ಮೆಕ್ಸಿಕೋಸಿಟಿ: ಇತ್ತೀಚೆಗಷ್ಟೇ ಅಮೆರಿಕದಲ್ಲಿ ಭಾರತೀಯ ವಸ್ತುಗಳಿಗೆ ಹೆಚ್ಚಿನ ಸುಂಕ ವಿಧಿಸಲಾಗಿತ್ತು. ಇದು ಮಾಸುವ ಮುನ್ನವೇ ಅಮೆರಿಕದ ಹಾದಿಯಲ್ಲಿ ಮೆಕ್ಸಿಕೋ ನಡೆಯಲು ಆರಂಭಿಸಿದೆ.

ಸುಂಕ ಸಮರದ (Tariff War) ಬೆನ್ನಲ್ಲೇ ಈಗ ಮೆಕ್ಸಿಕೋ (Mexico) ಭಾರತದ ವಸ್ತುಗಳಿಗೆ ಶೇ. 50ರಷ್ಟು ಸುಂಕ ವಿಧಿಸಿದೆ. ಈ ನಿರ್ಧಾರ 2026ರಿಂದ ಜಾರಿಗೆ ಬರಲಿದೆ ಎನ್ನಲಾಗಿದೆ. ಭಾರತವಷ್ಟೇ ಅಲ್ಲದೇ, ಚೀನಾ (China) ಸೇರಿದಂತೆ ಏಷ್ಯ ದೇಶಗಳಿಂದ ಬರುವ ಎಲ್ಲ ಉತ್ಪನ್ನಗಳಿಗೆ ಶೇ. 50ರಷ್ಟು ಸುಂಕ ವಿಧಿಸುವ ಮಸೂದೆಗೆ ಅಲ್ಲಿನ ಮೇಲ್ಮನೆ ಒಪ್ಪಿಗೆ ನೀಡಿದೆ. ಅಲ್ಲಿನ ಬಹುತೇಕ ಸದಸ್ಯರು ಈ ಮಸೂದೆ ಒಪ್ಪಿದ್ದಾರೆ ಎನ್ನಲಾಗಿದೆ.

ಡೊನಾಲ್ಡ್ ಟ್ರಂಪ್ ಅವರ ‘ಅಮೇರಿಕಾ ಫಸ್ಟ್’ ಕಾರ್ಯಸೂಚಿಯಂತೆಯೇ ಮೆಕ್ಸಿಕನ್ ಅಧ್ಯಕ್ಷೆ ಕ್ಲೌಡಿಯಾ ಶೀನ್‌ಬಾಮ್ (Claudia Sheinbaum) ಸ್ಥಳೀಯ ಉದ್ಯಮಕ್ಕೆ ಆದ್ಯತೆ ನೀಡುವುದಕ್ಕಾಗಿ ಏಷ್ಯನ್ ಆಮದುಗಳ ಮೇಲೆ ಹೊಸ ಸುಂಕ ವಿಧಿಸಿದ್ದಾರೆ. ಮೆಕ್ಸಿಕೋಗೆ ಭಾರತದಿಂದಲೂ ಹಲವಾರು ವಸ್ತುಗಳು ರಫ್ತಾಗುತ್ತವೆ. ಕಳೆದ ವರ್ಷ ಭಾರತ ಒಟ್ಟು 1.3 ಬಿಲಿಯನ್ ಡಾಲರ್‌ ಮೌಲ್ಯದ ಆಟೋಮೊಬೈಲ್‌ಗಳು, 242 ಮಿಲಿಯನ್‌ ಡಾಲರ್‌ ಮೌಲ್ಯದ ದೂರವಾಣಿ ವಸ್ತುಗಳನ್ನು ರಫ್ತು ಮಾಡಿತ್ತು ಎನ್ನಲಾಗಿದೆ. ಈಗ ಸುಂಕ ಹೆಚ್ಚಳವಾಗುವುದರಿಂದಾಗಿ ಭಾರತದ ರಫ್ತು ವಲಯಕ್ಕೆ ಸಾಕಷ್ಟು ನಷ್ಟವಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ಮೆಕ್ಸಿಕೋದೊಂದಿಗೆ ವ್ಯಾಪಾರ ಒಪ್ಪಂದವನ್ನು ಹೊಂದಿರದ ಏಷ್ಯನ್ ದೇಶಗಳ 1,400 ಕ್ಕೂ ಹೆಚ್ಚು ಉತ್ಪನ್ನಗಳ ಮೇಲೆ ಶೇ. 5ರಿಂದ ಶೇ. 50ರಷ್ಟು ಸುಂಕ ವಿಧಿಸುವ ಮಸೂದೆಗೆ ಅಲ್ಲಿನ ಸೆನೆಟ್ ಒಪ್ಪಿಗೆ ನೀಡಿದೆ. ಚೀನಾ, ಭಾರತ, ದಕ್ಷಿಣ ಕೊರಿಯಾ, ಥೈಲ್ಯಾಂಡ್ ಮತ್ತು ಇಂಡೋನೇಷ್ಯಾದಂತಹ ದೇಶಗಳಿಂದ ಬರುವ ಆಟೋ ಭಾಗಗಳು, ಜವಳಿ, ಪ್ಲಾಸ್ಟಿಕ್‌ ವಸ್ತುಗಳು, ಬಟ್ಟೆ ಮತ್ತು ಉಕ್ಕಿನಂತಹ ಸರಕುಗಳ ಮೇಲೆ ಶೇ. 50ರ,ಟು ಸುಂಕ ಬೀಳುವ ಸಾಧ್ಯತೆ ಇದೆ.

Share.
Leave A Reply