ಮಹದಾಯಿ ಯೋಜನೆ ಜಾರಿಗೆ ಬಿಡುವುದಿಲ್ಲ ಎಂದು ಗೋವಾ ಸಿಎಂ ಪ್ರಮೋದ್‌ ಸಾವಂತ್‌ ಹೇಳಿಕೆಗೆ ರಾಜ್ಯದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗ್ತಿದೆ. ಗೋವಾ ಸಿಎಂ ಹೇಳಿಕೆಗೆ ಸಂಬಂಧಿಸಿದಂತೆ ಬಮೂಲ್‌ ಅಧ್ಯಕ್ಷ ಡಿ.ಕೆ ಸುರೇಶ್‌ ಪ್ರತಿಕ್ರಿಯಿಸಿ ಬಿಜೆಪಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸದಾಶಿವನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಹದಾಯಿ ಯೋಜನೆಗೆ ಗೋವಾ ತೆಗೆದ ಖ್ಯಾತೆಗೆ ಪ್ರತಿಕ್ರಿ ಯಿಸಿದರು. ಗೋವಾ ಹಾಗೂ ಕರ್ನಾಟಕ ಬಹಳ ಅನೋನ್ಯವಾಗಿದ್ದ ರಾಜ್ಯಗಳು. ಮಹದಾಯಿ ಕುಡಿಯುವ ನೀರಿನ ಯೋಜನೆ. ಆದರೆ ಬಹಳ ವರ್ಷಗಳಿಂದ ಇಲ್ಲಸಲ್ಲದ ಕ್ಯಾತೆ ತೆಗೆದುಕೊಂಡು ಉತ್ತರ ಕರ್ನಾಟಕ ಭಾಗದ ಕುಡಿಯುವ ನೀರಿನ ಯೋಜನೆಗೆ ತೊಂದರೆ ನೀಡಲಾಗುತ್ತಿದೆ. ಸುಪ್ರೀಂ ಕೋರ್ಟ್ ತೀರ್ಪಿನ ಹೊರತಾಗಿಯೂ ಗೋವಾ ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಸರ್ಕಾರವನ್ನು ಬಳಸಿಕೊಂಡು ಕರ್ನಾಟಕಕ್ಕೆ ಅನ್ಯಾಯ ಮಾಡುತ್ತಿರುವುದು ಎದ್ದು ಕಾಣುತ್ತಿದೆ. ಹೀಗಾಗಿ ಕೇಂದ್ರ ಸರ್ಕಾರ ಹಾಗೂ ಕೇಂದ್ರ ಜಲಶಕ್ತಿ ಸಚಿವರು ಆದಷ್ಟು ಬೇಗ ಈ ಕುಡಿಯುವ ನೀರಿನ ವಿಚಾರವಾಗಿ ರಾಜ್ಯದಲ್ಲಿ ಆಗುತ್ತಿರುವ ಅನ್ಯಾಯ ಸರಿಪಡಿಸಲು ಮಹದಾಯಿ, ಮೇಕೆದಾಟು ಹಾಗೂ ಕೃಷ್ಣಾ ಮೇಲ್ದಂಡೆ ಯೋಜನೆಗಳಿಗೆ ಅನುಮೋದನೆ ನೀಡಬೇಕು ಎಂದು ತಿಳಿಸಿದರು.

ಸುಪ್ರೀಂ ಕೋರ್ಟ್ ತೀರ್ಪು ಬಳಿಕ ಯೋಜನೆ ಆಗುತ್ತಿಲ್ಲ. ಕೇಂದ್ರ ಆದಷ್ಟು ಬೇಗ ಅನ್ಯಾಯ ಸರಿಪಡಿಸಲಿ. ಗೋವಾ ಕರ್ನಾಟಕದವರನ್ನ ಕರೆಸಿ ಮಾತನಾಡಲಿ. ರಾಜ್ಯದ ಜನ ಬಿಜೆಪಿಗೆ ಸುಮಾರು 20ಕ್ಕೂ ಹೆಚ್ಚು ಸ್ಥಾನಗಳನ್ನ ನೀಡಿದ್ದಾರೆ. ಕೇಂದ್ರದಲ್ಲಿ ಬಿಜೆಪಿ ಮೂರು ಬಾರಿ ಅಧಿಕಾರಕ್ಕೆ ಬರುವಲ್ಲಿ ಕರ್ನಾಟಕದ ಪಾತ್ರ ಮಹತ್ತರವಾಗಿದೆ. ಆದರೆ ರಾಜ್ಯ ಬಿಜೆಪಿ ಸಂಸದರು ರಾಜ್ಯಕ್ಕೆ ನ್ಯಾಯ ಒದಗಿಸುವ ಕೆಲಸ ಮಾಡುತ್ತಿಲ್ಲ. ಪ್ರಹ್ಲಾದ್ ಜೋಶಿ 10 ವರ್ಷಗಳಿಂದ ಮಂತ್ರಿ ಆಗಿದ್ದಾರೆ. ಆದರೆ ಜೋಶಿಯವರಿಗೆ ಯೋಜನೆ ಬೇಕಾಗಿಲ್ಲ ಎಂದು ಕಿಡಿಕಾರಿದರು. ಕರ್ನಾಟಕಕ್ಕೆ ಆಗುತ್ತಿರುವ ಅನ್ಯಾಯದ ವಿರುದ್ಧ ಸಂಸದರು ಹಾಗೂ ಕೇಂದ್ರ ಸಚಿವರು ಹೋರಾಟ ಮಾಡಬೇಕು ಎಂದು ಡಿ.ಕೆ.ಸುರೇಶ್ ಆಗ್ರಹಿಸಿದರು.

ಚುನಾವಣೆ ವೇಳೆ ಮತಗಳ್ಳತನ ಆರೋಪ ಕುರಿತು ಪ್ರತಿಕ್ರಿಯಿಸಿದ ಡಿ.ಕೆ ಸುರೇಶ್, ವೋಟರ್ ಲೀಸ್ಟ್ ನಲ್ಲಿ ಗೊಂದಲ ಉಂಟಾಗಿತ್ತು. ಮತಪಟ್ಟಿ ಸಂಖ್ಯೆ ಏರಿಸಿ ಡಿಲಿಟ್ ಮಾಡಿದರು. ರಾಹುಲ್ ಗಾಂಧಿ ಅವರು ಸಿಎಂ, ಡಿಸಿಎಂ ಹೇಳಿದ್ದನ್ನ ಹೇಳಿದ್ದಾರೆ. ರಾಹುಲ್ ಗಾಂಧಿ ಅಭಿಪ್ರಾಯಕ್ಕೆ ನನ್ನ ಸಹಮತವಿದೆ ಎಂದು ಡಿಕೆ ಸುರೇಶ್ ತಿಳಿಸಿದರು.

Share.
Leave A Reply