ಕೇರಳ: ವೈವಿದ್ಯತೆ ಮಧ್ಯೆ ಎಲ್ಲರೂ ಒಗ್ಗಟ್ಟಾಗಿ ಬಾಳುವುಂತಹ ದೇಶ ನಿರ್ಮಾಣ ಮಾಡುವುದು ನಾರಾಯಣ ಗುರುಗಳ ಉದ್ಧೇಶವಾಗಿತ್ತು ಎಂದು ಸಿಎಂ ಸಿದ್ದರಾಮಯ್ಯ ಅಭಿಪ್ರಾಯ ಪಟ್ಟಿದ್ದಾರೆ.
ಕೇರಳ ತಿರುವನಂತಪುರದ 93ನೇ ಶಿವಗಿರಿ ತೀರ್ಥಯಾತ್ರಾ ಮಹೋತ್ಸವದಲ್ಲಿ ಮಾತನಾಡಿದ ಅವರು, ನಾರಾಯಣ ಗುರುಗಳು ಕೇವಲ ಒಬ್ಬ ಸಂತ ಮಾತ್ರ ಅಲ್ಲ. ಸಮಾನತೆ ಮತ್ತು ನೈತಿಕತೆಯ ಹರಿಕಾರರಾಗಿದ್ದರು. ಈ ನಿಟ್ಟಿನಲ್ಲಿ ಶಿವಗಿರಿ ತೀರ್ಥಯಾತ್ರೆ ಕೂಡ ಚಳವಳಿಯ ಸ್ವರೂಪ ಪಡೆದು ಜಾತಿ ದೌರ್ಜನ್ಯವನ್ನು ಅಳಿಸಿ ಸಮಾಜದ ಸಾಮಾಜಿಕ ನ್ಯಾಯದ ಕಡೆ ಮುನ್ನಡೆಸಿತು ಎಂದಿದ್ದಾರೆ.
ಅಂತಹ ಮಹಾನ್ ವ್ಯಕ್ತಿಯ ಭಾರತವನ್ನು ನಾವು ಗಟ್ಟಿಗೊಳಿಸಬೇಕಿದೆ. ಶಿವಗಿರಿ ಮಠವು ಕೇವಲ ಒಂದು ಯಾತ್ರಾ ಕೇಂದ್ರವಾಗಿರದೇ,ಭಾರತದ ಆತ್ಮಸಾಕ್ಷಿಯ ನೈತಿಕ ವಿಶ್ವವಿದ್ಯಾಲಯವಾಗಿದೆ. ಬೌದ್ಧಿಕ ಮತ್ತು ವಿಶ್ವದ ಮಾನವಕುಲದ ಚಳವಳಿಯಾಗಿದೆ. ಇದು ಭೌಗೋಳಿಕವಲ್ಲ, ನೈತಿಕತೆಯ ಪ್ರವಾಸ ಎಂದು ಅವರು ಕೊಂಡಾಡಿದ್ದಾರೆ.
ಆಧುನಿಕ ರಾಷ್ಟ್ರ ನಿರ್ಮಾಣದಲ್ಲಿ ಶಿವಗಿರಿ ತೀರ್ಥಯಾತ್ರೆ ಪಾತ್ರ ತುಂಬಾ ಮಹತ್ವದ್ದಾಗಿದೆ. ತುರ್ತು ಅಗತ್ಯ ಮತ್ತು ನಮ್ಮ ಕಾಲದ ಬಿಕ್ಕಟ್ಟುಗಳಿಗೆ ನೇರ ಉತ್ತರ. ಇದರ ಹಿಂದಿರುವ ಶಕ್ತಿ ಶ್ರೀ ನಾರಾಯಣ ಗುರುಗಳು ಕೇವಲ ಒಬ್ಬ ಸಂತನಲ್ಲ, ಬದಲಾಗಿ ಭಾರತದ ಶ್ರೇಷ್ಠ ಸಾಮಾಜಿಕ ದಾರ್ಶನಿಕರಲ್ಲಿ ಒಬ್ಬರು. ಅವರು ಅನ್ಯಾಯದ ಚೌಕಟ್ಟಿನೊಳಗೆ ಸುಧಾರಣೆಯನ್ನು ಬಯಸಲಿಲ್ಲ. ಅನ್ಯಾಯದ ಬೇರುಗಳನ್ನೇ ಕಿತ್ತೆಸೆದವರು ಅವರು. ಕೇರಳವು ಜಾತಿ ತಾರತಮ್ಯ, ಮೌಢ್ಯಾಚರಣೆ ಮತ್ತು ಅಸಮಾನತೆಯಿಂದ ಉಸಿರುಗಟ್ಟುತ್ತಿದ್ದಾಗ, “ಮಾನವಕುಲಕ್ಕೆ ಒಂದೇ ಜಾತಿ, ಒಂದೇ ಧರ್ಮ, ಒಬ್ಬನೇ ದೇವರು” ಎಂಬ ಸತ್ಯವನ್ನು ಘೋಷಿಸಿದರು ಎಂದಿದ್ದಾರೆ.
ನಾರಾಯಣ ಗುರುಗಳ ತತ್ವಜ್ಞಾನವು ಕನ್ನಡದ ರಾಷ್ಟ್ರಕವಿ ಕುವೆಂಪು ಅವರು ನಂತರ ಪ್ರತಿಪಾದಿಸಿದ ‘ವಿಶ್ವಮಾನವ’ ಪರಿಕಲ್ಪನೆಯನ್ನು ಒಳಗೊಂಡಿತ್ತು. ಇದು ಜಾತಿರಹಿತ, ಭಯರಹಿತ ಮತ್ತು ಮಾನವೀಯ ಸಮಾಜ ನಿರ್ಮಾಣದ ದೂರದೃಷ್ಟಿಯಾಗಿತ್ತು. ಹಿಂದುಳಿದ ಸಮುದಾಯಗಳು ತಮ್ಮದೇ ಆದ ದೇವಾಲಯಗಳನ್ನು ಸ್ಥಾಪಿಸಬೇಕೆಂದು ಕರೆ ನೀಡಿ, ದೇವಾಲಯಗಳಲ್ಲಿ ವಿಗ್ರಹದ ಬದಲು ಕನ್ನಡಿಯನ್ನು ಪ್ರತಿಷ್ಠಾಪಿಸಿದರು. ದೈವತ್ವವು ಪ್ರತಿ ಮನುಷ್ಯನೊಳಗೆ ನೆಲೆಸಿದ್ದು, ಆತ್ಮಸಾಕ್ಷಾತ್ಕಾರ, ಸಮಾನತೆ ಹಾಗೂ ಯಾರಿಗೂ ಕೇಡು ಬಯಸದಿರುವುದೇ ನಿಜವಾದ ಆರಾಧನೆ ಎಂದು ಸಾರುವುದು ಅದರ ಉದ್ಧೇಶವಾಗಿತ್ತು ಎಂದು ಸಿಎಂ ಹೇಳಿದ್ದಾರೆ.
