ವಿಧಾನಸಭೆಯಲ್ಲಿ ಆರ್ಎಸ್ಎಸ್ ಗೀತೆ ಹಾಡಿ ಸದ್ದು ಮಾಡಿರುವ ಡಿಸಿಎಂ ಡಿ.ಕೆ.ಶಿವಕುಮಾರ್ ವಿರುದ್ಧ ಈಗ ಕಾಂಗ್ರೆಸ್ನಲ್ಲೇ ಆಕ್ರೋಶ ವ್ಯಕ್ತವಾಗುತ್ತಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್ ಹಿರಿಯ ನಾಯಕ ಹಾಗೂ ವಿಧಾನಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ತೀವ್ರ ಕಿಡಿಕಾರಿದ್ದಾರೆ. ಅವರು ಉಪ ಮುಖ್ಯಮಂತ್ರಿಗಳಾಗಿ ಆರ್ಎಸ್ಎಸ್ ಗೀತೆಯನ್ನು ಹಾಡಿದ್ದರೆ ಸಮಸ್ಯೆ ಇಲ್ಲ. ಆದರೆ ಕೆಪಿಸಿಸಿ ಅಧ್ಯಕ್ಷರಾಗಿ ಆರ್ಎಸ್ಎಸ್ ಗೀತೆ ಹಾಡಿದ್ದರೆ ಕ್ಷಮೆಯಾಚಿಸುವಂತೆ ಅಂತಾ ಬಿ.ಕೆ.ಹರಿಪ್ರಸಾದ್ ಪಟ್ಟು ಹಿಡಿದಿದ್ದಾರೆ.
ಅಷ್ಟೇ ಅಲ್ಲ, ಆರ್ಎಸ್ಎಸ್ ಅನ್ನು ಈ ದೇಶದಲ್ಲಿ 3 ಬಾರಿ ಈಗಾಗಲೇ ನಿಷೇಧ ಮಾಡಿದ್ದಾರೆ. ಡಿ.ಕೆ.ಶಿವಕುಮಾರ್ ಅವರು ಉಪ ಮುಖ್ಯಮಂತ್ರಿಗಳಾಗಿ ಸಂಘದ ಪ್ರಾರ್ಥನೆ ಮಾಡಿದರೆ ನಮ್ಮದೇನು ಅಭ್ಯಂತರವಿಲ್ಲ. ಯಾಕೆಂದರೆ ಸರ್ಕಾರ ಎಂಬುದು ಒಂದು ಪಕ್ಷದ್ದಲ್ಲ. ಇಡೀ 7 ಕೋಟಿ ಕರ್ನಾಟಕ ಜನತೆಯ ಸರ್ಕಾರ. ಅದರಲ್ಲಿ ಆರ್ಎಸ್ಎಸ್ನವರೂ ಇದ್ದಾರೆ. ಜಮಾತ್ ಇಸ್ಲಾಮಿ, ತಾಲಿಬಾನಿಗಳೂ ಇದ್ದಾರೆ ಅಂತಾ ಹೇಳುವ ಮೂಲಕ ಡಿಸಿಎಂ ಡಿಕೆಶಿಗೆ ತೀಕ್ಷ್ಣವಾಗಿಯೇ ತಿವಿದಿದ್ದಾರೆ.
ಮತ್ತೊಂದ್ಕಡೆ, ಡಿಕೆಶಿಯವರ ಹೇಳಿಕೆ ಈಗ ವಿರೋಧ ಪಕ್ಷದ ನಾಯಕರಿಗೂ ಅಸ್ತ್ರ ಸಿಕ್ಕಂತಾಗಿದೆ. ಇದೇ ವಿಚಾರವಾಗಿ ಪ್ರತಿಕ್ರಿಯೆ ನೀಡಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ನಮಸ್ತೆ ಸದಾ ವತ್ಸಲೆ ಹಾಡು ಹಾಡಿರುವ ಡಿಕೆಶಿಗೆ ಜ್ಞಾನೋದಯ ಆಗಿದೆ ಅಂತಾ ಕಾಲೆಳೆದಿದ್ದಾರೆ. ಇನ್ನು ಕೆಲವು ನಾಯಕರಿಗೆ ಆರ್ಎಸ್ಎಸ್ ಬಗ್ಗೆ ಕೆಂಡಕಾರುತ್ತಿದ್ದಾರೆ. ಅಂಥವರಿಗೂ ಜ್ಞಾನೋದಯವಾಗಬೇಕು ಅಂತಾ ಕುಟುಕಿದ್ದಾರೆ. ಆರ್ಎಸ್ಎಸ್ ಬಗ್ಗೆ ಕೆಟ್ಟದಾಗಿ ಮಾತನಾಡುವರು ಬಹಳ ಜನ ಇದ್ದಾರೆ. ಅದನ್ನೆಲ್ಲಾ ಸಹಿಸಿಕೊಂಡು, ದೇಶವನ್ನ ಎಲ್ಲರನ್ನೂ ಒಟ್ಟಾಗಿ ತೆಗೆದುಕೊಂಡು ಹೋಗುವ ಶಕ್ತಿ ಇದೆ ಸಂಘ ಪರಿವಾರಕ್ಕೆ ಇದೆ ಅಂತಾ ಹೇಳಿದ್ದಾರೆ. ಅಲ್ಲದೇ, RSS ಬಗ್ಗೆ ಸಚಿವ ಪ್ರಿಯಾಂಕ್ ಖರ್ಗೆಯವರ ಹೇಳಿಕೆಯನ್ನೂ ಗಮನಿಸಿದ್ದೇನೆ ಅಂತಾ ತಿರುಗೇಟು ಕೊಟ್ಟಿದ್ದಾರೆ.
