂಚಿದ್ದರು. ಆ ಬಳಿಕ ನಡೆದ ಟೀಮ್ ಇಂಡಿಯಾ (indian cricket team ) ವಿರುದ್ಧದ ಅಭ್ಯಾಸ ಪಂದ್ಯದಲ್ಲಿ ಭಾರತ ಎ ಪರ ಬ್ಯಾಟ್ ಬೀಸಿದ್ದರು.

ಈ ಅಭ್ಯಾಸ ಪಂದ್ಯದಲ್ಲಿ ಟೀಮ್ ಇಂಡಿಯಾದ ಪ್ರಮುಖ ಬೌಲರ್ಗಳ ಬೆಂಡೆತ್ತಿದ ಸರ್ಫರಾಝ್ ಖಾನ್ ಕೇವಲ 76 ಎಸೆತಗಳಲ್ಲಿ 15 ಫೋರ್ ಹಾಗೂ 2 ಸಿಕ್ಸರ್ಗಳೊಂದಿಗೆ ಸ್ಫೋಟಕ ಶತಕ ಸಿಡಿಸಿದ್ದರು. ಈ ಶತಕದ ಹೊರತಾಗಿಯೂ ಬಲಗೈ ದಾಂಡಿಗನನ್ನು ಹೆಚ್ಚುವರಿ ಬ್ಯಾಟರ್ ಆಗಿ ಇಂಗ್ಲೆಂಡ್ನಲ್ಲಿ ಉಳಿಸಿಕೊಂಡಿಲ್ಲ. ಹೀಗಾಗಿ ಇದೀಗ ಸರ್ಫರಾಝ್ ಖಾನ್ ಸೇರಿದಂತೆ ಭಾರತ ಎ ತಂಡದ ಒಂದಷ್ಟು ಆಟಗಾರರು ಭಾರತಕ್ಕೆ ಮರಳಿದ್ದಾರೆ.

ಇಂಗ್ಲೆಂಡ್ ಲಯನ್ಸ್ ವಿರುದ್ಧದ ಪಂದ್ಯದಲ್ಲಿ ಭಾರತ ಎ ತಂಡದಲ್ಲಿ ಕಾಣಿಸಿಕೊಂಡಿದ್ದ ಹರ್ಷಿತ್ ರಾಣಾ (Harshit Rana) ಅವರನ್ನು ಇಂಗ್ಲೆಂಡ್ ಸರಣಿಗೆ ಆಯ್ಕೆ ಮಾಡಲಾಗಿದೆ. ಟೀಮ್ ಇಂಡಿಯಾದಲ್ಲಿರುವ ಕೆಲ ಬೌಲರ್ಗಳಿಗೆ ಫಿಟ್ನೆಸ್ ಸಮಸ್ಯೆ ಎದುರಾಗಿದ್ದು, ಹೀಗಾಗಿ ಹರ್ಷಿತ್ ರಾಣಾ ಅವರನ್ನು ಹೆಚ್ಚುವರಿ ಬೌಲರ್ ಆಗಿ ಭಾರತ ಟೆಸ್ಟ್ ತಂಡಕ್ಕೆ ಸೇರ್ಪಡೆಗೊಳಿಸಲಾಗಿದೆ.
