ಬೆಂಗಳೂರು, ಫೆ.10: ಎಲ್ಲರೂ ಬಾಯಿ ಮುಚ್ಚಿಕೊಂಡು ಇದ್ದರೆ ಒಳ್ಳೆಯದು ಎಂದು ಮಲ್ಲಿಕಾರ್ಜುನ ಖರ್ಗೆ ಸಾಹೇಬರು ಹೇಳಿದ್ದಾರೆ. ಅದನ್ನು ನಾವು ಪಾಲನೆ ಮಾಡಬೇಕು ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿದರು.
ದೆಹಲಿಗೆ ತೆರಳುವ ಮುನ್ನ ಸದಾಶಿವನಗರದ ನಿವಾಸದ ಬಳಿ ಸುದ್ದಿಗಾರರ ಪ್ರಶ್ನೆಗಳಿಗೆ ಅವರು ಪ್ರತಿಕ್ರಿಯೆ ನೀಡಿ, ಅಧಿಕಾರ ಹಂಚಿಕೆ ಕುರಿತು ನಾಯಕರ ಹೇಳಿಕೆ ಬಗ್ಗೆ ಮಾತನಾಡಿದ ಅವರು, ನನ್ನ ಪರ, ವಿರುದ್ಧ ಹೇಳಿಕೆಗಳನ್ನು ಶಾಸಕರು, ಮಂತ್ರಿಗಳು, ಯಾರೇ ನೀಡುತ್ತಿರಬಹುದು. ಈ ಹೇಳಿಕೆಗಳು ಪಕ್ಷಕ್ಕೆ ಹಾನಿ ಮಾಡುವ ಹೇಳಿಕೆಗಳೇ ಹೊರತು ಪಕ್ಷಕ್ಕೆ ಒಳ್ಳೆಯದನ್ನು ಮಾಡುವ ಹೇಳಿಕೆಗಳಲ್ಲ ಎಂದಿದ್ದಾರೆ.
ಇಂದು ಸಂಜೆ 4 ಗಂಟೆಗೆ ಎಐಸಿಸಿಯಲ್ಲಿ ಸಭೆಯಿದೆ. ವಿವಿಧ ಚುನಾವಣೆಗಳು ಹಾಗೂ ರಾಜಕೀಯ ಪರಿಸ್ಥಿತಿ ಬಗ್ಗೆ ಚರ್ಚೆ ನಡೆಸಲಾಗುವುದು. ಚುನಾವಣಾ ದಿನಾಂಕಗಳು ಘೋಷಣೆಯಾಗುವ ಸಾಧ್ಯತೆಯಿದೆ. ಆದ ಕಾರಣಕ್ಕೆ ನನ್ನನ್ನು ಚರ್ಚೆ ನಡೆಸಲು ಕರೆದಿದ್ದಾರೆ. ನಾನು ಹೋಗುತ್ತಿದ್ದೇನೆ ಎಂದರು.
ಪ್ರತಿದಿನ ಶುಭದಿನ :
ಕೆಲವು ಕಾಂಗ್ರೆಸ್ ನಾಯಕರು ನೀವು ಶುಭಸುದ್ದಿ ತರುವಿರಿ ಎಂಬ ನಿರೀಕ್ಷೆಯಲ್ಲಿದ್ದಾರೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಪ್ರತಿದಿನವೂ ನನಗೆ ಶುಭದಿನ, ಶುಭ ಜೀವನ, ಶುಭ ಪ್ರಾರಂಭ, ಯಶಸ್ಸಿನ ದಿನ, ಪ್ರತಿದಿನವೂ ಕಷ್ಟದ ದಿನವೇ. ಪ್ರತಿದಿನವೂ ಏನೂ ಸುಲಭವಾಗಿ ಇರುವುದಿಲ್ಲ. ಜನರ ಕಷ್ಟಗಳನ್ನು ಬಗೆಹರಸಿಬೇಕಾದರೆ ಕಷ್ಟ ಕಾರ್ಪಣ್ಯಗಳು, ಅಡಚಣೆಗಳು, ತೊಡಕುಗಳು ಇದ್ದೇ ಇರುತ್ತವೆ. ಟೀಕೆಗಳು ಬರುತ್ತಲೇ ಇರುತ್ತವೆ. ಟೀಕೆಗಳನ್ನು ಎದುರಿಸಲೇ ಬೇಕು. ನಮ್ಮ ಕೆಲಸವನ್ನು ಮುಂದುವರೆಸಲೇ ಬೇಕು ಎಂದರು.
ನಾನು, ಸಿದ್ದರಾಮಯ್ಯ ಕದ್ದುಮುಚ್ಚಿ ಮಾತನಾಡಿಕೊಂಡಿಲ್ಲ :
ಹೈಕಮಾಂಡ್ ಗೊಂದಲವನ್ನು ಬೇಗ ಇತ್ಯರ್ಥ ಮಾಡಬೇಕು ಎನ್ನುವ ಬಗ್ಗೆ ಕೇಳಿದಾಗ, ನನಗೆ ಯಾವ ಗೊಂದಲವೂ ಇಲ್ಲ. ಗೊಂದಲ ಬೇರೆಯವರಿಗೆ ಇರಬಹುದು. ನಾನು ಹಾಗೂ ಸಿದ್ದರಾಮಯ್ಯ ಅವರು ಏನು ಮಾತನಾಡಿದ್ದೇವೆ ಎಂಬುದು ನಮಗೆ ಗೊತ್ತು. ನಾವಿಬ್ಬರು ಕದ್ದು ಮುಚ್ಚಿ ಮಾತನಾಡಿಕೊಂಡಿಲ್ಲ. ನಮ್ಮ ಪಕ್ಷದ ವರಿಷ್ಠರು ಎಲ್ಲಾ ಸೇರಿ ಮಾತನಾಡಿಕೊಂಡಿದ್ದೇವೆ. ಬೇರೆಯವರೆಲ್ಲ ಇದಕ್ಕೆ ಟೆನ್ಷನ್ ತೆಗೆದುಕೊಳ್ಳುವುದು, ಹೇಳಿಕೆ ಕೊಡುವುದರಿಂದ ಯಾರಿಗೂ ಪ್ರಯೋಜನವಾಗುವುದಿಲ್ಲ ಎಂದು ಹೇಳಿದರು.
