ಬೆಂಗಳೂರು, ಫೆ.12: ರಾಜ್ಯದಲ್ಲಿ ಸಿಎಂ ಬದಲಾವಣೆ ಕೋಲಾಹಲ ಮತ್ತೆ ತೀವ್ರಗೊಂಡಿದೆ. ಈ ನಡುವೆ ಡಿಸಿಎಂ ಡಿಕೆ ಶಿವಕುಮಾರ್ ಅವರು ದೆಹಲಿಯಲ್ಲಿ ಸಂಸದೆ ಪ್ರಿಯಾಂಕಾ ಗಾಂಧಿ ಅವರನ್ನು ಭೇಟಿ ಮಾಡಿ ಮಾತನಾಡಿದ್ದಾರೆ. ಸೋನಿಯಾ ಗಾಂಧಿ ಅವರ ನಿವಾಸಕ್ಕೆ ತೆರಳಿದ್ದ ಡಿ.ಕೆ. ಶಿವಕುಮಾರ್ ಅಸ್ಸಾಂ ಚುನಾವಣೆಗೆ ಸಂಬಂಧಿಸಿದಂತೆ ಚರ್ಚೆ ನಡೆಸಿರುವುದಾಗಿ ತಿಳಿಸಿದ್ದಾರೆ. ಆದರೆ, ಈ ವೇಳೆ ಆಡಿರುವ ಮಾತುಗಳು ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ.

ದೆಹಲಿಯ ಜನ್ ಪಥ್ ರಸ್ತೆಯಲ್ಲಿರುವ ಸೋನಿಯಾ ಗಾಂಧಿ ನಿವಾಸದಲ್ಲಿ ಪ್ರಿಯಾಂಕ ಗಾಂಧಿಯನ್ನು ಭೇಟಿ ಮಾಡಿದ ಡಿ.ಕೆ. ಶಿವಕುಮಾರ್ ಸುಮಾರು ಅರ್ಧ ಗಂಟೆ ಕಾಲ ಮಾತುಕತೆ ನಡೆಸಿದ್ದಾರೆ. ನಂತರ ಸೋನಿಯಾ ಗಾಂಧಿ ನಿವಾಸದ ಬಳಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ, ʼದೆಹಲಿಗೆ ಬಂದ ಮೇಲೆ ಎಲ್ಲಾ ವಿಚಾರ ಮಾತನಾಡಬೇಕು, ಅದನ್ನ ಮಾತನಾಡಿದ್ದೀನಿ. ಆದರೆ ಯಾರ್ಯಾರ ಹತ್ತಿರ ಏನೇನು ಮಾತನಾಡಿದೆ ಅಂತ ಬಹಿರಂಗವಾಗಿ ಹೇಳೋಕೆ ಆಗಲ್ಲ. ಒಳಗೆ ನಡೆದ ಚರ್ಚೆಯನ್ನು ಹೊರಗೆ ಹೇಳುವುದು ಸರಿಯಲ್ಲ ಎಂದಿದ್ದಾರೆ.

ನಾನು ಇಲ್ಲಿಗೆ ಬಂದಿರೋದು ರಾಜಕಾರಣ ಮಾಡೋಕೆ, ಸುಮ್ಮನೆ ಗಾಳಿ ಕುಡಿದು ಹೋಗೋದಿಕ್ಕೆ ಅಲ್ಲ. ವರಿಷ್ಠರ ಬಳಿ ಏನು ಮಾತನಾಡಬೇಕೋ ಅದನ್ನ ಮಾತನಾಡಿದ್ದೀನಿ. ಎಲ್ಲದಕ್ಕೂ ಕಾಲ ಉತ್ತರ ಕೊಡುತ್ತೆ ಎನ್ನುವ ಮೂಲಕ ಕುರ್ಚಿ ಕದನದ ಬಗ್ಗೆ ಪರೋಕ್ಷವಾಗಿ ಸುಳಿವು ನೀಡಿದರು.

ಡಿ.ಕೆ. ಶಿವಕುಮಾರ್ ಇಂದು ಆರಂಭದಲ್ಲಿ ಪ್ರಿಯಾಂಕಾ ಗಾಂಧಿ, ರಾಹುಲ್ ಗಾಂಧಿ ಮತ್ತು ಸೋನಿಯಾ ಗಾಂಧಿಯವರನ್ನು ಭೇಟಿ ಮಾಡಿ ಪ್ರತ್ಯೇಕವಾಗಿ ಚರ್ಚಿಸಿದ್ದಾರೆ. ಡಿಕೆಶಿ ಪ್ರಸ್ತಾಪಕ್ಕೆ ಸೋನಿಯಾ ಮತ್ತು ರಾಹುಲ್ ಗಾಂಧಿ ಏನು ಉತ್ತರಿಸಿದ್ದಾರೆ? ಸಿಎಂ ಸಿದ್ದರಾಮಯ್ಯ ಅವರಿಗೆ ಸಂದೇಶ ರವಾನೆಯಾಗಿದೆಯಾ? ಸದ್ಯಕ್ಕೆ ಯಥಾಸ್ಥಿತಿ ಕಾಪಾಡಿಕೊಳ್ಳಲು ಸೂಚಿಸಿದ್ದಾರಾ ಎಂಬುದು ಸದ್ಯದ ಕುತೂಹಲವಾಗಿದೆ.

ಮಲ್ಲಿಕಾರ್ಜುನ್‌ ಖರ್ಗೆ ಹಾಗೂ ಕೆ.ಸಿ.ವೇಣುಗೋಪಾಲ್ ಭೇಟಿ :

ನಿನ್ನೆ ರಾತ್ರಿ ದೆಹಲಿಯಲ್ಲಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಅವರನ್ನು ಡಿಕೆ ಬ್ರದರ್ಸ್‌ ಭೇಟಿ ಮಾಡಿದ್ದಾರೆ. ಸಹೋದರರಿಬ್ಬರು ಖರ್ಗೆ ಮತ್ತು ವೇಣುಗೋಪಾಲ್ ಅವರೊಂದಿಗೆ ಮುಚ್ಚಿದ ಬಾಗಿಲಿನ ಸಭೆ ನಡೆಸಿ ವಿವಿಧ ವಿಷಯಗಳ ಕುರಿತು ಪ್ರತ್ಯೇಕವಾಗಿ ಸುಮಾರು 1 ಗಂಟೆ ಕಾಲ ಚರ್ಚೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.

Share.
Leave A Reply