ಮತ್ತೊಂದು ಜಿಲ್ಲೆಯ ಹೆಸರು ಬದಲಾವಣೆಗೆ ಸಿದ್ದರಾಮಯ್ಯ ಸರ್ಕಾರ ಮುಂದಾಗಿದೆ. ವ್ಯಾಪಕ ವಿರೋಧದ ನಡುವೆಯೂ ರಾಮನಗರ ಜಿಲ್ಲೆಯ ಹೆಸರನ್ನು ಬೆಂಗಳೂರು ದಕ್ಷಿಣ ಎಂದು ಬದಲಾವಣೆ ಮಾಡಲಾಗಿತ್ತು. ಬೆಂಗಳೂರಿನ ಬ್ರ್ಯಾಂಡ್ ಹೆಚ್ಚಿಸಲು ಈ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿದ್ದರು.
ಈ ಬೆನ್ನಲ್ಲೇ ಈಗ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೆಸರು ಬದಲಾವಣೆಗೆ ಮುಂದಾಗಿದ್ದು, ಬೆಂಗಳೂರು ಗ್ರಾಮಾಂತರ ಜಿಲ್ಲೆ ಇದಕ್ಕೆ ಸಚಿವ ಸಂಪುಟದಿಂದ ಗ್ರೀನ್ ಸಿಗ್ನಲ್ ಸಿಕ್ಕಿದೆ. ಹೀಗಾಗಿ ಬೆಂಗಳೂರು ಗ್ರಾಮಾಂತರ ಜಿಲ್ಲೆ ಇನ್ಮೇಲೆ ಬೆಂಗಳೂರು ಉತ್ತರ ಜಿಲ್ಲೆಯಾಗಲಿದೆ. ಅಷ್ಟೇ ಅಲ್ಲಾ ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ಹೆಸರು ಬದಲಾವಣೆಗೂ ಸಂಪುಟ ಅನುಮೋದನೆ ನೀಡಿದೆ. ಬಾಗೇಪಲ್ಲಿ ಇನ್ಮುಂದೆ ಭಾಗ್ಯನಗರ ಎಂದು ಮರುನಾಮಕರಣಕ್ಕೆ ಸಚಿವ ಸಂಪುಟ ಒಪ್ಪಿಗೆ ಸೂಚಿಸಿದೆ.
ಚಿಕ್ಕಬಳ್ಳಾಪುರ ಜಿಲ್ಲಾ ವ್ಯಾಪ್ತಿಯ ಬಾಗೇಪಲ್ಲಿಯ ಹೆಸರನ್ನೂ ಬದಲಾಯಿಸಲು ಸ್ಥಳೀಯ ಶಾಸಕ ಎಸ್.ಎನ್. ಸುಬ್ಬಾರೆಡ್ಡಿ ಸರ್ಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಿದ್ದರು. ಅದ್ರಂತೆ ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಬಾಗೇಪಲ್ಲಿಯ ಹೆಸರು ’ಭಾಗ್ಯನಗರ’ ಎಂದು ಮರುನಾಮಕರಣ ಮಾಡಲು ಸಿದ್ದರಾಮಯ್ಯ ಸಂಪುಟದಿಂದ ಅನುಮೋದನೆ ನೀಡಲಾಗಿದ್ದು, ಇನ್ನು ಮುಂದೆ ಬಾಗೇಪಲ್ಲಿ ಭಾಗ್ಯನಗರವಾಗಲಿದೆ.
