CM ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆಶಿ ಪ್ರವಾಹ ಪೀಡಿತ ಸ್ಥಳ ವೀಕ್ಷಣೆಗೆ ತೆರಳಿದ್ದಾರೆ. ಬೆಂಗಳೂರಲ್ಲಿ ಸುರಿದ ಭಾರೀ ಮಳೆಗೆ ಸಾಯಿ ಲೇಔಟ್ ಸೇರಿದಂತೆ ಹಲವು ಪ್ರದೇಶಗಳು ಮುಳುಗಡೆ ಆಗಿವೆ. ಮಳೆ ನೀರಿನಿಂದ ಹಾನಿಗೊಳಗಾದ ಪ್ರದೇಶಗಳಿಗೆ ಇಂದು ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ ಶಿವಕುಮಾರ್ ಸೇರಿದಂತೆ ಸಚಿವರು, ಅಧಿಕಾರಿಗಳು ಭೇಟಿ ನೀಡಿದ್ದಾರೆ.
ಈಗಾಗಲೇ ಯಲಹಂಕದಲ್ಲಿ ರಾಜ ಕಾಲುವೆ ಒತ್ತುವರಿ ಸ್ಥಳ ಪರಿಶೀಲಿಸಿದ CM ಸಿದ್ದರಾಮಯ್ಯ ಅವರು ಮುಲಾಜಿಲ್ಲದೆ ಒತ್ತುವರಿ ತೆರವುಗೊಳಿಸುವಂತೆ ಸೂಚಿಸಿದರು. ಮಾನ್ಯತಾ ಟೆಕ್, ಇಬ್ಸು, ಮ್ಯಾನ್ ಫೋ ಹಾಗೂ ಕಾರ್ಲೆ ಖಾಸಗಿ ಬಿಲ್ಡರ್‌ಗಳು ರಾಜಕಾಲುವೆ ಒತ್ತುವರಿ ಮಾಡಿರುವುದನ್ನು ಅಧಿಕಾರಿಗಳು ವಿವರಿಸಿದರು. ಈ ವೇಳೆ ನೋಟಿಸ್ ಕೊಟ್ಟಿಲ್ಲವೇ, ಒತ್ತುವರಿ ಆಗಿರುವುದನ್ನು ನೋಡಿಕೊಂಡು ಕುಳಿತಿದ್ದೀರಾ ಎಂದು ಸಿಎಂ ಖಾರವಾಗಿ ಪ್ರಶ್ನಿಸಿದರು. ಬಳಿಕ ಎಷ್ಟೇ ದೊಡ್ಡ ಬಿಲ್ಡರ್ ಆಗಿದ್ದರೂ ಮುಲಾಜು ನೋಡಬೇಡಿ, ರಾಜಕಾಲುವೆ ಒತ್ತುವರಿ ತೆರವುಗೊಳಿಸಿ ಎಂದು ಸ್ಪಷ್ಟ ಸೂಚನೆ ನೀಡಿದರು.
ಬಳಿಕ HBR ಲೇಔಟ್, ತುಂಬಿ ಹರಿಯುತ್ತಿರುವ ರಾಜಕಾಲುವೆ ಪ್ರದೇಶ ವೀಕ್ಷಣೆ ಮಾಡಿದ್ರು. ರಾಜಕಾಲುವೆಯ ಹರಿವಿನ ಹಾದಿಯಲ್ಲಿ ರೈಲ್ವೇ ಟ್ರಾಕ್ ಇರುವ ಕಡೆ ಆಗಿರುವ ಬಾಟಲ್ ನೆಕ್ ಸರಿ ಪಡಿಸಲು ಹಾಗೂ ವಿಸ್ತರಿಸಲು ಸೂಚನೆ ನೀಡಿದರು. ಬಾದಿತ ಪ್ರದೇಶಗಳಲ್ಲಿ ಬೆಸ್‌ಮೆಂಟ್ ಪಾರ್ಕಿಂಗ್, ಕೆಳ ಹಂತದಲ್ಲಿ ಮನೆ ನಿರ್ಮಾಣಕ್ಕೆ ಅವಕಾಶ ನೀಡದಂತೆ town planning ನಲ್ಲಿ ಬದಲಾವಣೆ ತರುವ ದಿಕ್ಕಿನಲ್ಲಿ ಸೂಚನೆ ನೀಡಿದರು.
