ಬೆಂಗಳೂರು: ಐಪಿಎಲ್ ಟೂರ್ನಿ ಆರಂಭವಾದರೆ ಸಾಕು ಭಾರತೀಯರ ಸಂತಸಕ್ಕೆ ಪಾರವೇ ಇಲ್ಲ. ಭಾರತೀಯ ಕ್ರೀಡಾಭಿಮಾನಿಗಳ ಪಾಲಿಗೆ ಐಪಿಎಲ್, ವಿಶ್ವಕಪ್ ಗಿಂತಲೂ ದೊಡ್ಡದು. ಈಗ 2026 ರ ಐಪಿಎಲ್ ಆರಂಭಕ್ಕೆ ದಿನಗಣನೆ ಆರಂಭವಾಗಿದ್ದು, ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.

ಐಪಿಎಲ್ ಗಾಗಿ ಸದ್ಯದಲ್ಲೇ ಮಿನಿ ಹರಾಜು ಕೂಡ ನಡೆಯಲಿದೆ. ಐಪಿಎಲ್, ಬಿಸಿಸಿಐಗೆ ಸಾಕಷ್ಟು ಲಾಭ ತಂದು ಕೊಟ್ಟಿದೆ. ಆದರೆ, ಈಗ ಅದರ ಕ್ರೇಜ್ ಕಡಿಮೆಯಾಗುತ್ತಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ವರ್ಷದಿಂದ ವರ್ಷಕ್ಕೆ ಐಪಿಎಲ್ ಕ್ರೇಜ್ ಕಡಿಮೆಯಾಗುತ್ತಿದೆ. ಏಕೆಂದರೆ ಐಪಿಎಲ್ ತಂಡಗಳ ಬ್ರಾಂಡ್ ಮೌಲ್ಯ ಭಾರೀ ಪ್ರಮಾಣದಲ್ಲಿ ಕುಸಿತವಾಗುತ್ತಿದೆ ಎಂದು ವರದಿಗಳು ಹೇಳುತ್ತಿವೆ. ಸದ್ಯದ ಮಾಹಿತಿಯಂತೆ ಗುಜರಾತ್ ಟೈಟಾನ್ಸ್ ಹೊರತುಪಡಿಸಿ ಪ್ರತಿಯೊಂದು ತಂಡದ ಬ್ರಾಂಡ್ ಮೌಲ್ಯವು ಕುಸಿದಿದೆ. ರಾಜಸ್ಥಾನ ರಾಯಲ್ಸ್ ತಂಡದ ಬ್ರಾಂಡ್ ಮೌಲ್ಯ ಶೇ. 35ರಷ್ಟು ಕುಸಿತ ಕಂಡಿದೆ ಎನ್ನಲಾಗುತ್ತಿದೆ.

ಇನ್ನುಳಿದಂತೆ ಸನ್‌ ರೈಸರ್ಸ್ ಹೈದ್ರಾಬಾದ್ ತಂಡದ ಬ್ರಾಂಡ್ ಮೌಲ್ಯ ಶೇ. 34, ಕೋಲ್ಕತ್ತಾ ನೈಟ್ ರೈಡರ್ಸ್‌ ಮೌಲ್ಯ ಶೇ. 33, ಡೆಲ್ಲಿ ಕ್ಯಾಪಿಟಲ್ಸ್‌ ಮೌಲ್ಯ ಶೇ. 26ರಷ್ಟು ಕುಸಿತ ಕಂಡಿದೆ ಎನ್ನಲಾಗಿದೆ. ಅಲ್ಲದೇ, ಇದೇ ಮೊದಲ ಬಾರಿಗೆ ರಾಯಲ್ ಚಾಲೆಂಜರ್ಸ್ ಬ್ರಾಂಡ್ ಮೌಲ್ಯ ಕೂಡ ಶೇ. 10ರಷ್ಟು ಕುಸಿತ ಕಂಡಿದೆ. ಐದು ಬಾರಿಯ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಬ್ರಾಂಡ್ ಮೌಲ್ಯ ಶೇ. 24ರಷ್ಟು ಕುಸಿತವಾಗಿದೆ.

ಮುಂಬೈ ಇಂಡಿಯನ್ಸ್ ಬ್ರಾಂಡ್ ಮೌಲ್ಯ ಶೇ. 9, ಪಂಜಾಬ್‌ ತಂಡದ ಮೌಲ್ಯ ಶೇ. 3, ಲಕ್ನೋ ತಂಡದ ಮೌಲ್ಯ ಶೇ. 2ರಷ್ಟು ಕುಸಿತವಾಗಿದೆ. ಆದರೆ, ಗುಜರಾತ್ ಟೈಟಾನ್ಸ್ ಬ್ರಾಂಡ್ ಮೌಲ್ಯ ಶೇ. 2ರಷ್ಟು ಹೆಚ್ಚಳವಾಗಿರುವುದು ಮಾತ್ರ ಐಪಿಎಲ್ ಅಭಿಮಾನಿಗಳಿಗೆ ಖುಷಿ ತಂದಿದೆ.

Share.
Leave A Reply