ಕಾಂಗ್ರೆಸ್ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಎಲ್ಲಾ ಹುದ್ದೆಗಳಿಗೂ ಸಮರ್ಥರು. ಅವರು ರಾಜ್ಯ ರಾಜಕಾರಣಕ್ಕೆ ಬರುತ್ತೇನೆ ಅಂದರೆ ತಪ್ಪೇನಿಲ್ಲ ಎಂದು ಗೃಹ ಸಚಿವ ಪರಮೇಶ್ವರ್ ಅಚ್ಚರಿಯ ಹೇಳಿಕೆ ನೀಡಿದ್ದಾರೆ.
ಸಿಎಂ ಸ್ಥಾನ ಕೈತಪ್ಪಿದ ಬಗ್ಗೆ ಮಲ್ಲಿಕಾರ್ಜುನ ಖರ್ಗೆ ಅಸಮಾಧಾನ ವ್ಯಕ್ತಪಡಿಸಿದ ವಿಚಾರಕ್ಕೆ ಸಂಬಂಧಿಸಿದಂತೆ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಕ್ಷದಲ್ಲಿ ಖರ್ಗೆಯವರು ನಿರ್ಣಾಯಕ ಸ್ಥಾನದಲ್ಲಿದ್ದಾರೆ. ಯಾರು ಸಿಎಂ ಆಗಬೇಕೆಂದು ನಿರ್ಧಾರ ಮಾಡುವುದೇ ಖರ್ಗೆ. ರಾಜ್ಯ ರಾಜಕಾರಣಕ್ಕೆ ಬರ್ತಿನಿ ಅಂದರೆ ತಪ್ಪು ಭಾವಿಸುವ ಅವಶ್ಯಕತೆ ಇಲ್ಲ. ಖರ್ಗೆ ಅವರು ಎಲ್ಲಾ ಹುದ್ದೆಗಳಿಗೂ ಸಮರ್ಥರು ಎಂದರು.
ಇಂದು ಶಾಸಕರ ಜೊತೆ ಸಿಎಂ ಸಿದ್ದರಾಮಯ್ಯ ಸಭೆ ಕುರಿತು ಪ್ರತಿಕ್ರಿಯಿಸಿದ ಪರಮೇಶ್ವರ್, ಸಭೆಯಲ್ಲಿ ಅನುದಾನ, ಕ್ಷೇತ್ರದ ಸಮಸ್ಯೆ ಬಗ್ಗೆ ಚರ್ಚೆ ಮಾಡುತ್ತಾರೆ. 2017-18ರಲ್ಲೂ ಇದೇ ರೀತಿ ಸಭೆಗಳು ಆಗಿದ್ದವು ಸಿಎಂ ಸಭೆಯಲ್ಲಿ ಡಿಸಿಎಂ ಸಹ ಇರುತ್ತಾರೆ ಅಂದುಕೊಂಡಿದ್ದೇವೆ. ಡಿಕೆ ಶಿವಕುಮಾರ್ ಗೆ ಸ್ವಲ್ಪ ಹುಷಾರಿಲ್ಲ ಹಾಗಾಗಿ ಬರಲ್ಲ ಅನ್ನಿಸುತ್ತೆ ಎಂದರು.