ಇನ್ನು ಗೆದ್ದಲಹಳ್ಳಿಯ ವಡ್ಡರಪಾಳ್ಯ ಲೇಔಟ್‌ಗೆ ಭೇಟಿ ನೀಡಿ ಅಲ್ಲಿನ ಸಮಸ್ಯೆ ಆಲಿಸಿದ್ರು. ಗೆದ್ದಲಹಳ್ಳಿಯ ಕಾಲುವೆ ಬಾಟಲ್ ನೆಕ್ ಇದ್ದು ಕೇವಲ 8 ಮೀಟರ್ ಇದೆ. ಆದರೆ ಮೇಲಿನಿಂದ ರಾಜಕಾಲುವೆಯಲ್ಲಿ ಹರಿದು ಬರುವ ನೀರು ಈ ಬಾಟಲ್ ನೆಕ್‌ನಲ್ಲಿ ಓವರ್ ಫ್ಲೋ ಆಗಿ ಸಾಯಿ ಲೇಔಟ್‌ಗೆ ನುಗ್ಗುತ್ತದೆ ಎನ್ನುವುದು ಸಮಸ್ಯೆಯಾಗಿತ್ತು. ಇದಕ್ಕೆ 8 ಮೀಟರ್ ಬಾಟಲ್ ನೆಕ್ ಇರುವ ರೈಲ್ವೇ ವೆಂಟ್ ಅನ್ನು ವಿಸ್ತರಿಸಲು ಸೂಚನೆ ನೀಡಲಾಯಿತು. ರೈಲ್ವೇಯವರು ಈ ವೆಂಟ್ ವಿಸ್ತರಣೆಗೆ BDAಗೆ ಅನುಮತಿ ನೀಡಿದ್ದಾರೆ. ಜೊತೆಗೆ ಕಾಲುವೆ ನಿರ್ವಹಣೆ ಮಾಡದ ಗುತ್ತಿಗೆದಾರರಿಂದ ವಿವರಣೆ ಕೇಳುವಂತೆ ಸೂಚಿಸಲಾಯಿತು.
Also Read: ಆರ್‌ಸಿಬಿ ಫ್ಯಾನ್ಸ್‌ಗೆ ಬ್ಯಾಡ್ ನ್ಯೂಸ್ : RCB ಪಂದ್ಯ ಲಖನೌಗೆ ಶಿಫ್ಟ್ ಆಗಿದ್ದು ಯಾಕೆ?
ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆಶಿ ಸಿಟಿ ರೌಂಡ್ಸ್ ಮುಂದುವರೆಸಿ ಸಾಯಿ ಲೇಔಟ್‌ಗೆ ಭೇಟಿ ನೀಡಿದ್ರು. ಇಲ್ಲಿನ ಪರಿಸ್ಥಿತಿ ತೀರಾ ಹದಗೆಟ್ಟಿರೋದ್ರಿಂದ ಸಾಯಿ ಲೇಔಟ್ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿಗಳು ಮತ್ತು ಸದಸ್ಯರಿಂದ ಸಮಸ್ಯೆ ಆಲಿಸಿ, ಮನವಿ ಸ್ವೀಕರಿಸಿದರು. ಬಳಿಕ ಮನವಿಯಲ್ಲಿರುವ ಸಮಸ್ಯೆಗಳ ಬಗ್ಗೆ ಗಂಭೀರ ಗಮನ ಹರಿಸಿ ತಕ್ಷಣಕ್ಕೆ ಸಾಧ್ಯವಿರುವ ಪರಿಹಾರ ಕಾಮಗಾರಿಗಳನ್ನು ಕೈಗೊಳ್ಳುವಂತೆ ಸೂಚನೆ ನೀಡಿದರು.
ಇನ್ನು ಸಿಟಿ ರೌಂಡ್ಸ್‌ಗೆ ಬಂದ ಸಿಎಂ ಹಾಗೂ ಸಚಿವರ ಮೇಲೆ ಸಾಯಿ ಲೇಔಟ್ ನಿವಾಸಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬನ್ನಿ ಮಳೆಯಿಂದ ತೊಂದರೆಯಾದ ಮನೆಗಳಿಗೆ ಭೇಟಿ ನೀಡಿ. ದೂರದಿಂದ ನೋಡಿದ್ರೆ ನಿಮಗೆ ಏನು ಗೊತ್ತಾಗುತ್ತೆ? ಎಂದು ಸ್ಥಳೀಯ ಮಹಿಳೆಯರು ಸಿಎಂಗೆ ಆಗ್ರಹಿಸಿದರು.
